Modi Security Breach: ಭದ್ರತಾ ಲೋಪಕ್ಕೆ ಕಾರಣ ರಾಜಕೀಯವೇ, ಕೊನೆ ಕ್ಷಣದ ಸಮನ್ವಯದ ಕೊರತೆಯೇ?

By Shrilakshmi ShriFirst Published Jan 7, 2022, 4:10 PM IST
Highlights

ದೇಶದ ಯಾವುದೇ ಭಾಗಕ್ಕೆ ಪ್ರಧಾನಿ (Prime Minister) ಹೋಗುವುದಿದ್ದರೂ ಪ್ರಧಾನಿಯ ಭದ್ರತೆ ನೋಡಿಕೊಳ್ಳುವ ಎಸ್‌ಪಿಜಿಯವರು ಹತ್ತು ದಿನ ಮುಂಚಿತವಾಗಿ ಹೋಗಿ ಜಿಲ್ಲಾ​ಧಿಕಾರಿ, ಪೊಲೀಸ್‌ ವರಿಷ್ಠರು, ಕೇಂದ್ರ ಹಾಗೂ ರಾಜ್ಯದ ಬೇಹುಗಾರಿಕಾ ದಳಗಳ ಜೊತೆ ಮೊದಲೇ ಡ್ರಿಲ್‌ ಮಾಡಿ ಪ್ರಧಾನಿಯ ನಿಮಿಷ ನಿಮಿಷದ ಕಾರ್ಯಕ್ರಮ ನಿಗದಿ ಮಾಡಿರುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಬಹು ರಾಜಕೀಯ ಪಕ್ಷಗಳು, ಭಿನ್ನ ಭಿನ್ನ ಸಿದ್ಧಾಂತಗಳು, ಸೈದ್ಧಾಂತಿಕ ತಿಕ್ಕಾಟಗಳು, ಚುನಾವಣೆಗಳು, ಪ್ರಚಾರದ ಪೈಪೋಟಿ ಎಲ್ಲವೂ ಕಾಯಂ ಆಗಿ ಇರುವ ಸಂಗತಿಗಳು. ಆದರೆ ಅದಕ್ಕಾಗಿ ದೇಶದ ಚುನಾಯಿತ ಪ್ರಧಾನಿ ಪಾಕಿಸ್ತಾನದ ಗಡಿ ಭಾಗದಿಂದ 18 ಕಿಲೋಮೀಟರ್‌ ದೂರದಲ್ಲಿ ಸೇತುವೆ ಮೇಲೆ 20 ನಿಮಿಷ ವಾಹನಗಳು ಮತ್ತು ಜನ ಜಂಗುಳಿಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು ಪ್ರಬುದ್ಧ ಪ್ರಜಾಪ್ರಭುತ್ವದ ಲಕ್ಷಣ ಏನಲ್ಲ. ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಹೋದಾಗ ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ನ ನಿಯಮಾವಳಿಗಳು ಇರುವ ‘ಬ್ಲ್ಯೂಬುಕ್‌’ನಲ್ಲಿ ಎಸ್‌ಪಿಜಿ, ಕೇಂದ್ರೀಯ ತನಿಖಾ ದಳ, ರಾಜ್ಯ ಪೊಲೀಸರು, ಸ್ಥಳೀಯ ಜಿಲ್ಲಾ​ಧಿಕಾರಿಗಳ ಕರ್ತವ್ಯ ಏನು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಹೀಗಿದ್ದರೂ ತಪ್ಪು ಯಾರದ್ದು, ಆ ತಪ್ಪು ಸ್ಥಳೀಯ ಪೊಲೀಸರ ಅಚಾತುರ್ಯದಿಂದ ನಡೆದಿದ್ದಾ ಅಥವಾ ಸ್ಪೆಷಲ್‌ ಪ್ರೊಟೆಕ್ಷನ್‌ ಕಡೆಯಿಂದ ಆದ ಹೊಂದಾಣಿಕೆ ಸಮಸ್ಯೆಯೇ ಎಂದು ದೇಶದ ಜನಕ್ಕೆ ಗೊತ್ತಾಗಬೇಕು. ಚುನಾವಣಾ ರಾಜಕೀಯಕ್ಕೆ ಒಂದು ಮಿತಿಯಿದೆ. ಅದರಾಚೆಗೆ ಆಟ ಹಿಗ್ಗಿಸುವ ಅಪ್ರಬುದ್ಧತೆ ತೋರಿದರೆ ಪ್ರಜಾಪ್ರಭುತ್ವಗಳು ಉಳಿಯೋದಿಲ್ಲ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂವಿಧಾನಾತ್ಮಕ ಹುದ್ದೆಗಳಲ್ಲಿ ಕುಳಿತಿರುವವರು ಅರ್ಥ ಮಾಡಿಕೊಳ್ಳೋದು ಒಳ್ಳೆಯದು. ಅದನ್ನೇ ಅಲ್ಲವೇ ಪ್ಲೂಟೋ ತನ್ನ ರಿಪಬ್ಲಿಕ್‌ನಲ್ಲಿ ‘ರಾಜಧರ್ಮ’ ಎಂದು ಉಲ್ಲೇಖಿಸಿದ್ದು.

