ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಲಸಿಕೆಗೆ ಹೆಚ್ಚು ರೋಗನಿಗ್ರಹ ಶಕ್ತಿ!

By Suvarna News  |  First Published Jun 8, 2021, 7:32 AM IST

* ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಲಸಿಕೆಗೆ ಹೆಚ್ಚು ರೋಗನಿಗ್ರಹ ಶಕ್ತಿ

* 2 ಡೋಸ್‌ ಲಸಿಕೆ ಪಡೆದ 95% ಜನರಲ್ಲಿ ಆ್ಯಂಟಿಬಾಡಿ ಸೃಷ್ಟಿ

* ಕೋವಿಶೀಲ್ಡ್‌ 98%, ಕೋವ್ಯಾಕ್ಸಿನ್‌ 80% ಪರಿಣಾಮಕಾರಿ


ನವದೆಹಲಿ(ಜೂ.08): ದೇಶೀಯವಾಗಿಯೇ ಅಭಿವೃದ್ಧಿಪಡಿಸಿ, ಉತ್ಪಾದಿಸಲಾಗುತ್ತಿರುವ ಕೊರೋನಾ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಪೈಕಿ ಯಾವುದು ಹೆಚ್ಚು ಪರಿಣಾಮಕಾರಿ? ಎರಡೂ ಲಸಿಕೆಗಳು 2 ಡೋಸ್‌ ಪಡೆದ ಬಳಿಕ ಕೊರೋನಾ ವೈರಸ್‌ ವಿರುದ್ಧ ಉತ್ತಮ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಿರುವುದು ಕಂಡುಬಂದಿದೆ ಎಂದು ಲಸಿಕೆಗಳ ಪರಿಣಾಮ ಕುರಿತು ನಡೆಸಿದ ಪ್ರಾಥಮಿಕ ಅಧ್ಯಯನವೊಂದು ತಿಳಿಸಿದೆ.

ಆದರೆ ಎರಡೂ ಲಸಿಕೆಗಳನ್ನು ಪರಸ್ಪರ ಹೋಲಿಸಿ ನೋಡಿದಾಗ, ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ಗಿಂತ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಪಡೆದವರಲ್ಲಿ ಹೆಚ್ಚಿನ ಸೆರೋಪಾಸಿಟಿವಿಟಿ ರೇಟ್‌ (ಪರೀಕ್ಷೆಗೆ ಒಳಗಾದವರಲ್ಲಿ ಪತ್ತೆಯಾದ ರೋಗನಿರೋಧಕ ಶಕ್ತಿ ಪ್ರಮಾಣ) ಮತ್ತು ಆ್ಯಂಟಿ ಸ್ಪೈಕ್‌ ಆ್ಯಂಟಿಬಾಡಿ (ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಂಖ್ಯೆ) ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ‘ಕೋವ್ಯಾಟ್‌’ (ಕೊರೋನಾ ವೈರಸ್‌ ವ್ಯಾಕ್ಸಿನ್‌ ಇನ್‌ಡ್ಯೂಸ್ಡ್‌ ಆ್ಯಂಟಿಬಾಡಿ ಟಿಟ್ರೆ) ನಡೆಸಿದ ಅಧ್ಯಯನ ವರದಿ ತಿಳಿಸಿದೆ.

Tap to resize

Latest Videos

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ಪಡೆದುಕೊಂಡಿದ್ದ 515 ಆರೋಗ್ಯ ಕಾರ್ಯಕರ್ತರ (305 ಪುರುಷರು, 210 ಮಹಿಳೆಯರು- 425 ಜನರಿಗೆ ಕೋವಿಶೀಲ್ಡ್‌, 90 ಜನರಿಗೆ ಕೋವ್ಯಾಕ್ಸಿನ್‌) ರಕ್ತವನ್ನು ಪರೀಕ್ಷಿಸಲಾಗಿತ್ತು. ಅದರನ್ವಯ ಎರಡೂ ಲಸಿಕೆಗಳ ಎರಡೂ ಡೋಸ್‌ ಪಡೆದವರ ಪೈಕಿ ಒಟ್ಟಾರೆ ಶೇ.95ರಷ್ಟುಜನರಲ್ಲಿ ರೋಗನಿರೋಧಕ ಶಕ್ತಿ ಕಂಡುಬಂದಿತ್ತು. ಇನ್ನು ಪ್ರತ್ಯೇಕವಾಗಿ ನೋಡಿದರೆ ಕೋವಿಶೀಲ್ಡ್‌ ಪಡೆದ ಶೇ.98.1ರಷ್ಟುಜನರಲ್ಲಿ ರೋಗ ನಿರೋಧಕ ಶಕ್ತಿ ಕಂಡುಬಂದಿದ್ದರೆ, ಕೋವ್ಯಾಕ್ಸಿನ್‌ ಪಡೆದವರಲ್ಲಿ ಶೇ.80ರಷ್ಟಿತ್ತು ಎಂದು ವರದಿ ಹೇಳಿದೆ.

