ದಿಗ್ವಿಜಯ್‌ ಸಿಂಗ್‌ ಹೇಳಿಕೆಯ ನಡುವೆ, ಪುಲ್ವಾಮಾ ನೆಲದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ರಾಹುಲ್‌ ಗಾಂಧಿ!

By Santosh NaikFirst Published Jan 28, 2023, 5:05 PM IST
Highlights

ಜನವರಿ 23 ರಂದು ಪುಲ್ವಾಮಾ ದಾಳಿ ಹಾಗೂ 2016ರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌  ಕುರಿತಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್ ವಿವಾದಾತ್ಮಕ ಮಾತುಗಳನ್ನಾಡಿದ್ದರು. ಇದರ ಬೆನ್ನಲ್ಲಿಯೇ ಶನಿವಾರ ರಾಹುಲ್‌ ಗಾಂಧಿ ಪುಲ್ವಾಮಾಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ನವದೆಹಲಿ (ಜ.28): 2019ರಲ್ಲಿ ಸಂಭವಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಧ ಯೋಧರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯ ಸಮಯದಲ್ಲಿ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್‌ ದಾಳಿಯ ಕುರಿತು ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದ್ವಿಗ್ವಿಜಯ್‌ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆಯ ಬಳಿಕ ರಾಹುಲ್‌ ಗಾಂಧಿ ಭೇಟಿ ನೀಡಿರುವುದು ವಿಶೇಷವಾಗಿದೆ. ಭಾರತ್‌ ಜೋಡೋ ಯಾತ್ರೆಗಾಗಿ ಜಮ್ಮು ಕಾಶ್ಮೀರದಲ್ಲಿ ರಾಹುಲ್‌ ಗಾಂಧಿ, ಪುಲ್ವಾಮಾದಲ್ಲಿ ಸೈನಿಕರ ನೆತ್ತರು ಹರಿದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಹೂವುಗಳನ್ನು ಇಡುವ ಮೂಲಕ ನಮನ ಸಲ್ಲಿಸಿದ್ದರು. 2019ರ ಫೆಬ್ರವರಿ 14 ರಂದು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯ 40 ಯೋಧರು ಹುತಾತ್ಮರಾಗಿದ್ದರು. ಅವರಿಗೆ ರಾಹುಲ್‌ ಗಾಂಧಿ ಗೌರವ ಸಲ್ಲಿಸುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

उस मिट्टी को नमन, जहां पुलवामा हमले के वीर शहीदों का खून शामिल है।

आज के दौरान जी ने पुलवामा हमले में शहीद हुए वीर जवानों को श्रद्धांजलि अर्पित की। pic.twitter.com/OykL0ygOCb

— Congress (@INCIndia)


'ಪುಲ್ವಾಮಾ ದಾಳಿಯ ವೇಳೆ ನಮ್ಮ ಹೆಮ್ಮೆಯ ಯೋಧರ ನೆತ್ತರು ಚೆಲ್ಲಿದ್ದ ಈ ಮಣ್ಣಿಗೆ ನಮ್ಮ ನಮನ. ಭಾರತ್‌ ಜೋಡೋ ಯಾತ್ರೆಯ ವೇಳೆ ಇಂದು ರಾಹುಲ್‌ ಗಾಂಧಿ ಪುಲ್ವಾಮಾ ದಾಳಿಯ ವೇಳೆ ಹುತಾತ್ಮರಾದ ಹೆಮ್ಮೆಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು' ಎಂದು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ತನ್ನ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಸೋಮವಾರವಷ್ಟೇ ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌, ಪುಲ್ವಾಮಾ ದಾಳಿಯ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದು ದೊಡ್ಡ ವಿವಾದವಾಗಿದ್ದರಿಂದ ಸ್ವತಃ ರಾಹುಲ್‌ ಗಾಂಧಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಜಮ್ಮುವಿನಲ್ಲಿ ನಡೆದ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ವೇದಿಕೆಯಲ್ಲಿಯೇ, ಹಾಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುಲ್ವಾಮಾ ದಾಳಿ ಹಾಗೂ ಸರ್ಜಿಕಲ್‌ ಸ್ಟ್ರೈಕ್‌ ವಿಚಾರವಾಗಿ ಟಾರ್ಗೆಟ್‌ ಮಾಡಿದ್ದರು.

