
ನವದೆಹಲಿ(ಜು.10) ಭಾರತಕ್ಕೆ ಮಳೆಗಾಲ ಆರಂಭ ಕೊಂಚ ತಡವಾದರೂ ಯಾರೂ ಊಹಿಸದ ರೀತಿಯಲ್ಲಿ ಅಬ್ಬರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತಕ್ಕೆ ಅನಾಹುತವೇ ಸೃಷ್ಟಿಯಾಗಿದೆ. ಮುಖ್ಯವಾಗಿ ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಬಹುತೇಕ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದಿಂದ ಪಟ್ಟಣ, ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಮಳೆಗೆ ಇದೀಗ ಐದು ರಾಜ್ಯಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿ: ದೆಹಲಿ, ಹರ್ಯಾಣ ಹಾಗೂ ಪಂಜಾಬ್ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ದೆಹಲಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಹಲವು ಕಟ್ಟಡಗಳ ಗೋಡಗಳು ಕುಸಿದಿದೆ. ಸತತ ಮಳೆ ಹಾಗೂ ಪ್ರವಾಹದಿಂದ ನಾಳೆಯೂ ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ 1 ರಿಂದ 12ನೇ ತರಗತಿ ವರೆಗಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆಗೆ ಕೊಚ್ಚಿ ಹೋದ ಎಸ್‌ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!
ಪಂಜಾಬ್ ಹಾಗೂ ಹರ್ಯಾಣ: ಪಂಜಾಬ್‌ನಲ್ಲಿ ಭಾರಿ ಮಳೆಯಿಂದ ನದಿಗಳು ಅಪಾಯದ ಮಟ್ಟ ಮೀರಿದೆ. ಜಲಾಶಗಳು ಭರ್ತಿಯಾಗಿದೆ. ನದಿ ಪಾತ್ರದಲ್ಲಿನ ಕಟ್ಟಡಗಳು ಕುಸಿದಿದೆ. ಹೊಲಗಳು ಮುಳುಗಡೆಯಾಗಿದೆ. ಪಂಜಾಬ್‌ನಲ್ಲಿ ದಿಢೀರ್ ಪ್ರವಾಹಕ್ಕೆ ಸಿಲುಕಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಇದೀಗ ಪಂಜಾಬ್ ಹಾಗೂ ಹರ್ಯಾಣದ ಪರಿಸ್ಥಿತಿಯೂ ಆತಂಕ ಹೆಚ್ಚಿಸಿರುವ ಕಾರಣ ಜುಲೈ ನಾಳೆಯೂ ರಜೆ ಘೋಷಿಸಲಾಗಿದೆ. ಪಂಜಾಬ್‌ನಲ್ಲು ಜುಲೈ 13ರ ವರೆಗೆ ರಜೆ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶ: ಮಳೆಯಿಂದ ಅತೀ ಹೆಚ್ಚು ಹಾನಿಯಾಗಿರುವ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದೆ. ಭೂಕುಸಿತ, ಪ್ರವಾಹದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದೆ. ಹಿಮಾಚಲ ಪ್ರದೇಶದಲ್ಲಿ ನಾಳೆ ರಜೆ ಘೋಷಿಸಲಾಗಿದೆ. ಇನ್ನು ಹಿಮಾಚಲ ಪ್ರದೇಶದ 10ಕ್ಕೂ ಹೆಚ್ಚು ಜಿಲ್ಲೆಯಲ್ಲಿ ರಜೆ ವಿಸ್ತರಣೆ ಮಾಡಲಾಗಿದ್ದು, ಮತ್ತೆರಡು ದಿನ ರಜೆ ಘೋಷಿಸಲಾಗಿದೆ.
ಕೇರಳ: ಕೇರಳದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೋಟಾಯಂ, ಆಲಫುಝಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದೆ. ಹೀಗಾಗಿ ಕೇರಳದ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
ಭೂಕುಸಿತಕ್ಕೆ ಕೊಚ್ಚಿ ಹೋದ ಗ್ರಾಮ; ಕಟ್ಟಡ, ಸೇತುವೆ, ವಾಹನ, ಮನೆ ನೀರು ಪಾಲು!
ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಮನೆಯ ಚಾವಣಿ ಕುಸಿದು ತಾಯಿ, ಮಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತ ಮಹಿಳೆಯ ಪತಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಸಿಕಾರ್ ನಗರದಲ್ಲಿ ವಿದ್ಯಾರ್ಥಿಯೊಬ್ಬ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಪಂಜಾಬ್ ಮತ್ತು ಹರ್ಯಾಣದಲ್ಲೂ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಇನ್ನು ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ 8.30ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 15.3 ಸೆಂ.ಮೀ. ಮಳೆಯಾಗಿದೆ. ಇದು ಕಳೆದ 41 ವರ್ಷಗಳಲ್ಲೇ ದಾಖಲೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