
ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದ ಯೋಧನ ವೃದ್ದಾಪ್ಯ ಜೀವನ ಚೆನ್ನಾಗಿರಲೆಂದು ಮಹಿಳೆಯೊಬ್ಬರಬ್ಬರನ್ನು ಹುಡುಕಿ ಮದುವೆ ಮಾಡಿದ್ದಾರೆ. ಆದರೆ, ಈತ ಮನೆಯಲ್ಲಿ ಕೆಲದಿನಗಳ ಕಾಲ ಸಂಸಾರ ಮಾಡಿಕೊಂಡಿದ್ದು, ನಂತರ ಮನೆ ಬಿಟ್ಟು ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾನೆ. ಇದೀಗ ಮನೆ ಬಿಟ್ಟು ಹೋಗಿ 4 ವರ್ಷಗಳಾಗಿದ್ದು, ಒಮ್ಮೆ ಅಚಾನಕ್ ಆಗಿ ಹೆಂಡತಿಯೇ ಗಂಡನನ್ನು ಗುರುತಿಸಿ ಮನೆಗೆ ಕರೆದಿದ್ದಾಳೆ. ಆದರೆ, ನೀವ್ಯಾರು ಗೊತ್ತಿಲ್ಲ, ನಾನೊಬ್ಬ ಪೋರ್ನ್‌ಸ್ಟಾರ್ ಎಂದು ಹೇಳಿ ಹೆಂಡತಿಗೆ ಯಾಮಾರಿಸಲು ಮುಂದಾಗಿದ್ದಾನೆ. ಆದರೆ, ಮುಂದೆ ನಡೆದ ಘಟನೆ ಮಾತ್ರ ಭಾರೀ ಇಂಟ್ರೆಸ್ಟಿಂಗ್ ಆಗಿದೆ.
ನಾಲ್ಕು ವರ್ಷಗಳ ಕಾಲ ನಾಪತ್ತೆಯಾಗಿ, ಪತ್ನಿ ಮಕ್ಕಳಿಂದ ದೂರವಿದ್ದು, ತಾನು 'ಪೋರ್ನ್ ಸ್ಟಾರ್' ಎಂದು ಹೇಳಿಕೊಂಡ ಕಾನ್ಪುರದ ನಿವೃತ್ತ ವಾಯುಪಡೆ ಯೋಧನ ಕಥೆ ಸಿನಿಮೀಯವಾಗಿದೆ. ಬರ್ರಾ ನಿವಾಸಿಯಾದ ಈ ಮಾಜಿ ವಾಯುಪಡೆ ಯೋಧ ಫಜಲ್‌ಗಂಜ್‌ನಲ್ಲಿ ಒಂದು ದಿನ ಅವರ ಪತ್ನಿ ಅವರನ್ನು ಗುರುತಿಸಿದ್ದಾರೆ. ನಂತರ ನಡೆದ ಘಟನೆಗಳು ಆಶ್ಚರ್ಯಕರವಾಗಿದ್ದವು. ಗಂಡ-ಹೆಂಡತಿ ನಡುವೆ ನಡೆದ ಸಂಗತಿಗಳಿಂದಾಗಿ ಸಂಸಾರ ಸರಿಹೋಗದೇ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಸುಮಾರು ನಾಲ್ಕು ಗಂಟೆಗಳ ಕಸರತ್ತಿನ ನಂತರ ಮದುವೆಯ ಅಧಿಕೃತ ನೋಂದಣಿ ಮಾಡಿಸಬೇಕಾಯಿತು.
ಮದುವೆಯಾದ ನಂತರ ಮನೆ ಬಿಟ್ಟು ಹೋದ: ಬರ್ರಾ ಪ್ರದೇಶದ ನಿವಾಸಿಯಾಗಿದ್ದ ವಾಯುಪಡೆ ಯೋಧ 2014ರಲ್ಲಿ ನಿವೃತ್ತರಾಗಿದ್ದರು. ಅವರು ಒಂದು ಕಾಲನ್ನು ಕಳೆದುಕೊಂಡು ಅಂಗವಿಕಲರಾಗಿದ್ದರು. ಅವರ ಸಹೋದರರು 2018ರಲ್ಲಿ ಸಾಮೂಹಿಕ ವಿವಾಹದಲ್ಲಿ ಕಾಕಾಡೇವ್ ನಿವಾಸಿಯಾದ ಮಹಿಳೆಯೊಂದಿಗೆ ಅವರ ಮದುವೆ ಮಾಡಿಸಿದ್ದರು. ಆದರೆ, ಈ ಮಹಿಳೆ ಈಗಾಗಲೇ ಮೊದಲ ಗಂಡನನ್ನು ಕಳೆದುಕೊಂಡು ವಿಧವಾ ಜೀವನವನ್ನು ನಡೆಸುತ್ತಿದ್ದರು. ಹೀಗಾಗಿ, ತನಗೆ 7 ವರ್ಷದ ಮಗನಿದ್ದು, ಮನೆಯವರ ಒಪ್ಪಿಗೆ ಮೇರೆಗೆ ವಾಯುಪಡೆ ನಿವೃತ್ತ ಯೋಧನನ್ನು ಮದುವೆ ಮಾಡಿಕೊಂಡಿದ್ದರು. ಇದರಿಂದ ತನಗೂ ತನ್ನ ಮಗನಿಗೂ ಒಂದು ಆಶ್ರಯ ಸಿಗುವುದಲ್ಲದೇ ಅಂಗವಿಕಲ ಯೋಧನಿಗೂ ಆಸರೆಯಾಗುವ ಕನಸು ಕಂಡಿದ್ದರು.
