
28 MLC polls in 4 states Congress wins zero: SIR ವಿವಾದದ ನಡುವೆ ಇಂಡಿಯಾ ಮೈತ್ರಿಕೂಟವು ನಾಳೆ ನಾಡಿದ್ದು ಎರಡು ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ. ಮೊದಲನೆಯದಾಗಿ ಅಕ್ಟೋಬರ್ 30ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜನರ ಮಹಾಭಿಯಾನ ಆರಂಭಿಸಲು ಮೈತ್ರಿಕೂಟ ಸಿದ್ಧತೆ ನಡೆಸಲಿದೆ. ಅಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮುಂದಿನ ಹೋರಾಟದ ಕುರಿತಂತೆ ಮಹತ್ವದ ಚರ್ಚೆ ನಡೆಯಲಿದೆ.
ಇದಾದ ಎರಡು ದಿನಗಳ ಬಳಿಕ ಅಂದರೆ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಬೃಹತ್ ರ್ಯಾಲಿ ನಡೆಸಲಿದೆ. ಇದಕ್ಕಾಗಿ ‘ಚಲೋ ದೆಹಲಿ’ಗೆ ಕರೆ ನೀಡಿದೆ. ಆದರೆ ಇಂಡಿ ಒಕ್ಕೂಟದ ಎಲ್ಲ ಪ್ಲಾನ್ಗಳನ್ನು ವಿಧಾನಪರಿಷತ್ ಚುನಾವಣಾ ಫಲಿತಾಂಶವು ತಲೆಕೆಳಗಾಗುವಂತೆ ಮಾಡಿದೆ.
ಇದನ್ನೂ ಓದಿ: SIR ವಿಚಾರದಲ್ಲಿ ಜ್ಞಾನೇಶ್ ರಾಜೀನಾಮೆ ಕೇಳುವ ಕಾಂಗ್ರೆಸ್ಗೆ ಸಿಟಿ ರವಿ ಓಪನ್ ಚಾಲೆಂಜ್!
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದಲ್ಲದೆ ಕಾಂಗ್ರೆಸ್ ನಡೆಸಲಿರುವ ಹೋರಾಟಕ್ಕೆ ಹಿನ್ನೆಲೆಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಈ ಫಲಿತಾಂಶದಿಂದ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಅಸ್ತ್ರ ಸಿಕ್ಕಂತಾಗಿದೆ.
ಒಟ್ಟು 28 ವಿಧಾನ ಪರಿಷತ್ ಸ್ಥಾನಗಳ ಪೈಕಿ ಬಿಜೆಪಿ 21 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಅಥವಾ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ, ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ.
ಅದರಲ್ಲೂ ಕಾಂಗ್ರೆಸ್ ಪಕ್ಷದ ಸರ್ಕಾರವೇ ಆಡಳಿತ ನಡೆಸುತ್ತಿರುವ ಕರ್ನಾಟಕದಲ್ಲಿ ಅತಿದೊಡ್ಡ ಹಿನ್ನಡೆಯಾಗಿದೆ. ರಾಜ್ಯದ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಪೈಕಿ ಒಂದರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿತು.
ಬಿಹಾರದಲ್ಲಿ ದರ್ಭಾಂಗಾ ಶಿಕ್ಷಕರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುರೇಶ್ ಪ್ರಸಾದ್ ರೈ ಅವರು ಹಾಲಿ ಕಾಂಗ್ರೆಸ್ ಎಂಎಲ್ಸಿ ಮದನ್ ಮೋಹನ್ ಝಾ ಅವರನ್ನು 324 ಮತಗಳಿಂದ ಸೋಲಿಸುವ ಮೂಲಕ ಶಾಕ್ ನೀಡಿದ್ದಾರೆ. ಇಂಡಿ ಬ್ಲಾಕ್ ಭಾಗವೇ ಆಗಿರುವ ಸಮಾಜವಾದಿ ಪಕ್ಷ (ಎಸ್ಪಿ) ಉತ್ತರ ಪ್ರದೇಶದಲ್ಲಿ ಅಚ್ಚರಿ ಮೂಡಿಸಿತು. ಉತ್ತರ ಪ್ರದೇಶದ 11 ವಿಧಾನ ಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಆರು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಲ್ಕು ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಎರಡು ಸ್ಥಾನಗಳನ್ನು ಗೆದ್ದಿದೆ. ಉಳಿದ ಐದು ಸ್ಥಾನಗಳಿಗೆ ಇನ್ನೂ ಎಣಿಕೆ ಮುಂದುವರೆದಿದ್ದು ಎಸ್ಪಿ ಮೂರರಲ್ಲಿ ಮತ್ತು ಬಿಜೆಪಿ ಎರಡರಲ್ಲಿ ಮುನ್ನಡೆ ಸಾಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