ಕಾಶ್ಮೀರದಲ್ಲಿ ಭಾರಿ ಸೇನೆ ಜಮೆ: ಕುತೂಹಲ, ಹಲವು ವದಂತಿ!

By Kannadaprabha NewsFirst Published Jun 8, 2021, 7:26 AM IST
Highlights

* ಕಾಶ್ಮೀರದಲ್ಲಿ ಭಾರಿ ಸೇನೆ ಜಮೆ: ಕುತೂಹಲ, ಹಲವು ವದಂತಿ

* ವಿಶೇಷ ಸ್ಥಾನ ರದ್ದತಿಗೆ ಮುಂಚಿನ ರೀತಿ ಚಟುವಟಿಕೆ

* ಕಣಿವೆ ರಾಜ್ಯದ ಮುಖಂಡರಲ್ಲಿ ಗೃಹಬಂಧನ ಆತಂಕ

ಶ್ರೀನಗರ(ಜೂ.08): ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆಯಾಗುತ್ತಿದ್ದು, ಸಾಕಷ್ಟುವದಂತಿ ಮತ್ತು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. 2019ರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ವೇಳೆಯೂ ಇದೇ ರೀತಿಯ ಸೇನಾ ಜಮಾವಣೆ ಆಗಿತ್ತು. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರಲ್ಲಿ ಈ ಸೇನಾ ಜಮಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಕೆಲವರು, ಜಮ್ಮುವಿಗೆ ರಾಜ್ಯದ ಸ್ಥಾನಮಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಕಾಶ್ಮೀರವನ್ನು ಮತ್ತೆ 3 ಭಾಗಗಳಾಗಿ ವಿಂಗಡಿಸಬಹುದು ಎಂಬ ವಾದ ಮಂಡಿಸುತ್ತಿದ್ದಾರೆ. ಇನ್ನು ಕೆಲವರು ಕಾಶ್ಮೀರಿ ಪಂಡಿತರ ದಶಕಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅವರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಕಲ್ಪಿಸಿಕೊಡಬಹುದು ಎಂಬ ವಿಶ್ಲೇಷಣೆಗಳಿಗೂ ಜೀವ ತುಂಬಿದ್ದಾರೆ.

ಆದರೆ ಇಂಥ ಊಹಾಪೋಹಗಳನ್ನು ತಳ್ಳಿಹಾಕಿರುವ ಅಧಿಕಾರಿಗಳು, ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಬೆಳವಣಿಗೆಗಳು ನಡೆಯುತ್ತಿಲ್ಲ. ಪಶ್ಚಿಮ ಬಂಗಾಳ ಸೇರಿ ಪಂಚರಾಜ್ಯಗಳ ಚುನಾವಣಾ ಭದ್ರತೆಗಾಗಿ ತೆರಳಿದ್ದ ಭದ್ರತಾ ಸಿಬ್ಬಂದಿ ಪುನಃ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದಾರಷ್ಟೇ. ಇದರಲ್ಲಿ ಹೊಸ ಬೆಳವಣಿಗೆಗಳೇನೂ ಇಲ್ಲ ಎಂದಿದ್ದಾರೆ.

ಆದಾಗ್ಯೂ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನವೂ ಇದೇ ರೀತಿ ಸೇನಾ ಜಮಾವಣೆ ಮಾಡಿ, ತಮ್ಮನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ಈಗ ಮತ್ತೆ ಅದೇ ರೀತಿಯ ಬೆಳವಣಿಗೆ ಅಂಥದ್ದೇ ಭೀತಿ ಹುಟ್ಟುಹಾಕಿದೆ. ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಹಲವು ಸ್ಥಳೀಯ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.

ಏನೇನು ವದಂತಿ?

1. ಜಮ್ಮುವಿಗೆ ರಾಜ್ಯ ಸ್ಥಾನಮಾನ ನೀಡಬಹುದು

2. ಕಾಶ್ಮೀರವನ್ನು ಮತ್ತೆ 3 ಭಾಗ ಮಾಡಬಹುದು

3. ಪಂಡಿತರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸೃಷ್ಟಿ

ಪಂಚರಾಜ್ಯ ಚುನಾವಣೆಗೆ ಹೋಗಿದ್ದ ಸೇನೆ ಮರಳುತ್ತಿದೆ ಅಷ್ಟೆ: ಅಧಿಕಾರಿಗಳು

click me!