
ನವದೆಹಲಿ: ಮುಂಗಾರು (Monsoon) ಮಾರುತ ಜೂ.4ರಂದು ಕೇರಳ ಪ್ರವೇಶಿಸಲು ವಿಫಲವಾಗಿದೆ. ಮುಂಗಾರು ಮಳೆ ನಿಗದಿತ ದಿನಕ್ಕಿಂತ ಇನ್ನೂ ಮೂರ್ನಾಲ್ಕು ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಹೇಳಿದೆ. ಈ ಮೊದಲು ಜೂ.4ರಂದು ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಆದರೆ ಮುಂಗಾರು ಮಾರುತಗಳ ಕುರಿತಾಗಿ ಉತ್ತಮವಾದ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ದಕ್ಷಿಣ ಅರಬ್ಬೀ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ. ಭಾನುವಾರ ಈ ಮಾರುತಗಳು ಮತ್ತಷ್ಟು ಹೆಚ್ಚಾಗಿದ್ದು, ಸಮುದ್ರ ಮಟ್ಟಕ್ಕಿಂತ 2 ಕಿ.ಮೀ. ಎತ್ತರದವರೆಗೆ ಪಶ್ಚಿಮಾಭಿಮುಖವಾಗಿ ಬೀಸುತ್ತಿವೆ. ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಮೋಡದ ರಚನೆಯೂ ಸಹ ದಟ್ಟವಾಗುತ್ತಿದೆ. ಹಾಗಾಗಿ ಮುಂದಿನ ಮೂರು ಅಥವಾ ನಾಲ್ಕು ದಿನದಲ್ಲಿ ಮುಂಗಾರು ಕೇರಳ (Kerala) ಪ್ರವೇಶಿಸಲಿದೆ. ಈ ಬಗ್ಗೆ ಸೋಮವಾರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಹವಾಮಾನ ಇಲಾಖೆಯ (Meteorological Department) ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಆದರೆ, ಮುಂಗಾರು ತಡವಾದರೂ ಉತ್ತಮ ಫಲಿತಾಂಶವನ್ನೇ ನೀಡಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ!
ಮುಂಗಾರು ವಿಳಂಬವಾಗುತ್ತಿರುವ ದೇಶದ ವಾರ್ಷಿಕ ಮಳೆ ಪ್ರಮಾಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಮುಂಗಾರು ಮೇ 29ರಂದು ಕೇರಳವನ್ನು ಪ್ರವೇಶಿಸಿತ್ತು. ಬಳಿಕ 2019ರಲ್ಲಿ ಜೂ.8, 2020ರಲ್ಲಿ ಜೂ.1, 2021ರಲ್ಲಿ ಜೂ.3, 2022ರಲ್ಲಿ ಮೇ.29ರಂದು ಮಾರುತ ಕೇರಳ ಪ್ರವೇಶಿಸಿತ್ತು. ಎಲ್ ನಿನೋ ಪರಿಸ್ಥಿತಿಯ ಹೊರತಾಗಿಯೂ ಭಾರತ ಈ ವರ್ಷ ಸಾಮಾನ್ಯ ಮಳೆ ಪಡೆದುಕೊಳ್ಳಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಹೇಳಿತ್ತು.
ಬಾರದ ಮಳೆ, ಬಿತ್ತನೆ ವಿಳಂಬ
ಮುಂಗಾರು ಬಾರದಿರುವುದರಿಂದ ಬಿಸಿಲಿನ ಧಗೆ ಕಡಿಮೆಯಾಗಿಲ್ಲ. ರೈತ ಸಮುದಾಯ ಮಳೆಗಾಗಿ ಕಾಯುತ್ತಿದ್ದು, ಬಿತ್ತನೆ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ಕಳೆದ ವಾರ ಸ್ವಲ್ಪ ಮಟ್ಟಿಗೆ ಮಳೆ ಬಂದುದರಿಂದ ಕೆಲವು ರೈತರು ಬಿತ್ತನೆ ಮಾಡುತ್ತಿದ್ದರೆ, ಇನ್ನು ಉಳಿದ ರೈತರು ಮತ್ತೆ ಯಾವಾಗ ಮಳೆರಾಯ ಬರುತ್ತಾನೋ ಎಂದು ಆಗಸದತ್ತ ಮುಖ ಮಾಡಿ ನಿಂತಿದ್ದಾರೆ.
