
ತನ್ನ ವಂಶವೃಕ್ಷವನ್ನು ಬೆಳೆಸುವ ಕನಸು ಬಹುತೇಕರದ್ದು, ಆದರೆ ಕೆಲವರಿಗೆ ಈ ಯೋಗ ಇರುವುದಿಲ್ಲ. ಆದರೆ ಈ ಆಧುನಿಕ ಯುಗದಲ್ಲಿ ಮಕ್ಕಳನ್ನು ಪಡೆಯಲು ಬಹುತೇಕರು ಇಷ್ಟ ಪಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯವೇ. ಈ ಮಧ್ಯೆ ತಾಯಿಯೊಬ್ಬರು ತನ್ನ ಮಗ ಹಾಗೂ ಸೊಸೆಯ ವಿರುದ್ಧ ಮಕ್ಕಳು ಮಾಡಿಕೊಳ್ಳುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ ಐದು ಕೋಟಿ ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ. ತನ್ನ ವಂಶದ ಅಂತ್ಯವಾಗುತ್ತಿದೆ ಹಾಗೂ ಇದೇ ಕಾರಣಕ್ಕೆ ಜನರು ತನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದುಃಖಿತಳಾಗಿದ್ದು, ಮಗ ಹಾಗೂ ಆತನ ಪತ್ನಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಹರಿದ್ವಾರದ ಜಿಲ್ಲಾ ನ್ಯಾಯಾಲಯದಲ್ಲಿ (Haridwar District Court) ಈ ವಿಚಿತ್ರ ಪ್ರಕರಣ ದಾಖಲಾಗಿದೆ. ತಾಯಿಯೊಬ್ಬರು ತನ್ನ ಮಗ ಮತ್ತು ಸೊಸೆ ಮಗು ಮಾಡಿಕೊಳ್ಳದೇ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವರ್ಷದೊಳಗೆ ತನಗೆ ಮೊಮ್ಮಗುವಿನ ಸಂತೋಷವನ್ನು ನೀಡುವಂತೆ ದಂಪತಿಗೆ ನಿರ್ದೇಶನ ನೀಡುವಂತೆ ದೂರುದಾರರು ಕೋರಿದ್ದಾರೆ. ವಿಫಲವಾದರೆ ದಂಪತಿ ಇವರಿಗೆ ₹5 ಕೋಟಿ ಪರಿಹಾರ ನೀಡಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೇ ತಮ್ಮ ಸೊಸೆಯ ತಂದೆ-ತಾಯಿ ಮತ್ತು ಸಹೋದರರನ್ನು ಸಹ ಈ ಮೊಕದ್ದಮೆಯಲ್ಲಿ ಪಾರ್ಟಿಯಾಗಿ ಸೇರಿಸಲಾಗಿದೆ.
ಒಟ್ಟಿಗೆ ವಿಮಾನ ಹಾರಿಸಿದ ಅಮ್ಮ ಮಗ ಪೈಲಟ್ ಜೋಡಿ : ವಿಡಿಯೋ ವೈರಲ್
ಮಹಿಳೆಯ ದೂರಿನ ಪ್ರಕಾರ, ಆಕಗೆ ಏಕಮಾತ್ರ ಪುತ್ರನಿದ್ದು, ಆತ ಪ್ರಸ್ತುತ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದಾರೆ. ಎಲ್ಲ ತಾಯಿಯಂತೆ ಮಹಿಳೆ ಈ ಮಗನನ್ನು ತುಂಬಾ ಪ್ರೀತಿಯಿಂದ ಬೆಳೆಸಿದಳು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅವನು ಶಿಕ್ಷಣ ಪಡೆಯಲು ಸಹಾಯ ಮಾಡಿದಳು. ನಂತರ 2016ರಲ್ಲಿ ಇವರು ತಮ್ಮ ಪುತ್ರನಿಗೆ ವಿವಾಹವನ್ನು ಮಾಡಿದ್ದರು. ಮದುವೆಯ ನಂತರ ದಂಪತಿ (ಮಗ ಸೊಸೆ) ಯನ್ನು ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಕಳುಹಿಸಿದ್ದರು. ಅಲ್ಲದೇ ತಮ್ಮ ಮಧುಚಂದ್ರವನ್ನು ಖುಷಿಯಿಂದ ಕಳೆಯಲು ಈ ಮಗ ಸೊಸೆಗೆ ತಾಯಿ ಐದು ಲಕ್ಷ ಹಣವನ್ನು ಕೂಡ ನೀಡಿದ್ದರು. ಅಲ್ಲದೇ ತನ್ನ ಪುತ್ರನನ್ನು ನೋಡಿಕೊಳ್ಳಲು ಸುಮಾರು 2 ಕೋಟಿ ಖರ್ಚು ಮಾಡಿದ್ದಾಗಿ ಈ ಮಹಿಳೆ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಅಮೆರಿಕಾದಲ್ಲಿ(USA) ಪೈಲಟ್ ತರಬೇತಿ ಪಡೆಯಲು 35 ಲಕ್ಷ ವೆಚ್ಚ ಮಾಡಿದ್ದೇನೆ. ಇದಲ್ಲದೇ ಅಮೆರಿಕಾದಲ್ಲಿ ಜೀವಿಸಲು 20 ಹಣವನ್ನು ವ್ಯಯಿಸಿದ್ದೇನೆ. ಅಲ್ಲದೇ ತಮ್ಮ ಮಗನ ಖುಷಿಗಾಗಿ ಪಿಎನ್‌ಬಿ ಬ್ಯಾಂಕ್‌ನಿಂದ 65 ಲಕ್ಷ ರೂ ಸಾಲ ಮಾಡಿ Audi A6 ಕಾರನ್ನು ಖರೀದಿಸಿ ನೀಡಿದ್ದೇನೆ. ಆದಾಗ್ಯೂ, ದಂಪತಿಗಳು (ಮಗ ಸೊಸೆ) ಸೊಸೆಯ ಕುಟುಂಬದ ಸದಸ್ಯರ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಅವರು ತಮ್ಮ ಮಗನ ಸಂಬಳದ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಮೊಕದ್ದಮೆಯಲ್ಲಿ ತಾಯಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸೊಸೆಯ ಕಡೆಯವರು ಜಗಳವಾಡುತ್ತಿದ್ದು ತನ್ನ ಹಾಗೂ ತನ್ನ ಪತಿಯ ವಿರುದ್ಧ ಸುಳ್ಳು ಕೇಸುಗಳನ್ನು ಹಾಕುವುದಾಗಿ ಬೆದರಿಸಲು ಆರಂಭಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಮಗುವನ್ನು ಹೆಚ್ಚಾಗಿ ಎಡಗೈಯಲ್ಲಿ ಎತ್ತಲು ಕಾರಣ ಏನು?