PM Modi Security Breach ಪ್ರಧಾನಿ ಮೋದಿಗಾಗಿ ಹುಬ್ಬಳ್ಳಿಯಲ್ಲಿ ಮೃತ್ಯುಂಜಯ ಹೋಮ

ಫಿರೋಜ್‌ಪುರದಲ್ಲಿ ನಡೆದಿದ್ದೇನು?

ಪಂಜಾಬ್‌ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಫಿರೋಜ್‌ಪುರಕ್ಕೆ ಹೋಗಬೇಕಿದ್ದ ಪ್ರಧಾನಿ ದಿಲ್ಲಿಯಿಂದ ವಾಯುಸೇನೆಯ ಭಟಿಂಡಾ ಏರ್‌ಬೇಸ್‌ನಲ್ಲಿ ಇಳಿದಿದ್ದು 10:30ಕ್ಕೆ. ಅಲ್ಲಿ ಮುಖ್ಯಮಂತ್ರಿ ಬದಲಾಗಿ ಪ್ರಧಾನಿಯನ್ನು ಸ್ವಾಗತಿಸಿದ್ದು ಹಣಕಾಸು ಸಚಿವ ಮನಪ್ರೀತ್‌ ಬಾದಲ್‌. ಭಟಿಂಡಾದಿಂದ ಫಿರೋಜ್‌ಪುರದ ಹತ್ತಿರ ಇರುವ ಹುಸೇನಿವಾಲಾದ ರಾಷ್ಟ್ರೀಯ ಹುತಾತ್ಮ ಸ್ಮಾರಕಕ್ಕೆ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿದ್ದ ಪ್ರಧಾನಿ ಮೋದಿ ಅವರಿಗೆ ಹವಾಮಾನದ ವೈಪರೀತ್ಯದ ಕಾರಣದಿಂದ ಹಾರಲು ಸಾಧ್ಯ ಆಗಲಿಲ್ಲ.

30 ನಿಮಿಷ ಕಾದ ಬಳಿಕ ಪ್ರಧಾನಿಯನ್ನು ಪರ್ಯಾಯ ರಸ್ತೆ ಮಾರ್ಗದಲ್ಲಿ ಕರೆದುಕೊಂಡು ಹೋಗಲು ತೀರ್ಮಾನಿಸಿದಾಗ ಪಂಜಾಬ್‌ನ ಡಿಜಿ ಇದಕ್ಕೆ ಒಪ್ಪಿಗೆ ಕೂಡ ಕೊಟ್ಟಿದ್ದಾರೆ. ಆದರೆ ಪ್ರಧಾನಿ ಅದೇ ರಸ್ತೆ ಮೇಲೆ ಹೋಗುತ್ತಾರೆ ಎಂದು ಗೊತ್ತಿದ್ದೂ ಹುಸೇನಿವಾಲಾದ 15 ಕಿಲೋಮೀಟರ್‌ ದೂರದಲ್ಲಿ ರೈತರನ್ನು ರಸ್ತೆಯಿಂದ ತೆರವುಗೊಳಿಸಿ ದಾರಿಯನ್ನು ಕ್ಲಿಯರ್‌ ಮಾಡದೇ ಇರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಮೂಲ ಕಾರಣ. ನಿಯಮಾವಳಿ ಪ್ರಕಾರ ರಸ್ತೆ ತೆರವುಗೊಳಿಸಿ ಪ್ರಧಾನಿ ಹೋಗುವಾಗ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳುವುದು ಸ್ಥಳೀಯ ಪೊಲೀಸರ ಕೆಲಸ. ಅಲ್ಲಿ ಭಾರೀ ಲೋಪ ಆಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಆ ಲೋಪ ಆಗಿದ್ದು ರಾಜಕೀಯ ಕಾರಣಕ್ಕಾ ಅಥವಾ ಕೊನೆ ಕ್ಷಣದ ಸಮನ್ವಯದ ಕೊರತೆಯೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕು.

