ಎಎಪಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಮಾಣ ವಚನದ ವೇಳೆ ಎಡವಟ್ಟು ಮಾಡಿಕೊಂಡು ಎರಡೆರಡು ಭಾರಿ ಪ್ರಮಾಣ ವಚನ ಸ್ವೀಕರಿಸಬೇಕಾಗಿ ಬಂದ ಪ್ರಸಂಗ ರಾಜ್ಯಸಭೆಯಲ್ಲಿ ನಡೆದಿದೆ.
ನವದೆಹಲಿ: ಎಎಪಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಮಾಣ ವಚನದ ವೇಳೆ ಎಡವಟ್ಟು ಮಾಡಿಕೊಂಡು ಎರಡೆರಡು ಭಾರಿ ಪ್ರಮಾಣ ವಚನ ಸ್ವೀಕರಿಸಬೇಕಾಗಿ ಬಂದ ಪ್ರಸಂಗ ರಾಜ್ಯಸಭೆಯಲ್ಲಿ ನಡೆದಿದೆ. ನಿನ್ನೆ ಗುರುವಾರ ಮಧ್ಯಾಹ್ನ ರಾಜ್ಯಸಭಾ ಸದಸ್ಯರಾಗಿ ಸ್ವಾತಿ ಮಲಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಪ್ರಮಾಣವಚನ ಪೂರ್ಣಗೊಳಿಸಿದ ಅವರು ಕೊನೆಯಲ್ಲಿ ಇನ್ಖ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರಿಂದ ರಾಜ್ಯಸಭಾ ಅಧ್ಯಕ್ಷರು ಅವರಿಗೆ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದರು ಎಂದು ತಿಳಿದು ಬಂದಿದೆ.
ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ತಮ್ಮ ಉಗ್ರ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಸ್ವಾತಿ ಮಾಲಿವಾಲ್ ಅವರು ಪ್ರಮಾಣವಚನವನ್ನು ತಪ್ಪಾಗಿ ಓದಿದ ಕಾರಣಕ್ಕೆ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್, ಸ್ವಾತಿಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಹೇಳಿದ್ದರು ಇದರ ಜೊತೆಗೆ ಇವರ ಪ್ರಮಾಣ ವಚನದ ವೇಳೆ ಎಎಪಿ ಸದಸ್ಯರು ಘೋಷಣೆಗಳನ್ನು ಕೂಗಿದ್ದು ಕೂಡ ರಾಜ್ಯಸಭಾ ಅಧ್ಯಕ್ಷರು ಅವರಿಗೆ ಪ್ರಮಾಣ ವಚನ 2ನೇ ಬಾರಿ ಸ್ವೀಕರಿಸುವಂತೆ ಹೇಳಲು ಒಂದು ಕಾರಣ ಎಂದು ವರದಿಯಾಗಿದೆ.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಎಳೆದೊಯ್ದ ಕಾರು!
ಆಮ್ ಆದ್ಮಿ ಪಕ್ಷದ ಸದಸ್ಯೆಯಾಗಿರುವ ಸ್ವಾತಿ ಮಲಿವಾಲ್ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಅವರದೇ ಪಕ್ಷದ ಮತ್ತೊಬ್ಬ ಸದಸ್ಯ ಹಾಗೂ ಹಣಕಾಸು ನೀತಿ ತಜ್ಞ ನರೇನ್ ದಾಸ್ ಗುಪ್ತಾ ಕೂಡ ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಮೇಲ್ಮನೆಯಲ್ಲಿ ನರೇನ್ ದಾಸ್ ಗುಪ್ತಾ ಅವರ ಎರಡನೇ ಅವಧಿಯಾಗಿದೆ. ಹಾಗೆಯೇ ಶಿಕ್ಷಣ ತಜ್ಞ ಸತ್ನಾಮ್ ಸಿಂಗ್ ಸಂಧು ಕೂಡ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಸತ್ನಾಮ್ ಸಿಂಗ್ ಸಂಧು ಅವರು ಚಂಡೀಗಢ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಯಾಗಿದ್ದಾರೆ. ಈ ಮೂಲಕ ಈ ಮೂವರು ನೂತನ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ರಾಜ್ಯಸಭಾ ಸದಸ್ಯರೆನಿಸಿಕೊಂಡಿದ್ದಾರೆ.
ಹಳೆ ರೇಪ್ ವಿಡಿಯೋ ಪೋಸ್ಟ್: ಮಹಿಳಾ ಆಯೋಗ ಮುಖ್ಯಸ್ಥೆ ಎಡವಟ್ಟು
ಸಂಸತ್ ಭವನಕ್ಕೆ ಭೇಟಿ ನೀಡುವ ಮೊದಲು ಮಲಿವಾಲ್ ಕನ್ನಾಟ್ ಬಳಿ ಇರುವ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಗೆ ಚುನಾಯಿತರಾದ ನಂತರ ಅವರು ತಾನು ತಳಮಟ್ಟದಿಂದ ಮಹಿಳೆಯರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಾಗಿ ಹೇಳಿದ್ದರು. ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ, ಇಂದು ನನಗೆ ದೊಡ್ಡ ದಿನ. ನನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಡುತ್ತೇನೆ ಎಂದು ಪ್ರಮಾಣ ಮಾಡಿದ್ದೇನೆ. ನಾನೊಬ್ಬಳು ಹೋರಾಟಗಾರ್ತಿ ಹಾಗೂ ಯಾವಾಗಲೂ ಹೋರಾಟಗಾರ್ತಿಯಾಗಿಯೇ ಇರುತ್ತೇನೆ ಎಂದು ಹೇಳಿದರು.