ಈ ಕಾರಣದಿಂದಾಗಿ ಅವರು(ಮಗ ಸೊಸೆ) ಇವರ ಆಸ್ತಿಯಿಂದ ಇವರನ್ನು ಹೊರಹಾಕುವಂತೆ ಪತ್ರಿಕೆಯಲ್ಲಿ ಜಾಹೀರಾತೊಂದನ್ನು ಪ್ರಕಟಿಸಿದರು. ಬಳಿಕ ಹೈದರಾಬಾದ್‌ಗೆ (Hyderabad) ತೆರಳಲು ಸಂಚು ರೂಪಿಸಿದರು ಇದಾದ ಬಳಿಕ ಮಗ ಸೊಸೆ ಇಬ್ಬರು ತನ್ನ ಹಾಗೂ ತನ್ನ ಪತಿಯೊಂದಿಗೆ ಯಾವುದೇ ಮಾತುಕತೆಯನ್ನು ನಿಲ್ಲಿಸಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ. ಇದರ ನಂತರ, ದೂರುದಾರ ಮಹಿಳೆ ದಂಪತಿಗೆ (ಮಗ ಸೊಸೆಗೆ) ಮೊಮ್ಮಕ್ಕಳನ್ನು ಹೊಂದುವಂತೆ ಒತ್ತಾಯಿಸಿದರು ಆದರೆ ದಂಪತಿಗಳು ತಾವು ಬೇರೆ ಬೇರೆಯಾಗುತ್ತಿರುವುದಾಗಿ ಹೇಳಲು ಆರಂಭಿಸಿದರು ಎಂದು ಮನವಿಯಲ್ಲಿ ಹೇಳಲಾಗಿದೆ. ಮೊಮ್ಮಕ್ಕಳನ್ನು ಪಡೆಯದೇ ಇರುವುದರಿಂದ ತಾವು ಮಾನಸಿಕ ಕಿರಿಕಿರಿ ಅನುಭವಿಸುತ್ತಿರುವುದಾಗಿ ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ತಮ್ಮ ಪುತ್ರನಿಗೆ ಡಿಸೆಂಬರ್ 9, 2016 ರ ಮದುವೆಯಾಗಿದ್ದು, ನಂತರ ಮೇ 6, 2022 ರವರೆಗೆ ಹಲವು ವರ್ಷಗಳು ಕಳೆದರೂ ಅವರು ಮಕ್ಕಳ ಬಗ್ಗೆ ಚಿಂತೆ ಮಾಡಿಲ್ಲ. ಹೀಗಾಗಿ ತಾವು ಮೊಮ್ಮಗ ಮತ್ತು ಮೊಮ್ಮಗಳ ಸಂತೋಷದಿಂದ ವಂಚಿತರಾಗಿರುವುದಾಗಿ ಹಾಗೂ ದಂಪತಿಗಳ ಕೃತ್ಯಗಳಿಂದ ತನ್ನ ವಂಶವೇ ಕೊನೆಗೊಳ್ಳುತ್ತದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಇದರಿಂದಾಗಿ ಅರ್ಜಿದಾರರು ಅಪಾರವಾದ ಮಾನಸಿಕ ನೋವನ್ನು ಅನುಭವಿಸುತ್ತಿದ್ದಾರೆ, ಅದನ್ನು ಯಾವುದರಿಂದಲೂ ಸರಿದೂಗಿಸಲು ಸಾಧ್ಯವಿಲ್ಲ. ಆದ್ದರಿಂದ, ಅರ್ಜಿದಾರರಿಗೆ ಮತ್ತು ಅವರ ಪತಿಗೆ ಒಂದು ವರ್ಷದೊಳಗೆ ಮೊಮ್ಮಗ/ಮೊಮ್ಮಗಳುನ್ನು (grandchild) ನೀಡುವಂತೆ ಹಾಗೂ ದಂಪತಿಯ ವೈವಾಹಿಕ ಜೀವನದಲ್ಲಿ ಮಧ್ಯಪ್ರವೇಶಿಸದಂತೆ ಸೊಸೆಯ ಕುಟುಂಬಕ್ಕೆ ನಿರ್ದೇಶನವನ್ನೂ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿಯಲ್ಲಿ ಕೋರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