
ಲಖನೌ(ಮಾ.26) ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಸುತ್ತು ಒಂದಲ್ಲಾ ಒಂದು ವಿವಾದಗಳು ಸುತ್ತಿಕೊಳ್ಳುತ್ತಿದೆ. ಕೆಲ ವರ್ಷಗಳ ಹಿಂದೆ ಶಮಿ ಹಾಗೂ ಪತ್ನಿ ನಡುವಿನ ಜಟಾಪಟಿ ತಾರಕಕ್ಕೇರಿತ್ತು. ಇದಾದ ಬಳಿಕ ಶಮಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹಲವು ಆರೋಪ, ಟೀಕೆಗಳು ಕೇಳಿಬಂದಿತ್ತು. ಎಲ್ಲವೂ ತೆರೆಗೆ ಸರಿಯುತ್ತಿದ್ದಂತೆ ಇದೀಗ ಶಮಿ ಕುಟುಂಬದ ಪ್ರಕರಣವೊಂದು ಮೊಹಮ್ಮದ್ ಶಮಿ ತಲೆಗೆ ಸುತ್ತಿಕೊಂಡಿದೆ. ಉತ್ತರ ಪ್ರದೇಶದಲ್ಲಿ ನಡೆದ ನರೇಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವಾಗಿ ಮೊಹಮ್ಮದ್ ಶಮಿ ತಂಗಿ ಕುಟುಂಬ ವೇತನ ಪಡೆದ ಆರೋಪ ಕೇಳಿಬಂದಿದೆ. ಶಮಿ ತಂಗಿ ಕುಟುಂಬ ಪ್ರತಿ ತಿಂಗಳು ನರೇಗ ಯೋಜನೆಯಡಿ ವೇತನ ಪಡೆದ ಆರೋಪ ಕೇಳಿಬಂದಿದೆ. ಈ ಕುರಿತು ದಾಖಲೆಗಳು ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿದವರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಸಹೋದರಿಯೂ ಇದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಶಮಿ ಅವರ ಸಹೋದರಿ ಶಾಬಿನಾ ಮತ್ತು ಆಕೆಯ ಪತಿ ಹಾಗೂ ಅತ್ತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಕೆಲಸ ಮಾಡಿದಂತೆ ತೋರಿಸಿ ಹಣ ಪಡೆದಿದ್ದಾರೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ಮಗಳ ಹೋಳಿ ಆಚರಣೆ ಟೀಕೆ ಮಾಡಿದ್ದ ಮೌಲಾನಾ ವಿರುದ್ಧ ಸಿಡಿದೆದ್ದ ಮೊಹಮದ್ ಶಮಿ ಮಾಜಿ ಪತ್ನಿ!
2021-2024ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಮಿ ತಂಗಿ ಹಾಗೂ ಆಕೆಯ ಪತಿ ಇಬ್ಬರ ಖಾತೆಗೂ ವೇತನದ ಹಣ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆರೋಪದ ಕುರಿತು ಶಮಿ ಅಥಾ ಶಮಿ ತಂಗಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮ್ರೋಹಾ ಜಿಲ್ಲೆಯ ಜೋಯಾ ಬ್ಲಾಕ್‌ನ ಪಲೋಲಾ ಗ್ರಾಮದಲ್ಲಿ ಸರ್ಕಾರಿ ಹಣವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಶಮಿ ಸಹೋದರಿ ಶಾಬಿನಾ ಅವರ ಅತ್ತೆ ಗುಲೇ ಐಷಾ ಇಲ್ಲಿನ ಗ್ರಾಮದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅಧಿಕಾರ ಬಳಸಿ ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 657 ಉದ್ಯೋಗ ಚೀಟಿಗಳನ್ನು ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಶಾಬಿನಾ 473ನೇ ಹೆಸರಿನವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 2021ರಲ್ಲಿ ನೋಂದಣಿ ಮಾಡಿದ ನಂತರ ಶಾಬಿನಾ ಅವರ ಬ್ಯಾಂಕ್ ಖಾತೆಗೆ ಸುಮಾರು 70,000 ರೂಪಾಯಿ ಕೂಲಿಯಾಗಿ ಬಂದಿದೆ. ಹಾಗೆಯೇ ಶಾಬಿನಾ ಅವರ ಪತಿ ಗಸ್ನವಿ ಅವರ ಖಾತೆಗೆ ಸುಮಾರು 66,000 ರೂಪಾಯಿ ಕೂಲಿಯಾಗಿ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶಾಬಿನಾ ಅವರ ಅತ್ತಿಗೆ ನೇಹಾ ಅವರ ಹೆಸರೂ ಈ ಹಗರಣದಲ್ಲಿ ತಳುಕು ಹಾಕಿಕೊಂಡಿದೆ ಎನ್ನಲಾಗಿದೆ. ಗ್ರಾಮದ ಮುಖ್ಯಸ್ಥೆ ಗುಲೇ ಐಷಾ ಅವರ ಮಗಳು ನೇಹಾ. ಎರಡು ಅಂತಸ್ತಿನ ಮನೆಯಿರುವ ಗ್ರಾಮದ ಕಾಂಟ್ರಾಕ್ಟರ್ ಸುಲ್ಫಿಕರ್ ಅವರ ಹೆಸರೂ ಉದ್ಯೋಗ ಖಾತ್ರಿ ಯೋಜನೆಗೆ ಹೆಸರು ನೋಂದಾಯಿಸಿದವರ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ಕೊರೊನಾ ಟೈಂನಲ್ಲಿ ಬ್ಯಾನ್ ಆಗಿದ್ದ ನಿಯಮ ಐಪಿಎಲ್ 2025ರಿಂದ ಮತ್ತೆ ಶುರುವಾಗಲಿದ್ಯಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