ರಫ್ತುದಾರರಿಗೆ ಟ್ರಂಪ್‌ ತೆರಿಗೆ ಹೊರೆ ತಪ್ಪಿಸಲು ಮೋದಿ ಸರ್ಕಾರದ ಕ್ರಮ

Kannadaprabha News   | Kannada Prabha
Published : Aug 29, 2025, 03:20 AM IST
Narendra Modi emplanes for Tokyo

ಸಾರಾಂಶ

 ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶೀಯ ರಫ್ತುದಾರರಿಗೆ ನೆರವು ನೀಡಲು ವಿವಿಧ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

 ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶೀಯ ರಫ್ತುದಾರರಿಗೆ ನೆರವು ನೀಡಲು ವಿವಿಧ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾತನಾಡಿದ್ದು, ‘ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರವು ಗಮನ ಹರಿಸಿದ್ದು, ಅವರಿಗೆ ಸಹಾಯ ಮಾಡಲು ಸಕಾರಾತ್ಮಕವಾಗಿ ಕೆಲಸ ಮಾಡುತ್ತಿದೆ. ಅಮೆರಿಕ ಹೊರತುಪಡಿಸಿ ಇತರೆ ದೇಶಗಳಿಗೆ ರಫ್ತು ಮಾಡುವುದು, ಹೊಸ ಮುಕ್ತ ವ್ಯಾಪಾರ ಒಪ್ಪಂದ ಅನುಷ್ಠಾನ, ರಫ್ತುದಾರರಿಗೆ ವಿವಿಧ ರೀತಿಯ ಬೆಂಬಲದ ಕ್ರಮ ಜಾರಿ, ದೇಶಿಯ ಮಾರುಕಟ್ಟೆಗಳ ಬೆಳವಣಿಗೆ ಸೇರಿದಂತೆ ವಿವಿಧ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಇದರ ಜತೆಗೆ ತೆರಿಗೆ ಹೊಡೆತಕ್ಕೆ ಸಿಕ್ಕ ವಲಯಗಳ ರಫ್ತುದಾರರು ತುರ್ತು ಸಾಲ ಪಡೆಯಲು ಸರ್ಕಾರವೇ ಖಾತರಿ ನೀಡುವುದು, ರಫ್ತು ಸಾಲದ ಮರುಪಾವತಿಗೆ ಕೆಲ ಕಾಲ ವಿನಾಯ್ತಿ ನೀಡುವುದು, ರಫ್ತು ಮಾಡಿದ ವಸ್ತುಗಳಿಗೆ ಹಣ ಸ್ವೀಕೃತಿ ವಿಳಂಬವಾದರೆ ಅಂಥ ಪ್ರಕರಣಗಳಲ್ಲಿ ನೆರವು ಮೊದಲಾದ ಅಂಶಗಳು ಸರ್ಕಾರದ ಪರಿಶೀಲನೆಯಲ್ಲಿದೆ ಎನ್ನಲಾಗಿದೆ.

ರಫ್ತು ಉತ್ತೇಜನದ ನಿಟ್ಟಿನಲ್ಲಿ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಅಂದಾಜು 25000 ಕೋಟಿ ರು.ಗಳ ನೆರವನ್ನು ತಕ್ಷಣವೇ ರಫ್ತುದಾರರ ನೆರವಿಗೆ ಬಳಸುವ ಚಿಂತನೆಯನ್ನೂ ಸರ್ಕಾರ ಇದೆ ಎನ್ನಲಾಗಿದೆ.

ಹಿನ್ನಡೆ ಸರಿಯಾಗಿ ನಿಭಾಯಿಸಿದ್ರೆ ಆರ್ಥಿಕತೆ ಮತ್ತಷ್ಟು ಗಟ್ಟಿ: ಕೇಂದ್ರ

ನವದೆಹಲಿ: ಭಾರತೀಯ ವಸ್ತುಗಳ ರಫ್ತಿನ ಮೇಲೆ ಈಗಾಗಲೇ ಅಮೆರಿಕ ಹೇರಿರುವ ತೆರಿಗೆಯು ತಕ್ಷಣಕ್ಕೆ ಹೇಳಿಕೊಳ್ಳುವಂಥ ಪರಿಣಾಮ ಬೀರದೇ ಇರಬಹುದು. ಆದರೆ, ಹೆಚ್ಚುವರಿ ಶೇ.25ರ ತೆರಿಗೆಯು ದೇಶದ ಅರ್ಥ ವ್ಯವಸ್ಥೆಯಲ್ಲಿ ಸವಾಲುಗಳನ್ನು ಸೃಷ್ಟಿಸಲಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹಣಕಾಸು ಸಚಿವಾಲಯದ ವರದಿ ಹೇಳಿದೆ.ಒಂದು ವೇಳೆ ಇಂಥ ಹಿನ್ನಡೆಗಳನ್ನು ನಾವು ಸರಿಯಾಗಿ ನಿಭಾಯಿಸಿದರೆ ಅವು ನಮ್ಮನ್ನು ಹೆಚ್ಚು ಬಲಿಷ್ಠ ಮತ್ತು ಸಕ್ರಿಯಗೊಳಿಸಲು ನೆರವು ನೀಡುತ್ತದೆ ಎಂದೂ ವರದಿ ತಿಳಿಸಿದೆ.

ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಸಿಕ ಆರ್ಥಿಕ ಪರಿಶೀಲನಾ ವರದಿಯಲ್ಲಿ ಭಾರತದಿಂದ ರಫ್ತಾಗುತ್ತಿರುವ ವಸ್ತುಗಳ ಮೇಲೆ ಅಮೆರಿಕದ ಶೇ.50ರಷ್ಟು ತೆರಿಗೆಯ ಪರಿಣಾಮಗಳ ಕುರಿತ ಬೆಳೆಕು ಚೆಲ್ಲಲಾಗಿದೆ. ಜತೆಗೆ, ಅಮೆರಿಕ ಜತೆಗಿನ ತೆರಿಗೆ ಬಿಕ್ಕಟ್ಟು ಸೃಷ್ಟಿಸಿರುವ ಸವಾಲುಗಳ ನಡುವೆಯೂ ಸರ್ಕಾರದ ಸುಧಾರಣಾ ಕ್ರಮಗಳು, ಈಗಾಗಲೇ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳು ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿವೆ ಎಂದು ಅಭಿಪ್ರಾಯಪಟ್ಟಿದೆ.ಸದ್ಯೋಭವಿಷ್ಯದ ಆರ್ಥಿಕ ಹೊಡೆತವನ್ನು ಹಣಕಾಸು ಬಲ ಮತ್ತು ಸಾಮರ್ಥ್ಯ ಹೊಂದಿರುವವರು ಸಹಿಸಿಕೊಂಡರೆ ಕೆಳಹಂತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈ ವ್ಯಾಪಾರ ಬಿಕ್ಕಟ್ಟಿನ ಸವಾಲುಗಳಿಂದ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಇದೀಗ ಎಲ್ಲರೂ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತೆರಿಗೆಯ ಅನಿಶ್ಚಿತತೆಯಿಂದಾಗಿ ಸದ್ಯೋಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ರಿಸ್ಕ್ ಇದ್ದರೂ ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳು ಜತೆಯಾಗಿ ಕೆಲಸ ಮಾಡಿದರೆ ಆರ್ಥಿಕತೆ ಮೇಲಾಗುವ ಹಾನಿ ಇಳಿಸಬಹುದು. ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶವು ವೈವಿಧ್ಯಮಯ ವ್ಯಾಪಾರ ತಂತ್ರಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.ಇದೇ ವೇಳೆ ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ತೆರಿಗೆ ಮಾತುಕತೆ ಮಹತ್ವದ್ದಾಗಿದೆ ಎಂದು ತಿಳಿಸಿರುವ ಸಚಿವಾಲಯವು, ಸದ್ಯ

ಸರ್ಕಾರವು ಅಮೆರಿಕ, ಯುರೋಪಿಯನ್‌ ಯೂನಿಯನ್‌, ನ್ಯೂಜಿಲ್ಯಾಂಡ್‌, ಚಿಲಿ, ಪೆರು ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸುತ್ತಿದೆ. ಇದು ಅಂತಾರಾಷ್ಟ್ರೀಯ ವ್ಯಾಪಾರದ ವ್ಯೂಹಾತ್ಮಕ ಮರುಹೊಂದಾಣಿಕೆಯ ಪ್ರಯತ್ನದ ಭಾಗವಾಗಿದೆ. ಆದರೆ ಈ ಪ್ರಯತ್ನಗಳು ತಕ್ಷಣಕ್ಕೆ ಯಾವುದೇ ಫಲಿತಾಂಶ ನೀಡದೇ ಹೋಗಬಹುದು. ಅಮೆರಿಕದ ತೆರಿಗೆ ಹೇರಿಕೆಯಿಂದಾಗಿ ಸೃಷ್ಟಿಯಾಗಿರುವ ಸವಾಲುಗಳನ್ನು ಪೂರ್ಣವಾಗಿ ಪರಿಹರಿಸದಿರಬುಹುದು ಎಂದೂ ವರದಿಯಲ್ಲಿ ಹಣಕಾಸು ಸಚಿವಾಲಯವು ಅಭಿಪ್ರಾಯಪಟ್ಟಿದೆ.

