ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್‌ ಆತಂಕ: ಮ.ಪ್ರದಲ್ಲಿ ಸೋಂಕು ಪತ್ತೆ!

By Kannadaprabha NewsFirst Published Oct 25, 2021, 6:39 AM IST
Highlights

* ಇಂದೋರ್‌ನ 7 ಜನರಲ್ಲಿ ಎವೈ 4.2 ರೂಪಾಂತರಿ

* ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್‌ ಆತಂಕ

* ಮಪ್ರದಲ್ಲಿ ಸೋಂಕು ಪತ್ತೆ

* ಬ್ರಿಟನ್ನಲ್ಲಿ ಶರವೇಗದಲ್ಲಿ ಹರಡುತ್ತಿರುವ ತಳಿಯಿದು

ನವದೆಹಲಿ(ಅ.25): ಬ್ರಿಟನ್‌(Britain) ಸೇರಿದಂತೆ ಹಲವು ದೇಶಗಳಲ್ಲಿ ಇತ್ತೀಚೆಗೆ ಪತ್ತೆಯಾಗಿ ಭಾರಿ ಆತಂಕ ಸೃಷ್ಟಿಸಿರುವ ಕೊರೋನಾದ ಹೊಸ ರೂಪಾಂತರಿ ತಳಿಯೊಂದು ಇದೀಗ ಭಾರತದಲ್ಲೂ ಪತ್ತೆಯಾಗಿದೆ. ಮಧ್ಯಪ್ರದೇಶದ(madhya Pradesh) ರಾಜಧಾನಿ ಇಂದೋರ್‌ನ(Indore) 7 ಜನರಲ್ಲಿ ಎವೈ 4.2 ಎಂಬ ಹೊಸ ಕೊರೋನಾ ರೂಪಾಂತರಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ರಿಟನ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಹೊಸ ಕೇಸು ಏರಿಕೆ ಮತ್ತು ಸಾವಿಗೆ ಇದೇ ವೈರಸ್‌ ಕಾರಣ ಎಂಬ ವರದಿಗಳ ಬೆನ್ನಲ್ಲೇ ಭಾರತದಲ್ಲೂ ಅದೇ ವೈರಸ್‌ ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂಗ್ರಹಿಸಿದ್ದ ಕೊರೋನಾ ವೈರಸ್‌ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ ವೇಳೆ 7 ಪ್ರಕರಣಗಳಲ್ಲಿ ಎವೈ.4.2 ಎಂಬ ಹೊಸ ತಳಿ ಪತ್ತೆಯಾಗಿದೆ. ಆದರೆ ಇದು ಒಟ್ಟು ನಡೆಸಲಾದ ಪರೀಕ್ಷಾ ಪ್ರಮಾಣದಲ್ಲಿ ಶೇ.0.1ಕ್ಕಿಂತಲೂ ಕಡಿಮೆ ಎಂದು ಹೊಸ ತಳಿ ಪತ್ತೆ ಮಾಡಿರುವ ನವದೆಹಲಿ ಸಿಎಸ್‌ಐಆರ್‌(CSIR) ಇನ್‌ಸ್ಟಿಟ್ಯೂಟ್‌ ಆಫ್‌ ಜಿನೋಮಿಕ್ಸ್‌ ಆ್ಯಂಡ್‌ ಇಂಟಿಗ್ರೇಟೆಡ್‌ ಬಯಾಲಜಿ ಸಂಸ್ಥೆ ನಿರ್ದೇಶಕರಾಗಿರುವ ಡಾ.ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ.

"

ಕಳೆದ ಸೆಪ್ಟೆಂಬರ್‌ನಲ್ಲಿ ಇಂದೋರ್‌ನಲ್ಲಿ ದಿಢೀರನೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಹೀಗಾಗಿ ಈ ಏರಿಕೆಗೆ ಎವೈ 4.2 ಕಾರಣವಾಗಿದ್ದಿರಬಹುದು ಎಂದು ಇದೀಗ ವಿಶ್ಲೇಷಿಸಲಾಗುತ್ತಿದೆ.

ಎವೈ 4.2, ಭಾರತದಲ್ಲಿ(India) ಮೊದಲಿಗೆ ಪತ್ತೆಯಾಗಿ ಬಳಿಕ ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಿದ್ದ ಡೆಲ್ಟಾರೂಪಾಂತರಿ ತಳಿಯ ಉಪತಳಿ. ಡೆಲ್ಟಾಗೆ(Delta) ಹೋಲಿಸಿದರೆ ಇದು ಹೆಚ್ಚು ಸೋಂಕುಕಾರಕ ಎಂದು ಈಗಾಗಲೇ ಖಚಿತಪಟ್ಟಿದೆ. ಜೊತೆಗೆ ಬ್ರಿಟನ್‌ನಲ್ಲಿ ಕಳೆದೊಂದು ವಾರದಿಂದ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕು ಮತ್ತು ಸಾವಿಗೂ ಇದೇ ಕಾರಣ ಎಂದು ಖಚಿತಪಟ್ಟಿದೆ. ಜೊತೆಗೆ ರಷ್ಯಾ, ಇಸ್ರೇಲ್‌, ಯುರೋಪ್‌ನ ಹಲವು ದೇಶಗಳಲ್ಲೂ ಈಗಾಗಲೇ ಈ ತಳಿ ಪ್ರವೇಶ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಈ ಹೊಸ ತಳಿ ಭಾರತದಲ್ಲಿ ಕೊರೋನಾ ಮೂನರೇ ಅಲೆಗೆ ಕಾರಣವಾಗಬಹುದು ಎಂಬ ಆತಂಕ ಹರಡಿದೆ.

ಸದ್ಯಕ್ಕೆ ತಜ್ಞರ ತಂಡ ಈ ಹೊಸ ತಳಿಯನ್ನು ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌ ಹಂತದಲ್ಲೇ ಇಟ್ಟಿದೆ. ಇದು ಅಪಾಯಕಾರಿ ಎಂದು ಖಚಿತಪಟ್ಟರೆ ಅದನ್ನು ವೇರಿಯೆಂಟ್‌ ಆಫ್‌ ಕನ್ಸರ್ನ್‌ಗೆ ವರ್ಗ ಮಾಡಲಾಗುವುದು.

click me!