ತತ್ಕಾಲ್ ಟಿಕೆಟ್ ಬ್ಲಾಕ್ ದಂಧೆಗೆ ಬ್ರೇಕ್| ಗಂಟೆಗಟ್ಟಲೇ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಲಭ್ಯ| ರೈಲ್ವೆ ಟಿಕೆಟ್‌ನ 3 ಅಕ್ರಮ ಸಾಫ್ಟ್‌ವೇರ್‌ಗಳಿಗೆ ಅಂಕುಶ| 60 ಏಜೆಂಟರ ಬಂಧನ| ಇದರಿಂದ ತತ್ಕಾಲ್ ಟಿಕೆಟ್ ಹೆಚ್ಚು ಅವಧಿಗೆ ಇನ್ನು ಲಭ್ಯ
ನವದೆಹಲಿ[ಫೆ.19]: ಅಕ್ರಮವಾಗಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದ ಸಾಫ್ಟ್‌ವೇರ್‌ಗಳನ್ನು ಪತ್ತೆ ಮಾಡಿರುವ ರೈಲ್ವೆ ಇಲಾಖೆ, ಅವುಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಅಕ್ರಮವಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದ 60 ಏಜೆಂಟರನ್ನು ಬಂಧಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚು ಅವಧಿಗೆ ಹೆಚ್ಚು ತತ್ಕಾಲ್ ಟಿಕೆಟ್‌ಗಳು ಇನ್ನು ಲಭಿಸಲಿವೆ.
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಾನಿರ್ದೇಶಕ ಅರುಣ್ ಕುಮಾರ್ ಮಂಗಳವಾರ ಈ ಬಗ್ಗೆ ವಿವರಣೆ ನೀಡಿ, ‘ಅಕ್ರಮ ಸಾಫ್ಟ್‌ವೇರ್‌ಗಳಿಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಬುಕ್ ಆಗಿ ಖಾಲಿ ಆಗಿಬಿಡುತ್ತಿದ್ದ ತತ್ಕಾಲ್ ಟಿಕೆಟ್‌ಗಳು ಇನ್ನು ಮುಂದೆ ತಾಸುಗಟ್ಟಲೇ ಲಭ್ಯ ಇರಲಿವೆ’ ಎಂದರು.
‘ಎಎನ್‌ಎಂಎಸ್, ಎಂಎಸಿ ಹಾಗೂ ಜಾಗ್ವಾರ್ ಎಂಬ ಅಕ್ರಮ ಸಾಫ್ಟ್‌ವೇರ್‌ಗಳಿದ್ದವು. ಈ ಸಾಫ್ಟ್‌ವೇರ್ ಬಳಸಿ ಐಆರ್‌ಸಿಟಿಸಿಯ ಲಾಗಿನ್ ಕ್ಯಾಪ್ಕಾ, ಬುಕಿಂಗ್ ಕ್ಯಾಪ್ಕಾ ಹಾಗೂ ಒಟಿಪಿ ಇಲ್ಲದೇ ಟಿಕೆಟ್ ಬುಕ್ ಮಾಡಬಹುದಾಗಿತ್ತು. ಅಸಲಿ ಐಆರ್‌ಸಿಟಿಸಿ ಸಾಫ್ಟ್‌ವೇರ್‌ನಲ್ಲಿ ಒಂದು ಟಿಕೆಟ್ ಬುಕ್ ಮಾಡಲು ಸರಾಸರಿ 2.55 ನಿಮಿಷ ಬೇಕಾಗುತ್ತದೆ. ಆದರೆ ಅಕ್ರಮ ಸಾಫ್ಟ್‌ವೇರ್‌ನಲ್ಲಿ 1.48 ನಿಮಿಷ ಸಾಕಿತ್ತು. ಹೀಗಾಗಿ ಬೇಗ ಟಿಕೆಟ್‌ಗಳು ಖಾಲಿ ಆಗಿಬಿಡುತ್ತಿದ್ದವು’ ಎಂದು ಅವರು ಹೇಳಿದರು.
‘ಈಗ ಅಕ್ರಮ ಸಾಫ್ಟ್‌ವೇರ್‌ಗೆ ಅಂಕುಶ ಬಿದ್ದಿದೆ. ಇದರಿಂದ ತಾಸುಗಟ್ಟಲೇ ಇನ್ನು ತತ್ಕಾಲ್ ಟಿಕೆಟ್ ಲಭ್ಯ ಇರಲಿವೆ. ಉದಾಹರಣೆಗೆ ಅಕ್ರಮ ಸಾಫ್ಟ್‌ವೇರ್ ಚಾಲನೆಯಲ್ಲಿದ್ದ ವೇಳೆ 2019ರ ಅ.26ರಂದು ಎಲ್ಲ ಮಗಧ್ ಎಕ್ಸ್‌ಪ್ರೆಸ್ ತತ್ಕಾಲ್ ಟಿಕೆಟ್‌ಗಳು ಕೇಲವ 2 ನಿಮಿಷದಲ್ಲಿ ಬುಕ್ ಆದವು. ಆದರೆ ಸಾಫ್ಟ್‌ವೇರ್‌ಗೆ ಕಡಿವಾಣ ಹಾಕಿದ ನಂತರ ಅದೇ ಮಗಧ್ ಎಕ್ಸ್‌ಪ್ರೆಸ್ ರೈಲಿನ ತತ್ಕಾಲ್ ಟಿಕೆಟ್‌ಗಳು ಫೆಬ್ರವರಿ 10ರಂದು 10 ತಾಸು ಲಭ್ಯವಿದ್ದವು’ ಎಂದರು.