
ಭೋಪಾಲ್(ಜೂ.22): ಕೋತಿ ಕಂಡ ತಕ್ಷಣ ಮಾಹಿತಿ ನೀಡಬೇಕು, ಕೋತಿ ಹಿಡಿದುಕೊಟ್ಟವರಿಗೆ 21,000 ರೂಪಾಯಿ ಬಹುಮಾನ. ಈ ಕೋತಿ ಕುರಿತು ಎಚ್ಚರ ವಹಿಸಿ ಅನ್ನೋ ಫಲಕ ಪಟ್ಟಣದಲ್ಲಿ ಅಂಟಿಸಲಾಗಿತ್ತು. ವ್ಯಾಟ್ಸ್ಆ್ಯಪ್, ಮಸೇಜ್ ಮೂಲಕ ಸಂದೇಶವನ್ನು ಜನರಿಗೆ ತಲುಪಿಸಲಾಗಿತ್ತು. ವಿಶೇಷ ತಂಡ ರಚನೆ ಮಾಡಿ ಕೋತಿ ಸೆರೆಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ ಪ್ರಯತ್ನ, ಹಲವು ಇಲಾಖೆಗಳ ನೆರವಿನೊಂದಿಗೆ ಕೊನೆಗೂ ಮೋಸ್ಟ್ ವಾಂಟೆಡ್ ಕೋತಿಯನ್ನು ಸೆರೆ ಹಿಡಿಯಲಾಗಿದೆ. ಹೌದು, ಮಧ್ಯಪ್ರದೇಶ ಉಜ್ಜಯನಿ ಜಿಲ್ಲೆಯ ರಾಜಘಡ ಪಟ್ಟಣ ಈ ಮೋಸ್ಟ್ ವಾಂಟೆಡ್ ಕೋತಿಯನ್ನು ಬಂಧಿಸಲಾಗಿದೆ.
ಈ ಕೋತಿಯ ತಲೆಗೆ ಅಧಿಕಾರಿಗಳು 21,000 ರೂಪಾಯಿ ಬಹುಮಾನ ಘೋಷಿಸಿದ್ದರು. ರಾಜಘಡ ಪಟ್ಟಣದಲ್ಲಿ ಈ ಕೋತಿ ಬರೋಬ್ಬರಿ 20 ಮಂದಿ ಮೇಲೆ ದಾಳಿ ಮಾಡಿತ್ತು. ಇದರಲ್ಲಿ ಹಲವರ ತಲೆಗೆ 5 ರಿಂದ 10 ಹೊಲಿಗೆ ಹಾಕಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ದಿಡೀರ್ ಪ್ರತ್ಯಕ್ಷಗೊಳ್ಳುವ ಈ ಕೋತಿ ಮನುಷ್ಯರ ಮೇಲೆ ದಾಳಿ ಮಾಡುತ್ತಿತ್ತು. ಹೀಗಾಗಿ ರಾಜಘಡ ಪಟ್ಟಣದಲ್ಲಿ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಅರಣ್ಯಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು.
ಮೃಗಾಲಯದ ಬೋನ್‌ನಿಂದ ಎಸ್ಕೇಪ್ ಆದ ಹನುಮಾನ್ ಕೋತಿ: ಝೂ ಒಳಗಿಂದ್ಲೇ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಮಂಕಿ!
ಈ ಕುರಿತು ಅಧಿಕಾರಿಗಳೊಂದಿಗೆ ಮುನ್ಸಿಪಾಲಿಟಿ ಚೇರ್ಮೆನ್ ವಿನೋದ್ ಸಾಹು ಸಭೆ ನಡೆಸಿದ್ದರು. ಬಳಿಕ ಮಂಕಿ ಹಿಡಿದುಕೊಟ್ಟವರಿಗೆ 21,00 ರೂಪಾಯಿ ಬಹುಮಾನ ಘೋಷಿಸಿದ್ದರು. ಬಳಿಕ ಪ್ರಾಣಿ ರಕ್ಷಣಾ ತಂಡಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಈ ಕೋತಿಯನ್ನು ಪತ್ತೆ ಹಚ್ಚಿ ಹಿಡಿಯಲು ಪ್ರಾಣಿ ರಕ್ಷಣಾ ತಂಡ ರಾಜಘಡ ಪಟ್ಟಣಕ್ಕೆ ಆಗಮಿಸಿತ್ತು.
