Monsoon Session: ಲೋಕಸಭೆ-ರಾಜ್ಯಸಭೆಯಲ್ಲಿ ಮುಂದುವರಿದ ಹೈಡ್ರಾಮಾ, ಕಲಾಪ ಮುಂದೂಡಿಕೆ!

By Santosh NaikFirst Published Jul 19, 2022, 11:55 AM IST
Highlights

ಸತ್‌ನ ಮುಂಗಾರು ಅಧಿವೇಶನದ 2ನೇ ದಿನವೂ ವಿರೋಧ ಪಕ್ಷಗಳು ವಿವಿಧ ವಿಚಾರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿವೆ. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

ನವದೆಹಲಿ (ಜುಲೈ 19): ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನವೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹಲವು ವಿರೋಧ ಪಕ್ಷಗಳ ಸದಸ್ಯರು ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಗದ್ದಲವನ್ನು ಮುಂದುವರಿಸಿದರು. ಇದರಿಂದಾಗಿ ಎರಡೂ ಕಲಾಪಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆ ಮಾಡಲಾಗಿದೆ. ಬೆಲೆ ಏರಿಕೆಯಿಂದ ಹಿಡಿದು ಅಗ್ನಿಪಥ ಯೋಜನೆಯವರೆಗಿನ ವಿಷಯಗಳ ಕುರಿತು ತಕ್ಷಣ ಚರ್ಚೆ ನಡೆಸುವಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಮಂಗಳವಾರ ಬೆಳಗಿನ ಅಧಿವೇಶನದಲ್ಲಿ ಯಾವುದೇ ಕಲಾಪ ನಡೆಸದೆ ಮುಂದೂಡಲಾಯಿತು. ಕಾಂಗ್ರೆಸ್, ಎಡ ಮತ್ತು ಎಎಪಿ ಸದಸ್ಯರು ಸಮಸ್ಯೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಕೊನೆಗೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆ ಮಾಡಲಾಯಿತು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ನಿಯಮ 267 ರ ಅಡಿಯಲ್ಲಿ ನೀಡಿದ್ದ ನೋಟಿಸ್‌ಗಳನ್ನು ಸಭಾಪತಿ ಎಂ ವೆಂಕಯ್ಯ ನಾಯ್ಡು ತಿರಸ್ಕರಿಸಿದರು. ವಿರೋಧ ಪಕ್ಷಗಳು ಪಟ್ಟಿ ಮಾಡಿದ ಸಮಸ್ಯೆಗಳನ್ನು ತೆಗೆದುಕೊಳ್ಳಲು ಒಂದು ದಿನದ ಕಲಾಪವನ್ನು ಮೀಸಲಿಡುವಂತೆ ಅವರು ಒತ್ತಾಯ ಮಾಡಿದ್ದರು.

ಬೆಲೆಏರಿಕೆ ಕುರಿತಾಗಿ ಇಂದು ಚರ್ಚೆ ಸಾಧ್ಯವಿಲ್ಲ: ಪಟ್ಟಿ ಮಾಡಲಾದ ಪೇಪರ್‌ಗಳನ್ನು ಮೇಜಿನ ಮೇಲೆ ಇಟ್ಟ ಕೂಡಲೇ "ನಾನು ಇದನ್ನು ಒಪ್ಪಿಕೊಳ್ಳುತ್ತಿಲ್ಲ" ಎಂದು ನಾಯ್ಡು (M. Venkaiah Naidu) ಹೇಳಿದರು. ಪ್ರತಿಪಕ್ಷದ ಸದಸ್ಯರು ಈ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. "ಬೆಲೆ ಏರಿಕೆ ಮತ್ತು ಇತರ ವಿಷಯಗಳ ಬಗ್ಗೆ, ನಾವು ಚರ್ಚೆ ನಡೆಸಬಹುದು. ಅದರ ಮೇಲೆ ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದ ವೆಂಕಯ್ಯ ನಾಯ್ಡು, ಬೇರೆ ನಿಯಮದ ಅಡಿಯಲ್ಲಿ ಮುಂದಿನ ದಿನಾಂಕದಂದು ಈ ವಿಷಯದ ಬಗ್ಗೆ ಚರ್ಚೆಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಸೂಚಿಸಿದರು.

 ಸದನ ಮುಂದೂಡಿಕೆ: ಆದರೆ, ಗದ್ದಲ ಮಾಡುವ ಮೂಡ್‌ನಲ್ಲಿದ್ದ ಪ್ರತಿಪಕ್ಷದ ಸದಸ್ಯರಿಗೆ ಇದರಿಂದ ಸಮಾಧಾನವಾಗಲಿಲ್ಲ. ತಾವು ಹೇಳಿದ ವಿಚಾರಗಳ ಚರ್ಚೆಗೆ ಅವರು ಒತ್ತಾಯ ಮಾಡಿದರು. ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಮರಳಬೇಕು ಎಂದು ಹೇಳಿದ ಅವರು, ನಿಮ್ಮ ಯಾವುದೇ ಮಾತುಗಳು ದಾಖಲಾಗುವುದಿಲ್ಲ ಎಂದು ಹೇಳಿದ್ದಲ್ಲದೆ, ಕಲಾಪವನ್ನು 2 ಗಂಟೆಯವರೆಗೆ (Monsoon Session of Parliament) ಮುಂದೂಡಿದರು.

ಇದನ್ನೂ ಓದಿ: ರಾಷ್ಟ್ರ ಲಾಂಛನ ಅನಾವರಣ, ವಿಪಕ್ಷಗಳ ಆಕ್ರಂದನ!

ಲೋಕಸಭೆಯೂ ಮುಂದೂಡಿಕೆ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರು ಸದನದ ಕಲಾಪವನ್ನು ಮಧ್ಯಾಹ್ನ 2.00 ಗಂಟೆಗೆ ಮುಂದೂಡಿದರು. ಮುಂಗಾರು ಅಧಿವೇಶನದ ಎರಡನೇ ದಿನದಂದು, ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆಗಳು ಮತ್ತು ಘೋಷಣೆಗಳನ್ನು ಬಂದ ಬೆನ್ನಲ್ಲಿಯೇ,  ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸದನದಲ್ಲಿ ಸ್ಪಷ್ಟನೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿ ಕೂಗಾಟ ಆರಂಭಿಸಿದವು.

ಇದನ್ನೂ ಓದಿ: ಅಸಂಸದೀಯ ಪದಗಳು ಲೋಕಸಭೆಯಲ್ಲಿ ಬಳಸುವಂತಿಲ್ಲ

ಸಂಸತ್ತಿನ ಹೊರಗೂ ಪ್ರತಿಭಟನೆ: ಬಿರ್ಲಾ ಅವರು ಕಲಾಪವನ್ನು ಮುಂದೂಡುತ್ತಾ, ಸಂಸದರು ಸದನದಲ್ಲಿ ಸೌಜನ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಅವರು ಪ್ರತಿಭಟಿಸುತ್ತಿರುವ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಹೇಳಿದರು. ನೀವು ಪ್ರತಿಭಟನೆ ಮಾಡುವ ವೇಳೆ ಸದನದ ರೂಲ್‌ ಬುಕ್‌ ಬಗ್ಗೆ ಮಾತನಾಡುತ್ತೀರಿ ಹಾಗೂ ಸದನದಲ್ಲಿ ಅದೇ ರೂಲ್‌ ಬುಕ್‌ಅನ್ನು ಮೀರುತ್ತಿದ್ದೀರಿ ಎಂದು ಕಾಂಗ್ರೆಸ್‌ ಸಂಸದರೊಬ್ಬರಿಗೆ ಹೇಳಿದರು. ನೀವು ರೈತರು ಹಾಗೂ ಹಣದುಬ್ಬರದ ಬಗ್ಗೆ ಸಂಸತ್ತಿನ ಹೊರಗೆ ಮಾತನಾಡಬಹುದು. ಆದರೆ, ಅದರ ಚರ್ಚೆಯನ್ನು ಸಂಸತ್ತಿನ ಈ ದಿನದಂದು ಮಾಡಬೇಡಿ ಎಂದು ಹೇಳಿದರು. ಹಣದುಬ್ಬರ ಮತ್ತು ಬೆಲೆ ಏರಿಕೆ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದ್ದಲ್ಲದೆ, ಕೆಲವು ಸಂಸದರು ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಘೋಷಣೆಗಳನ್ನು ಕೂಗುತ್ತಾ ಮತ್ತು ಫಲಕಗಳನ್ನು ಪ್ರದರ್ಶಿಸುತ್ತಾ ಅತಿರೇಕದ ವರ್ತನೆ ತೋರಿದರು.

click me!