ಅದೇ ರೀತಿ ಆ್ಯಂಟಿ ಸ್ಪೈಕ್‌ ಆ್ಯಂಟಿಬಾಡಿ ಪ್ರಮಾಣವು ಕೋವಿಶೀಲ್ಡ್‌ ಪಡೆದವರಲ್ಲಿ ಪ್ರತಿ ಮಿ.ಲೀಟರ್‌ನಲ್ಲಿ 127 ಅಬ್ಸಾರ್ಬೆನ್ಸ್‌ ಯುನಿಟ್ಸ್‌ ಇದ್ದರೆ, ಕೋವ್ಯಾಕ್ಸಿನ್‌ ಪಡೆದವರಲ್ಲಿ 53 ಇತ್ತು.

ಇನ್ನು ಎರಡೂ ಡೋಸ್‌ ಪಡೆದ 2 ವಾರಗಳ ಬಳಿಕ ಸೋಂಕಿಗೆ ತುತ್ತಾಗುವವರ ಪ್ರಮಾಣವನ್ನು ಪರಿಶೀಲಿಸಿದಾಗ, ಕೋವಿಶೀಲ್ಡ್‌ ಪಡೆದವರಲ್ಲಿ ಹೀಗೆ ಸೋಂಕಿಗೆ ತುತ್ತಾದವರ ಪ್ರಮಾಣ ಶೇ.5.5ರಷ್ಟಿದ್ದರೆ, ಕೋವ್ಯಾಕ್ಸಿನ್‌ ಪಡೆದವರಲ್ಲಿ ಶೇ.2.2 ಮಾತ್ರ ಇತ್ತು ಎಂದು ವರದಿ ಹೇಳಿದೆ.

ಆದರೆ ಸದ್ಯ ವರದಿ ಇನ್ನೂ ಮುದ್ರಣ ಪೂರ್ವ ಹಂತದಲ್ಲಿದೆ ಮತ್ತು ತಜ್ಞರಿಂದ ಪರಿಶೀಲನೆಗೆ ಒಳಪಟ್ಟಿಲ್ಲ. ಹೀಗಾಗಿ ಅದನ್ನು ಕ್ಲಿನಿಕಲ್‌ ಪ್ರಾಕ್ಟೀಸ್‌ಗೆ ಮಾರ್ಗಸೂಚಿಯಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ವರದಿಯಲ್ಲೇನಿದೆ?

- 2 ಡೋಸ್‌ ಪಡೆದ ಬಳಿಕ ಎರಡೂ ಲಸಿಕೆಗಳಿಂದ ಉತ್ತಮ ರೋಗನಿರೋಧಕ ಶಕ್ತಿ ಅಭಿವೃದ್ಧಿ

- ಕೋವಿಶೀಲ್ಡ್‌ ಪಡೆದವರಲ್ಲಿ ಆ್ಯಂಟಿಬಾಡಿ ಪ್ರಮಾಣ 127, ಕೋವ್ಯಾಕ್ಸಿನ್‌ ಪಡೆದವರಲ್ಲಿ 53 ಯುನಿಟ್‌

- ಕೋವಿಶೀಲ್ಡ್‌ ಪಡೆದವರಲ್ಲಿ ಸೋಂಕು ತಗಲಿದ ಪ್ರಮಾಣ 5.5%, ಕೋವ್ಯಾಕ್ಸಿನ್‌ ಪಡೆದವರಲ್ಲಿ 2.2%

- ಈ ವರದಿ ತಜ್ಞರಿಂದ ಪರಿಶೀಲನೆಗೆ ಒಳಪಟ್ಟಿಲ್ಲ, ಹೀಗಾಗಿ ಕ್ಲಿನಿಕಲ್‌ ಪ್ರಾಕ್ಟೀಸ್‌ಗೆ ಮಾರ್ಗಸೂಚಿ ಅಲ್ಲ

click me!