ಡ್ರೋನ್ ಸಹಾಯದಿಂದ ಕೋತಿಯನ್ನು ಪತ್ತೆ ಹಚ್ಚಲು ರಕ್ಷಣಾ ತಂಡ ಸತತ ಕಾರ್ಯಾಚರಣೆ ನಡೆಸಿತ್ತು. ಸ್ಥಳೀಯರ ನೆರವು ಪಡೆದ ರಕ್ಷಣಾ ತಂಡ ಡ್ರೋನ್ ಮೂಲಕ ಮಂಕಿಯನ್ನು ಪತ್ತೆ ಹಚ್ಚಿತು. ಬಳಿಕ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿಯಲಾಗಿದೆ. ಕೋತಿ ಸೆರೆ ಸಿಕ್ಕ ಬೆನ್ನಲ್ಲೇ ವಿನೋದ್ ಸಾಹು ಸುದ್ದಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಕೋತಿ ತಲೆಗೆ ಘೋಷಿಸಿದ್ದ 21,000 ರೂಪಾಯಿ ಬಹುಮಾನವನ್ನು ರಕ್ಷಣಾ ತಂಡಕ್ಕೆ ನೀಡಲಾಗುತ್ತದೆ ಎಂದಿದ್ದಾರೆ.
ಬಟ್ಟೆ ಒಣಗಿಸಲು ಹೋದಾಗ ಅಟ್ಟಿಸಿಕೊಂಡು ಬಂದ ಕೋತಿ : ಕಟ್ಟಡದಿಂದ ಬಿದ್ದು ಯುವತಿ ಸಾವು
ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದ ತಂಡ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಡ್ರೋನ್ ನರೆವಿನಿಂದ ಮೊದಲು ಕೋತಿಯನ್ನು ಪತ್ತೆ ಹಚ್ಚಲಾಯಿತು. ಅಪಾಯಾಕಾರಿ ಕೋತಿಯಾಗಿದ್ದ ಕಾರಣ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಕೋತಿಯನ್ನು ಬೇರೆ ವಲಯದ ದಟ್ಟ ಅರಣ್ಯದಲ್ಲಿ ಬಿಡಲಾಗುತ್ತದೆ. ನಾಡಿನಿಂದ ದೂರದಲ್ಲಿರುವ ಅರಣ್ಯದಲ್ಲಿ ಈ ಕೋತಿಯನ್ನು ಬಿಡಲಾಗುತ್ತದೆ.
ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಕರ್ನಾಟಕದ ಕಂಪ್ಲಿಯ ವಿನಾಯಕನಗರದ ನಿವಾಸಿಗಳೂ ಕೋತಿ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಇಬ್ಬರು ಸ್ಥಳೀಯರ ಮೇಲೆ ಕೋತಿ ದಾಳಿ ನಡೆಸಿತ್ತು. ನಗರದ ಸುತ್ತಮುತ್ತಲಿನ ಮನೆಗಳ ಮೇಲೆ ಈ ಕೋತಿಗಳು ದಾಳಿ ನಡೆಸುತ್ತಿದ್ದು, ಇದರಿಂದ ನಗರದಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ಅಲ್ಲದೇ ಭಯದ ವಾತಾವರಣದಲ್ಲಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಜಾಗ್ರತೆ ವಹಿಸಿ ಕೂಡಲೇ ಕೋತಿಗಳನ್ನು ಸೆರೆ ಹಿಡಿದು ದೂರ ಸಾಗಿಸುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