ಎಸ್‌ಪಿಜಿ ನಿಯಮಾವಳಿ ಏನು?

ದೇಶದ ಯಾವುದೇ ಭಾಗಕ್ಕೆ ಪ್ರಧಾನಿ ಹೋಗುವುದಿದ್ದರೂ ಪ್ರಧಾನಿಯ ಭದ್ರತೆ ನೋಡಿಕೊಳ್ಳುವ ಎಸ್‌ಪಿಜಿಯವರು ಹತ್ತು ದಿನ ಮುಂಚಿತವಾಗಿ ಹೋಗಿ ಜಿಲ್ಲಾ​ಧಿಕಾರಿ, ಪೊಲೀಸ್‌ ವರಿಷ್ಠರು, ಕೇಂದ್ರ ಹಾಗೂ ರಾಜ್ಯದ ಬೇಹುಗಾರಿಕಾ ದಳಗಳ ಜೊತೆ ಮೊದಲೇ ಡ್ರಿಲ್‌ ಮಾಡಿ ಪ್ರಧಾನಿಯ ನಿಮಿಷ ನಿಮಿಷದ ಕಾರ್ಯಕ್ರಮ ನಿಗದಿ ಮಾಡಿರುತ್ತಾರೆ. ಒಂದು ವೇಳೆ ಹಾರಲು ಸಾಧ್ಯ ಆಗದೇ ಹೋದರೆ ರಸ್ತೆ ಮಾರ್ಗದ ಪರ್ಯಾಯ, ಅದಕ್ಕೆ ಭದ್ರತೆ, ರಸ್ತೆ ಸಂಪೂರ್ಣ ತೆರವುಗೊಳಿಸುವುದು ಎಲ್ಲವೂ ಯೋಜನೆ ಆಗಿರುತ್ತದೆ. ಅದು ಎಷ್ಟೆಂದರೆ ಪೂರ್ತಿ ಮಾರ್ಗ ತಪಾಸಣೆ ಮಾಡಿ 100 ಮೀಟರ್‌ಗೆ ಒಬ್ಬರಂತೆ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.

ಅಷ್ಟೇ ಅಲ್ಲ, ರಸ್ತೆಯ ಇಕ್ಕೆಲಗಳ ಕಟ್ಟಡಗಳ ಮೇಲ್ಭಾಗದಲ್ಲಿ ಬಂದೂಕುಧಾರಿ ಪೊಲೀಸರು ಇರುತ್ತಾರೆ. ಇಷ್ಟೆಲ್ಲಾ ಇದ್ದರೂ ಪ್ರಧಾನಿ ಮೇಲ್ಸೇತುವೆ ಮೇಲೆ ಹೋದಾಗ ಕೆಳಗಡೆ ಖಾಸಗಿ ವಾಹನಗಳು ನಿಂತಿದ್ದವು. ಅಷ್ಟೇ ಅಲ್ಲ, ಪ್ರಧಾನಿ ವಾಹನಗಳ ಹತ್ತಿರದವರೆಗೆ ಗುಂಪು ಪ್ರವೇಶ ಪಡೆದಿರುವುದು ಸಾಮಾನ್ಯ ಸಂಗತಿ ಏನಲ್ಲ. ಭದ್ರತೆ ಮತ್ತು ಪ್ರೊಟೊಕಾಲ್‌ಗಳು ರಾಜಕೀಯದಾಚೆಯ ಸಂಗತಿಗಳು. ಇಂಥ ಅಚಾತುರ್ಯಗಳಿಂದಲೇ ನಾವು ಈಗಾಗಲೇ ಇಬ್ಬರು ಪ್ರಧಾನಿ, ಮತ್ತೊಬ್ಬರು ಮಾಜಿ ಪ್ರಧಾನಿಯನ್ನು ಕಳೆದುಕೊಂಡಿದ್ದೇವೆ.

PM Modi Security Breach: ಸುಪ್ರೀಂ ಅಂಗಳ ತಲುಪಿದ ಭದ್ರತಾ ಲೋಪ, ಎಲ್ಲರ ಚಿತ್ತ ತೀರ್ಮಾನದತ್ತ!