ರೈತರಿಗೆ ಶಾಕಿಂಗ್ ನ್ಯೂಸ್: ಜೂನ್‌ನಲ್ಲಿ ಕಡಿಮೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ
ಮುಂಗಾರು ಮಳೆಗೂ ಮುನ್ನ ಕೆರೆ-ಕಟ್ಟೆಗಳು ಬರಿದಾಗಿದ್ದು, ಮಳೆ ಬಂದರಷ್ಟೇ ಬೆಳೆ ಎಂಬಂತಾಗಿದೆ. ಮುಂಗಾರು ಪೂರ್ವ ಭೂಮಿ ಹದಗೊಳಿಸಲು ರೈತರು ವರುಣನಿಗಾಗಿ ಕಾಯುತ್ತಿದ್ದಾರೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದಾರೆ. ಅಡಕೆ ತೋಟಗಳು ನೀರಿಲ್ಲದೆ ಒಣಗುತ್ತಿದ್ದು, ಮುಂಗಾರು ಬತ್ತ ಬಿತ್ತನೆಗೆ ಭೂಮಿ ಹದಗೊಳಿಸುವ ಪ್ರಕ್ರಿಯೆ ಕೂಡ ಸಿದ್ಧವಾಗಿವೆ. ಹೀಗಾಗಿ, ಕೃಷಿಯನ್ನು ನಂಬಿದ ರೈತ ಮಾತ್ರ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ರಾಜ್ಯದ ಹಲವೆಡೆ ದಿನೇ ದಿನೇ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಹಿರೇಕೆರೂರು ತಾಲೂಕಿನ ಏಕೈಕ ಜೀವನಾಡಿಯಾದ ಕುಮದ್ವತಿ ನದಿ ನೀರಿಲ್ಲದೇ ಒಣಗಿ ನಿಂತಿದೆ. ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಕೈಕೊಟ್ಟಿವೆ. ಮೇ ತಿಂಗಳ ಅಂತ್ಯದಲ್ಲಿ ಮುಂಗಾರಿನ ಮುನ್ಸೂಚನೆ ಮಳೆ ನೀಡುತ್ತಿದ್ದ ಮೃಗಶಿರಾ ಮುನಿಸಿಕೊಂಡಂತಿದೆ. ಎಲ್ಲದರ ನಡುವೆಯೂ ಮುಂಗಾರು ಹಸನಾಗಿರಬಹುದೆಂಬ ಆಶಾಭಾವದಲ್ಲಿ ಕೃಷಿಕರಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ. 11ರಂದು ಮುಂಗಾರು ಆರಂಭವಾಗಲಿದೆ.
ಹಿರೇಕೆರೂರು ತಾಲೂಕಿನಲ್ಲಿ 56,000 ಹೆಕ್ಟೇರ್ ಭೂ ಪ್ರದೇಶ ಸಾಗುವಳಿ ಕ್ಷೇತ್ರವಾಗಿದೆ. 49,000 ಹೆಕ್ಟೇರ್ ಭೂ ಪ್ರದೇಶ ಒಣ ಬೇಸಾಯ, 7000 ಹೆಕ್ಟೇರ್ ಭೂ ಪ್ರದೇಶ ನೀರಾವರಿ ಬೇಸಾಯ ಆಗಿದೆ. ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ, ಜೋಳ ಬಿತ್ತನೆಗೆ ಆದ್ಯತೆ ನೀಡಲಾಗುತ್ತಿದೆ. ಹತ್ತಿ, ಶೇಂಗಾ, ಸೋಯಾಬೀನ್ ಸೇರಿದಂತೆ ದ್ವಿದಳ ಧ್ಯಾನ ಬೆಳೆಯಲು ರೈತರು ಆಸಕ್ತಿ ತೋರಿಸಿದ್ದಾರೆ.
ವಾಡಿಕೆಯಂತೆ ಮೇ ಅಂತ್ಯಕ್ಕೆ 66 ಮಿ.ಮೀ.ನಷ್ಟುಮಳೆ ಆಗಬೇಕಾಗಿತ್ತು. ಆದರೆ ಹಿರೇಕೆರೂರಿನಲ್ಲಿ 31.4 ಮಿಮೀ ಹಾಗೂ ಹಂಸಬಾವಿ 54.8 ಮಿ.ಮೀ.ನಷ್ಟುಮಳೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