ರಷ್ಯಾ ತೈಲ ಖರೀದಿಯಿಂದ ಭಾರತಕ್ಕೆ ₹2.5 ಲಕ್ಷ ಕೋಟಿ ಅಲ್ಲ 21000 ಕೋಟಿ ಲಾಭ

ನವದೆಹಲಿ: ರಷ್ಯಾದಿಂದ ರಿಯಾಯ್ತಿ ದರಕ್ಕೆ ತೈಲ ಖರೀದಿಯಿಂದ ಭಾರತ ವಾರ್ಷಿಕ 2.5 ಲಕ್ಷ ಕೋಟಿ ರು. ಲಾಭ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಹಣಕಾಸು ಸಂಸ್ಥೆಯೊಂದರ ಸಂಶೋಧನಾ ವರದಿ ಅಲ್ಲಗಳೆದಿದೆ.ಉಕ್ರೇನ್‌ ಯುದ್ಧ ಜಾರಿ ಬಳಿಕ ಯುರೋಪಿಯನ್‌ ದೇಶಗಳು ನೇರವಾಗಿ ರಷ್ಯಾದ ತೈಲ ಖರೀದಿ ನಿಲ್ಲಿಸಿವೆ. ಆದರೆ ರಷ್ಯಾ, ರಿಯಾಯ್ತಿ ಆಫರ್‌ ನೀಡಿದ ಹಿನ್ನೆಲೆಯಲ್ಲಿ ಭಾರತ ಇದೀಗ ತನ್ನ ಒಟ್ಟು ಬೇಡಿಕೆಯ ಶೇ.40ರಷ್ಟನ್ನು (ನಿತ್ಯ 54 ಲಕ್ಷ ಬ್ಯಾರೆಲ್‌) ರಷ್ಯಾದಿಂದಲೇ ಖರೀದಿ ಮಾಡುತ್ತಿದೆ. ಇದರ ವಿರುದ್ಧ ಅಮೆರಿಕ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಈ ನಡುವೆ, ಒಂದು ವೇಳೆ ವಿಶ್ವದ ಅತಿದೊಡ್ಡ ತೈಲ ಖರೀದಿ ದೇಶವಾದ ಭಾರತ ರಷ್ಯಾದಿಂದ ತೈಲ ಖರೀದಿ ಮಾಡದಂತೆ ನಿರ್ಬಂಧ ಹೇರಿದರೆ ಆಗ ಭಾರತ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 100 ಡಾಲರ್‌ ದಾಟಲಿದೆ ಎಂದು ಸಿಎಲ್‌ಎಸ್‌ಎ ಸಂಸ್ಥೆಯ ವರದಿ ಹೇಳಿದೆ.

ಟ್ರಂಪ್‌ ತೆರಿಗೆ ಹೊಡೆತ: ರಫ್ತಿನಲ್ಲಿ 43% ಇಳಿಕೆ?

ನವದೆಹಲಿ: ಟ್ರಂಪ್‌ ಹೇರಿರುವ ಶೇ.50 ಸುಂಕವು ಈಗಾಗಲೇ ಜಾರಿಯಾಗಿದ್ದು, ಇದರಿಂದಾಗಿ ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ವಸ್ತುಗಳಲ್ಲಿ ಶೇ.43ರಷ್ಟು ಕುಸಿತವಾಗುವ ಅಂದಾಜಿದೆ. ಸುಂಕದಿಂದಾಗಿ ಅಮೆರಿಕದ ಮಾರುಕಟ್ಟೆಗಳಲ್ಲಿ ಭಾರತದ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, ಸ್ವಾಭಾವಿಕವಾಗಿ ಬೇಡಿಕೆ ಕುಸಿಯುತ್ತದೆ. ಇದರಿಂದ ಆಮದು ಕೂಡ ಕಡಿಮೆಯಾಗುತ್ತದೆ. ಭಾರತ ಅಮೆರಿಕಕ್ಕೆ ವಾರ್ಷಿಕ 7.5 ಲಕ್ಷ ಕೋಟಿ ರು. ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತದೆ. ಆದರೆ ತೆರಿಗೆಯಿಂದಾಗಿ ಇದರಲ್ಲಿ ಶೇ.70ರಷ್ಟು ಕಡಿಮೆಯಾಗಬಹುದು ಎಂದು ಜಿಟಿಆರ್‌ಐ ಅಂದಾಜಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್