ಅಟಲ್‌ ಕಾಲದ ಘಟನೆ

ಅಟಲ್‌ ಬಿಹಾರಿ ವಾಜಪೇಯಿ 1999ರಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಬಸ್‌ನಲ್ಲಿ ಹೋಗಿದ್ದಾಗ ಲಾಹೋರ್‌ ಕೋಟೆಗೆ ಭೇಟಿ ನಿಗದಿ ಆಗಿತ್ತು. ಅಲ್ಲಿನ ಪಂಜಾಬ್‌ ಮುಖ್ಯಮಂತ್ರಿಗಳು, ವಿದೇಶಾಂಗ ಸಚಿವರು ಎಲ್ಲರೂ ಕಾಯುತ್ತಿದ್ದರು. ಇನ್ನೇನು ಪ್ರಧಾನಿ ಹೋಗಬೇಕು ಅನ್ನುವಾಗ ಎಸ್‌ಪಿಜಿ ಮುಖ್ಯಸ್ಥ ಆಗಿದ್ದ ಸಂಜೀವ್‌ ದಯಾಳ್‌, ಅಟಲ್‌ಜೀಗೆ ನೀವು ಹೋಗಕೂಡದು. ಸೆಕ್ಯುರಿಟಿ ಕ್ಲಿಯರೆನ್ಸ್‌ ಇಲ್ಲ’ ಎಂದು ಹೇಳಿ ವಾಹನಗಳನ್ನು ನಿಲ್ಲಿಸಿದರು. ಜಸ್ವಂತ್‌ ಸಿಂಗ್‌, ಬ್ರಜೇಶ್‌ ಮಿಶ್ರಾ ಆಗಿನ ವಿದೇಶಾಂಗ ಕಾರ್ಯದರ್ಶಿ ಎಲ್ಲರೂ ಹೇಳಿದರೂ ಸಂಜೀವ್‌ ದಯಾಳ್‌ ‘ನೋ’ ಎಂದು ಅನುಮತಿ ಕೊಡಲಿಲ್ಲ. ಕಾರಣ ಕೇಳಿದರೆ ‘ಕೋಟೆಗೆ ಹೋಗುವ ಮಾರ್ಗ ಮಧ್ಯೆ ಗುಂಪುಗಳು ನಿಂತಿವೆ. ಅದನ್ನು ತೆರವುಗೊಳಿಸಿ ಎಂದು ಪಾಕಿಸ್ತಾನದ ಪಂಜಾಬ್‌ನ ಪೊಲೀಸರಿಗೆ ಹೇಳಿದ್ದೇನೆ.

ಅವರು ರೋಡ್‌ ಕ್ಲಿಯರ್‌ ಮಾಡಲಿ’ ಎಂದುಬಿಟ್ಟರು. ಕೊನೆಗೆ 45 ನಿಮಿಷದ ನಂತರ ಅಟಲ್‌ ಅವರ ವಾಹನಗಳು ಅಲ್ಲಿಂದ ಹೊರಟಿದ್ದು. ಪಂಜಾಬ್‌ನಲ್ಲಿ ಕೂಡ 2 ವರ್ಷಗಳಿಂದ ಇಷ್ಟೆಲ್ಲಾ ಪ್ರತಿಕೂಲ ಸ್ಥಿತಿ ಇದ್ದಾಗ ರೈತರು ಪ್ರತಿಭಟನೆ ಕುಳಿತುಕೊಂಡಿದ್ದಾರೆ ಎಂದು ಗೊತ್ತಿದ್ದೂ ರೋಡ್‌ ಕ್ಲಿಯರೆನ್ಸ್‌ ಪೂರ್ತಿಯಾಗಿ ತೆಗೆದುಕೊಳ್ಳದೆ ಪ್ರಧಾನಿಗಳನ್ನು ಎಸ್‌ಪಿಜಿ ಕರೆದುಕೊಂಡು ಹೋಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ.

