ಪ್ರಧಾನಿ ಮೋದಿ ಕನಸಿನ ಬಗ್ಗೆ ಸುಳಿವಿತ್ತ ಡ್ರೋನ್‌ ಕಂಪನಿ; ಏನಿದು? ಇಲ್ಲಿದೆ ವಿವರ

By Kannadaprabha NewsFirst Published Oct 25, 2021, 7:05 AM IST
Highlights

* ಪ್ರಧಾನಿ ಮೋದಿ ಕನಸಿನ ಬಗ್ಗೆ ಸುಳಿವಿತ್ತ ಡ್ರೋನ್‌ ಕಂಪನಿ

* ಕುಗ್ರಾಮಗಳಿಗೆ ಡ್ರೋನ್‌ ಮೂಲಕ ಅಂಚೆ ಸೇವೆ?

ಚೆನ್ನೈ(ಅ.25): ಡ್ರೋನ್‌(Drone) ಮೂಳಕ ಕುಗ್ರಾಮಗಳಿಗೆ ಔಷಧಗಳನ್ನು(Medicine) ರವಾನಿಸುವ ಪ್ರಯೋಗ ಆರಂಭಿಸಿರುವ ಕೇಂದ್ರ ಸರ್ಕಾರ, ಇಂಥ ಸ್ಥಳಗಳಿಗೆ ಅಂಚೆ ಸೇವೆಯನ್ನೂ ಡ್ರೋನ್‌ ಮೂಲಕವೇ ಒದಗಿಸುವ ಸಾಧ್ಯತೆ ಬಗ್ಗೆಯೂ ಗಂಭೀರ ಚಿಂತನೆ ನಡೆಸಿರುವ ಸುಳಿವೊಂದು ಸಿಕ್ಕಿದೆ.

ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಚೆನ್ನೈ ಮೂಲದ ಗರುಡಾ ಏರೋಸ್ಪೇಸ್‌ ಕಂಪನಿಯ ಮುಖ್ಯಸ್ಥ ಅಗ್ನೀಶ್ವರ್‌ ಜಯಪ್ರಕಾಶ್‌ ಇಂಥದ್ದೊಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಅಗ್ನೀಶ್ವರ್‌ ‘ಡ್ರೋನ್‌ಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟುಮಾಹಿತಿ ಹೊಂದಿದ್ದಾರೆ. ದೇಶದ ಪ್ರತಿಯೊಂದು ಕುಗ್ರಾಮಗಳನ್ನು ಡ್ರೋನ್‌ ಮೂಲಕ ತಲುಪಬೇಕು ಎನ್ನುವುದು ಅವರ ಕನಸು. ರಸ್ತೆ ನಿರ್ಮಾಣ ಸಾಧ್ಯವಾಗದ, ವಾಹನ ಸೌಲಭ್ಯವಿರದ, ದೂರವಾಣಿ ಸಂಪರ್ಕ ಏರ್ಪಡದ ದೇಶದ ಕುಗ್ರಾಮಗಳಿಗೆ ಡ್ರೋನ್‌ ಮೂಲಕ ಔಷಧಿ ರವಾನೆ ಹೊರತಾಗಿ ಅವರಿಗೆ ಅಂಚೆ ಸೇವೆಯನ್ನೂ ತಲುಪಿಸಬೇಕು ಎಂಬುದು ಅವರ ಆಶಯ. ಡ್ರೋನ್‌ ಕುರಿತು ಅವರು ಹೊಂದಿರುವ ಆಸಕ್ತಿ ಮತ್ತು ಮಾಹಿತಿ ನಿಜಕ್ಕೂ ನನ್ನನ್ನು ಅಚ್ಚರಿಗೆ ಗುರಿ ಮಾಡಿದೆ’ ಎಂದು ಹೇಳಿದ್ದಾರೆ.

ಈ ಮೂಲಕ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಡ್ರೋನ್‌ ಮೂಲಕ ಅಂಚೆ ಸೇವೆ ಆರಂಭಿಸುವ ಸಾಧ್ಯತೆ ಇರುವ ಸುಳಿವು ನೀಡಿದ್ದಾರೆ.

ಪ್ರಧಾನಿಯವರ ಮೇಕ್‌ ಇನ್‌ ಇಂಡಿಯಾ ಯೋಜನೆಯಿಂದ ಪ್ರೇರಿತರಾಗಿ ಜಯಪ್ರಕಾಶ್‌ ಸ್ಟಾರ್ಟ್‌ಅಪ್‌ ಕಂಪನಿ ಪ್ರಾರಂಭಿಸಿದ್ದು, ಈಗಾಗಲೇ ಪ್ರವಾಹ ಸಂದರ್ಭದಲ್ಲಿ ಇವರ ಡ್ರೋನ್‌ಗಳು ಬಳಕೆಯಾಗುತ್ತಿವೆ.

ಕೆಲ ನಗರಗಳಲ್ಲಿ ಡ್ರೋನ್‌ ಮೂಲಕವೇ ಔಷಧಿ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ಪೂರೈಸುತ್ತಿರುವಾಗ, ಪ್ರಧಾನಿಯವರ ಕನಸನ್ನು ನನಸು ಮಾಡಲು ನಾವು ಸಿದ್ಧರಿದ್ದೇವೆ ಎಂದು ಜಯಪ್ರಕಾಶ್‌ ತಿಳಿಸಿದ್ದಾರೆ.

click me!