ಇದನ್ನೂ ಓದಿ: ಸಾಯ್ತೀನಿಯೇ ವಿನಃ, ಪಾಕಿಸ್ತಾನಕ್ಕೆ ಹೋಗಲ್ಲ: ಬಿಕ್ಕಿ ಬಿಕ್ಕಿ ಅತ್ತ ಸೀಮಾ ಹೈದರ್!
ಮದುವೆಯಾದ ಕೆಲವು ಸಮಯದವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಕೆಲವು ತಿಂಗಳ ನಂತರ ಗಂಡ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಲು ಪ್ರಾರಂಭಿಸಿದರು. ಮನೆ ಬಿಟ್ಟು ಹೋಗಿ ಕೆಲವು ದಿನಗಳನ್ನು ಎಲ್ಲಿಯೋ ಇದ್ದು ಕಳೆದು ಪುನಃ ವಾಪಸ್ ಬರುತ್ತಿದ್ದರು. ಹಲವು ಬಾರಿ ಇದೇ ರೀತಿ ಮನೆ ಬಿಟ್ಟು ಹೊರಗೆ ಹೋಗಿ ಬರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಇದಕ್ಕೆ ಹೆಂಡತಿಯೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕೊನೆಯ ಬಾರಿಗೆ 2021ರಲ್ಲಿ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ ಬಹುದಿನಗಳವರೆಗೆ ಮನೆಗೆ ವಾಪಸ್ ಬಾರದೇ ಸಂಪೂರ್ಣವಾಗಿ ಕಾಣೆಯಾಗುತ್ತಾರೆ. ಇದರಿಂದ ಗಾಬರಿಗೊಂಡ ಮಹಿಳೆ ಕಾಣೆಯಾದ ವ್ಯಕ್ತಿಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ತಮ್ಮ ಕರ್ತವ್ಯ ಮರೆತು, ಒಂದು ಕಂಪ್ಲೇಟ್ ಪಡೆದು ಸುಮ್ಮನಾಗಿದ್ದರು.
ಮೊದಲ ಗಂಡ ತೀರಿ ಹೋಗಿ ವಿಧವಾ ಜೀವನ ನಡೆಸುತ್ತಿದ್ದಾಗ ಕುಂಟನೋ, ಕುರುಡನೋ ಯಾರಾದರೂ ಸರಿ ಗಂಡ-ಮನೆ, ಸಂಸಾರ ಸಿಗುತ್ತದೆ ಎಂದು ವಿಧವಾ ಪುನರ್‌ವಿವಾಹ ಮಾಡಿಕೊಂಡ ಮಹಿಳೆಗೆ ಗಂಡ ನಾಪತ್ತೆಯಾದ ನಂತರ ಪುನಃ ಒಬ್ಬಂಟಿ ಜೀವನ ಮಾಡಬೇಕಾಗಿತ್ತು. ಇದರಿಂದ ಬೇಸತ್ತಿದ್ದ ಮಹಿಳೆ ಗಂಡ ಸಿಕ್ಕಿದರೆ ಸಾಕು ಎನ್ನುತ್ತಿದ್ದಳು. ಯಾರ ಬಳಿ ಹೇಳಿಕೊಂಡರೂ ತನ್ನ ಗಂಡನನ್ನು ಹುಡುಕಿಕೊಡಲು ಸಹಾಯವನ್ನೇ ಮಾಡಲಿಲ್ಲ. ಆದರೆ, ಇತ್ತೀಚೆಗೆ ಕಳೆದೊಂದು ವಾರದ ಹಿಂದೆ ಏಪ್ರಿಲ್ 20ರಂದು ವಿಧಿಯಾಟ ಬೇರೆಯೇ ಆಗಿತ್ತು. ಫಜಲ್‌ಗಂಜ್ ಪ್ರದೇಶದಲ್ಲಿ ಮಹಿಳೆ ತನ್ನ ಗಂಡನನ್ನು ನೋಡಿದಳು. ಅವಳು ಗಂಡನ ಹೆಸರಿಟ್ಟು ಜೋರಾಗಿ ಕೂಗಿ ಕರೆದಳು. ಆದರೆ, ಗಂಡ ಅವಳನ್ನು ಯಾರೆಂದು ಗುರುತು ಇಲ್ಲದವನಂತೆ ನಡೆದುಕೊಂಡನು. ಇದಾದ ನಂತರ ಹೆಂಡತಿಯ ಗೋಳಾಟವನ್ನು ನೋಡಿದ ಸುತ್ತಮುತ್ತಲಿನ ಜನರಿಗೆ ಸತ್ಯ ತಿಳಿದಾಗ ಅವರು ಮಹಿಳೆಯನ್ನು ಬೆಂಬಲಿಸಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ಬಿಟ್ಟರು.