ಸಿಎಂ ಆಗಲು ಶೆಟ್ಟರ್‌ ಯತ್ನ

ಯಡಿಯೂರಪ್ಪ ರಾಜೀನಾಮೆ ನೀಡುವಾಗ ನಾನೇ ಮುಖ್ಯಮಂತ್ರಿ ಆಗಬಹುದು ಎಂದು ಮುಗುಮ್ಮಾಗಿ ಇದ್ದ ಜಗದೀಶ್‌ ಶೆಟ್ಟರ್‌ ಈಗ ಒಂದೇ ಸಮನೆ ದಿಲ್ಲಿ-ಬೆಂಗಳೂರುಗಳಲ್ಲಿ ಸಂಘದ ಕಾರ್ಯಾಲಯಗಳಿಗೆ ಓಡಾಡಿ, ‘ನನಗೆ ಅನ್ಯಾಯ ಆಗಿದೆ. ನಾನು ಪಕ್ಷಕ್ಕೆ, ಸಿದ್ಧಾಂತಕ್ಕೆ ದ್ರೋಹ ಮಾಡಿಲ್ಲ. ನನಗೆ ಇನ್ನೊಂದು ಅವಕಾಶ ಕೊಟ್ಟು ನೋಡಿ’ ಎಂದು ಕೇಳಿಕೊಳ್ಳುತ್ತಿದ್ದಾರಂತೆ. ಸಂಘದ ವರಿಷ್ಠರಾದ ದತ್ತಾತ್ರೇಯ ಹೊಸಬಾಳೆ, ಮುಕುಂದ, ಮಂಗೇಶ ಭೇಂಡೆ ಅವರನ್ನು ಭೇಟಿಯಾಗಿ ‘ನಾನು ಲಿಂಗಾಯತ ಸಮುದಾಯದವನು. ಸಂಘದ ಹಿನ್ನೆಲೆಯವನು. ಆದರೂ ನನ್ನನ್ನು ಕಡೆಗಣಿಸಿರುವುದು ಸರಿಯಲ್ಲ’ ಎಂದು ಹೇಳುತ್ತಿದ್ದಾರಂತೆ. ಯಡಿಯೂರಪ್ಪ ಅವರಂತೆ ಜಗದೀಶ್‌ ಶೆಟ್ಟರ್‌ ಅವರಿಗೂ ಈಗಲೇ ಸಕ್ರಿಯ ರಾಜಕಾರಣ ಬಿಟ್ಟು ರಾಜ್ಯಪಾಲರಾಗಿ ಹೋಗಲು ಇಷ್ಟಇಲ್ಲ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗಬೇಕು ಎಂಬ ಹುಮ್ಮಸ್ಸಿದೆ. ಹಿಂದೆ ಶೆಟ್ಟರ್‌ ಮನದಾಳವನ್ನು ದಿಲ್ಲಿಗೆ ತಲುಪಿಸಲು ಅನಂತಕುಮಾರ್‌ ಇದ್ದರು. ಈಗ ಯಾರೂ ಇಲ್ಲ. ಹೀಗಾಗಿ ಶೆಟ್ಟರ್‌ ಅವರು ಯಡಿಯೂರಪ್ಪಗೆ ದಿನದಿಂದ ದಿನಕ್ಕೆ ಆತ್ಮೀಯರಾಗುತ್ತಿದ್ದಾರೆ.

PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರೀಂ ಆದೇಶ!

ನಿಷ್ಠಾವಂತ ಯತ್ನಾಳ್‌?

2019ರಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಭಿನ್ನಮತೀಯರಾಗಿ ಗುರುತಿಸಿಕೊಂಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಈಗ ಏಕಾಏಕಿ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್‌ಗೆ ನಿಷ್ಠರಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸದ್ಯಕ್ಕೆ ಬೊಮ್ಮಾಯಿ ಮತ್ತು ನಿರಾಣಿ ನಡುವೆ ಅಷ್ಟೇನೂ ಸ್ನೇಹ ಇಲ್ಲದಿರುವುದು. ಒಂದು ವೇಳೆ ನಿರಾಣಿ ಅವರನ್ನು ಸಂಪುಟದಿಂದ ಕೈಬಿಡಲು ದಿಲ್ಲಿ ಅಸ್ತು ಎಂದರೆ ಪಂಚಮಸಾಲಿ ಒಬ್ಬರು ಬೇಕು. ಅದು ನಾನೇ ಆಗಿರುತ್ತೇನೆ ಎಂದು ಯತ್ನಾಳ್‌ ಗೌಡರ ಲೆಕ್ಕಾಚಾರ ಇದ್ದ ಹಾಗೆ ಕಾಣುತ್ತಿದೆ.

