
ಉತ್ತರಖಂಡ(ಜೂ.25): ಕೇದಾರನಾಥನ ಯಾತ್ರೆ ಅತ್ಯಂತ ಪವಿತ್ರ. ಕೇದಾರನಾಥನ ದರ್ಶನ ಪಡೆದು ಕೃಪೆಗೆ ಪಾತ್ರರಾಗಲು ಸಾಗರೋಪಾದಿಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕೇದಾರನಾಥ ಯಾತ್ರೆ ಸುಲಭವಲ್ಲ, ಕಠಿಣ ಹಾದಿ ಸವೆಸಬೇಕು. ಆದರೆ ಕೇದಾರನಾಥನ ದರ್ಶನ ಪಡೆಯಲು ಮುಂದಾಗಿರುವ ಭಕ್ತರಿಗೆ ಸದ್ಯಕ್ಕೆ ದರ್ಶನ ಭಾಗ್ಯವಿಲ್ಲ. ರುದ್ರಪ್ರಯಾಗ್ ಜಿಲ್ಲಾಧಿಕಾರಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕೇದಾರನಾಥ ಯಾತ್ರೆ ರದ್ದುಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಯಾರೂ ಕೇದಾರನಾಥ ಯಾತ್ರೆ ಕೈಗೊಳ್ಳದಂತೆ ರುದ್ರಪ್ರಯಾಗ್ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಸೂಚನೆ ನೀಡಿದ್ದಾರೆ.
ಉತ್ತರಖಂಡದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಕೇದಾರನಾಥನ ಕ್ಷೇತ್ರವಿರುವ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಪ್ರವಾಹ ಸೃಷ್ಟಿಸಿದೆ. ಹೀಗಾಗಿ ಯಾತ್ರಿಕರ ಸುರಕ್ಷತಾ ದೃಷ್ಟಿಯಿಂದ ಕೇದಾರನಾಥ ಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ. ಇತ್ತ ರಕ್ಷಣಾ ತಂಡಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯದ ಸ್ಥಳಗಳಿಂದ ಹಲವರನ್ನು ಸ್ಥಳಾಂತರಿಸಲಾಗಿದೆ. ಇನ್ನು ಉತ್ತರಖಂಡ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೂ ಸೂಚನೆ ನೀಡಲಾಗಿದೆ.
ಕೇದಾರನಾಥ ಯಾತ್ರೆ ಕುದುರೆಗೆ ಬಲವಂತವಾಗಿ ಗಾಂಜಾ ನೀಡಿ ಹಿಂಸೆ, ವಿಡಿಯೋದಿಂದ ಎಚ್ಚೆತ್ತ ಪೊಲೀಸ್!
ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ರಕ್ಷಣಾ ತಂಡದ ಜೊತೆ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಆಗುತ್ತಿರುವ ಮಳೆ ಹಾಗೂ ಮುನ್ನಚ್ಚೆರಿಕಾ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಅಪಾಯ ಹೆಚ್ಚಾಗಿರುವ ಕಾರಣ ತುರ್ತು ಕಾರ್ಯಗಳ ಕುರಿತು ಚರ್ಚಿಸಲಾಗಿದೆ. ಇನ್ನೂ ಕೆಲ ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಉತ್ತರಖಂಡದಲ್ಲಿ ಪರಿಸ್ಥಿತಿ ಅವಲೋಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹರಿದ್ವಾರದಲ್ಲಿ 78 mm ಮಳೆಯಾಗಿದ್ದರೆ, ಡೆಹ್ರಡೂನ್‌ನಲ್ಲಿ 33.2 mm, ಉತ್ತರಕಾಶಿಯಲ್ಲಿ 27.7 mm ಮಳೆಯಾಗಿದೆ. ದಿನದಿಂದ ದಿನಕ್ಕೆ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ನದಿ ಪಾತ್ರದ ಜರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸರ್ಕಾರದ ವತಿಯಿಂದ ಪನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.
ಕೇದಾರನಾಥ ದೇವಸ್ಥಾನದ 23 ಕೆಜಿ ಚಿನ್ನ ಕಳ್ಳತನ ಆರೋಪ, ತನಿಖಾ ಸಮಿತಿ ರಚಿಸಿದ ಸರ್ಕಾರ
ಉತ್ತರಖಂಡದ ಪಿತ್ತೋರಗಢ ಸಮೀಪ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು ಇದರಿಂದಾಗಿ ಸುಮಾರು 300 ಜನರು ಧಾರ್‌ಚುಲಾದಲ್ಲಿ ಅತಂತ್ರರಾಗಿದ್ದಾರೆ. ಪಿತ್ತೋರಗಢ ಹೊರವಲಯ ಧಾರ್‌ಚುಲಾದಿಂದ 45 ಕಿಲೋಮೀಟರ್ ಮೇಲ್ಭಾಗದಲ್ಲಿ ಲಿಪುಲೇಖ್ ತಾವರ್‌ಘಾಟ್ ರಸ್ತೆಯಲ್ಲಿ 100 ಮೀಟರ್ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಧಾರ್‌ಚುಲಾದಲ್ಲಿ ಸುಮಾರು 300 ಪ್ರಯಾಣಿಕರು ಅತಂತ್ರಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ರಸ್ತೆಯು ಇನ್ನು ಎರಡು ದಿನಗಳಲ್ಲಿ ತೆರೆಯಲಿದ್ದು ಅಲ್ಲಿವರೆಗೂ ಜನರು ಅನವಶ್ಯವಾಗಿ ಓಡಾಡದಂತೆ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