ಇದನ್ನೂ ಓದಿ: 23 ವರ್ಷದ ಪ್ರೇಯಸಿ ಮನೆಯಲ್ಲಿ ಮಧ್ಯರಾತ್ರಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ 16 ವರ್ಷದ ಯುವಕ!
ತಾನು 'ಪೋರ್ನ್ ಸ್ಟಾರ್' ಎಂದು ಹೇಳಿಕೊಂಡ ಗಂಡ:
ಫಜಲ್‌ಗಂಜ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ವಿಚಾರಿಸಿದಾಗ, ಮಾಜಿ ವಾಯುಪಡೆ ಯೋಧ ತಾನೊಬ್ಬ 'ಪೋರ್ನ್ ಸ್ಟಾರ್' ಎಂದು ಹೇಳಿಕೊಂಡನು. ಜೊತೆಗೆ, ಪತ್ನಿ, ಮಕ್ಕಳು ಇವರು ಯಾರೆಂಬುದೇ ಗೊತ್ತಿಲ್ಲವೆಂಬಂತೆ ನಾಟಕ ಮಾಡಿದರು. ಅಷ್ಟೇ ಅಲ್ಲ, ಅವನು ಪತ್ನಿಯ ವಿರುದ್ಧ ದೂರು ನೀಡಲು ಪೊಲೀಸ್ ಆಯುಕ್ತರ ಕಚೇರಿಗೆ ಹೋದನು. ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಮಾಜಿ ಯೋಧನನ್ನು ಹಿಡಿದು ವಿಚಾರಣೆ ಮಾಡಿ ಮಹಿಳೆಯೊಂದಿಗೆ ಮಾಡಿಸಿದ್ದ ಮದುವೆ ದಾಖಲೆಗಳನ್ನು ಆತನ ಮುಂದಿಟ್ಟರು.
ಮಾಜಿ ಯೋಧ ಹಾಗೂ ಮಹಿಳೆಗೆ 2018ರಲ್ಲಿ ನಡೆದಿದ್ದ ಮದುವೆಯ ಛಾಯಾಚಿತ್ರಗಳು ಮತ್ತು ಇತರ ಪುರಾವೆಗಳನ್ನು ಆತನಿಗೆ ತೋರಿಸಿದರು. ಇದಾದ ನಂತರ ತಾನು ಸುಳ್ಳನ್ನು ಸಾಧಿಸಲು ಸಾಧ್ಯವಾಗದೇ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಇದಾದ ನಂತರ, ಪೊಲೀಸರು ಮದುವೆ ನೋಂದಣಿ ಮಾಡಿಸಲು ಮತ್ತು ವಾಯುಪಡೆಯ ದಾಖಲೆಗಳಲ್ಲಿ ಹೆಂಡತಿಯ ಹೆಸರು ದಾಖಲಿಸುವಂತೆ ತಿಳಿಸಿದರು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಕೇವಲ 4 ಗಂಟೆಗಳಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಇಬ್ಬರ ಮದುವೆ ನೋಂದಣಿ ಮಾಡಿಸಲಾಯಿತು.
ಇದನ್ನೂ ಓದಿ: ಭೋಪಾಲ್‌ನಲ್ಲೊಂದು ದಿ ಕೇರಳ ಸ್ಟೋರಿ : ಮೂವರು ಮುಸ್ಲಿಂ ಯುವಕರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