ಬೊಮ್ಮಾಯಿ ಅವರು ಯತ್ನಾಳ್‌ರನ್ನು ತಮ್ಮ ಸ್ವಕ್ಷೇತ್ರ ಶಿಗ್ಗಾವಿಗೂ ಕರೆದುಕೊಂಡು ಹೋಗಿ ನಿರಾಣಿ ಎದುರು ಭಾಷಣ ಮಾಡಿಸಿದ್ದಾರೆ. ನಿರಾಣಿ ಪಂಚಮಸಾಲಿಗಳನ್ನು ಎತ್ತಿ ಕಟ್ಟಿದರೆ, ಇನ್ನೊಬ್ಬ ನನ್ನ ಜೊತೆ ಇರಲಿ ಅನ್ನುವುದು ಬೊಮ್ಮಾಯಿ ಲೆಕ್ಕಾಚಾರವಂತೆ. ಈಗೀಗ ಯತ್ನಾಳ್‌ ಗೌಡರು, ಬೊಮ್ಮಾಯಿ ಅವರನ್ನು ಹೊಗಳಲು ಶುರುಮಾಡಿದ್ದಾರೆ. ಆದರೆ ಯತ್ನಾಳ್‌ ಹೊಗಳಲು ಬಹಳ ಹೊತ್ತು ತೆಗೆದುಕೊಳ್ಳುತ್ತಾರೆ. ಬಯ್ಯಲು ಅವರಿಗೆ ನಿಮಿಷ ಸಾಕು ಎನ್ನುವುದು ಇತಿಹಾಸದ ಪಾಠ.

ಯುಪಿ ಪುತ್ಥಳಿ ರಾಜಕಾರಣ

ಚುನಾವಣೆ ಹತ್ತಿರ ಬಂದರೆ ಸಾಕು ನೋಡಿ ಅರ್ಧಂಬರ್ಧ ಆಗಿರುವ ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಉದ್ಘಾಟನೆಗಳು, ಭೂಮಿ ಪೂಜೆಗಳು ಗಂಟೆಗೊಂದರಂತೆ ನಡೆಯುತ್ತವೆ. ಈಗ ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಅವರು ಚುನಾವಣೆ ಹೊಸ್ತಿಲಲ್ಲಿ ಪುತ್ಥಳಿ ಅನಾವರಣವನ್ನೂ ಸೇರಿಸಿದ್ದಾರೆ. ಪ್ರಯಾಗರಾಜ್‌ನಲ್ಲಿ 50 ಅಡಿ ಉದ್ದದ ಪ್ರಭು ಶ್ರೀ ರಾಮಚಂದ್ರ ನಿಷಾದ ರಾಜನನ್ನು ಅಪ್ಪಿಕೊಂಡ ಭವ್ಯ ಮೂರ್ತಿ, ಬಹರಿಚ್‌ನಲ್ಲಿ ರಾಜಾ ಸುಹೈಲ್‌ ದೇವ್‌ ಕುದುರೆ ಮೇಲಿರುವ 40 ಅಡಿ ಉದ್ದದ ಪುತ್ಥಳಿ, ಗೋರಖ್‌ಪುರದ ಬೆಟ್ಟದ ಮೇಲೆ ಬಾಬಾ ಗೋರಖನಾಥನ 45 ಅಡಿ ಉದ್ದದ ಮೂರ್ತಿ ಮತ್ತು ಚಿತ್ರಕೂಟದಲ್ಲಿ ವಾಲ್ಮೀಕಿ ಮಹರ್ಷಿಗಳ 13 ಅಡಿ ಉದ್ದದ ಮೂರ್ತಿಯನ್ನು ಚುನಾವಣೆ ಘೋಷಣೆ ಆಗುವ ಮೊದಲು ಯೋಗಿ ಉದ್ಘಾಟನೆ ಮಾಡುತ್ತಿದ್ದಾರೆ. ಅಷ್ಟಕ್ಕೇ ನಿಂತಿಲ್ಲ, ಶಹಜಹಾನ್‌ಪುರಕ್ಕೆ ಪರಶುರಾಮಪುರ ಎಂದು ಯೋಗಿ ಸದ್ಯದಲ್ಲೇ ನಾಮಕರಣ ಮಾಡಲಿದ್ದಾರೆ. ಪುತ್ಥಳಿ ಇಡುವುದು, ಹೆಸರು ಬದಲಾಯಿಸುವುದು ಸರ್ಕಾರದ ವಿವೇಚನೆ ಹೌದು. ಆದರೆ ಚುನಾವಣೆ ಹೊಸ್ತಿಲಲ್ಲೇ ಮಾಡುವುದು ಮಾತ್ರ ಸೋಜಿಗದ ಸಂಗತಿ. ವೋಟು ನಿಮಿತ್ತಂ ಬಹುಕೃತ ವೇಷಂ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!