ನಮ್ಮ 40 ಸಿಆರ್‌ಪಿಎಫ್‌ ಸೈನಿಕರು ಪುಲ್ವಾಮಾದಲ್ಲಿ ಹುತಾತ್ಮರಾದರು. ಸ್ವತಃ ಪ್ರಧಾನಿ ಮೋದಿಗೆ ಅವರಿಗೆ ಸಿಆರ್‌ಪಿಎಫ್‌ ಅಧಿಕಾರಿಗಳು, ಸೈನಿಕರನ್ನು ಏರ್‌ಲಿಫ್ಟ್‌ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಪ್ರಧಾನಿ ಮೋದಿ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಇಂಥ ದೊಡ್ಡ ಪ್ರಮಾದವಾಗಲು ಹೇಗೆ ಸಾಧ್ಯ? ಇಲ್ಲಿಯವರೆಗೂ ಪುಲ್ವಾಮಾ ವಿಚಾರವಾಗಿ ಸಂಸತ್ತಿನಲ್ಲಿ ಯಾವುದೇ ವರದಿ ದಾಖಲಾಗಿಲ್ಲ' ಎಂದು ದಿಗ್ವಿಜಯ್‌ ಸಿಂಗ್‌ ಹೇಳಿದ್ದರು.

ಅವರು (ಕೇಂದ್ರ ಸರ್ಕಾರ) ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಆದರೆ, ಇದಕ್ಕಾಗಿ ಯಾವುದೇ ಸಾಕ್ಷ್ಯವನ್ನು ನೀಡೋದಿಲ್ಲ. ಬರೀ ಸುಳ್ಳುಗಳನ್ನು ಹಂಚುತ್ತಿದ್ದಾರೆ ಎಂದು 75 ವರ್ಷದ ರಾಜಕಾರಣಿ ಮಾತನಾಡಿದ್ದರು.

ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ನಿಮ್ಮಲ್ಲೇನಿದೆ ಪ್ರೂಫ್‌, ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಪ್ರಶ್ನೆ!

ಭಾರತೀಯ ಸೇನೆಯ ಕುರಿತಾಗಿ, ಸೇನಾ ಕಾರ್ಯಚರಣೆಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ ಎಂದಿನಂತೆ ತಿರುಗಿ ಬಿದ್ದಿತ್ತು. ಇನ್ನು ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಇದು ದಿಗ್ವಿಜಯ್‌ ಸಿಂಗ್‌ ಅವರ ವೈಯಕ್ತಿಕ ಹೇಳಿಕೆ. ಇದು ಕಾಂಗ್ರೆಸ್‌ ಪಕ್ಷದ ಹೇಳಿಕೆಯಲ್ಲ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಪ್ರಶ್ನೆ ಮಾಡುವ ನೀವು, ಪ್ರಧಾನಿ ಮೋದಿಗೆ ಯಾವಾಗಲಾದರೂ ಪ್ರಶ್ನೆ ಮಾಡಿದ್ದೀರಾ ಎಂದು ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ್ದರು.

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಹುಲ್‌ ಗಾಂಧಿ, ಹಿರಿಯ ನಾಯಕ ಹೇಳಿರುವುದು ಅವರ ವೈಯಕ್ತಿಕ ಹೇಳಿಕೆ ಪಕ್ಷದ್ದಲ್ಲ. ಸೇನಾ ಕಾರ್ಯಾಚರಣೆಗೆ ಯಾವುದೇ ಸಾಕ್ಷ್ಯಗಳು ಬೇಕಿಲ್ಲ. ಭಾರತೀಯ ಸೇನೆಯ ಬಗ್ಗೆ ನಮಗೆ ಸಂಪೂರ್ಣವಾಗಿ ನಂಬಿಕೆ ಇದೆ ಎಂದು ಹೇಳಿದ್ದರು.

click me!