ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು

Published : Dec 21, 2025, 02:28 PM IST
Minors molest girl: Police arrest mothers of four boys

ಸಾರಾಂಶ

ಉತ್ತರ ಪ್ರದೇಶದ ಬರೇಲಿಯಲ್ಲಿ, 8ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಪ್ರಾಪ್ತ ಬಾಲಕರ ಕೃತ್ಯಕ್ಕಾಗಿ ಅವರ ತಾಯಂದಿರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ಪೋಷಕರನ್ನು ಬಂಧಿಸಲಾಗಿದೆ ಎಂದು ಹೇಳಿದ್ದು, ಈ ಪ್ರಕರಣ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಪ್ರಾಪ್ತ ಹುಡುಗರು 8ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಅ ನಾಲ್ವರೂ ಹುಡುಗರ ತಾಯಂದಿರನ್ನು ಬಂಧಿಸಿದಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ತಾಯಂದಿರನ್ನು ಬಂಧಿಸಿ ಮಕ್ಕಳ ಕೃತ್ಯಕ್ಕೆ ಅವರನ್ನು ಹೊಣೆಗಾರನ್ನಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ 8ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿಗೆ ಕಿರುಕುಳ ನೀಡಿದವರೆಲ್ಲರೂ 13 ವರ್ಷದೊಳಗಿನ ಪ್ರಾಯದ ಬಾಲಕರಾಗಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಅಪರಾಧ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ ಬುಡೌನ್ ಪೊಲೀಸರು ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ. ಶುಕ್ರವಾರ ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಅವರನ್ನು ವೈಯಕ್ತಿಕ ಬಾಂಡ್‌ಗಳ ಮೇಲೆ ಬಿಡುಗಡೆ ಮಾಡಲಾಯಿತು. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸದೇ ಇದ್ದುದ್ದಕ್ಕಾಗಿ ಪೋಷಕರನ್ನು ಹೊಣೆಗಾರರನ್ನಾಗಿ ಮಾಡುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ತಂದೆಯ ಬಳಿ, ಈ ತಪ್ಪಿತಸ್ಥ ಬಾಲಕರು ತಾನು ಶಾಲೆಗೆ ಹೋಗುವ ಮತ್ತು ಬರುವ ದಾರಿಯಲ್ಲಿ ನನಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ಇದಾದ ನಂತರ ಬಾಲಕಿಯ ಕುಟುಂಬದವರು ಬುಧವಾರ ಉಷೈತ್‌ನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಅಲ್ಲಿ ಬಿಎನ್ಎಸ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿಎಫ್‌ಐಆರ್ ದಾಖಲಿಸಿದ್ದಾರೆ.

ಅಪ್ರಾಪ್ತ ವಯಸ್ಕರು ಒಂದೇ ಗ್ರಾಮದವರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಎಸ್‌ಎಚ್‌ಒ ಅಜಯ್ ಪಾಲ್ ಸಿಂಗ್ ದೃಢಪಡಿಸಿದ್ದಾರೆ. ಈ ಬಾಲಾಪರಾಧಿಗಳು ಶಾಲೆಗೆ ಹೋಗುತ್ತಿರಲಿಲ್ಲ ಮತ್ತು ಆ ಪ್ರದೇಶದಲ್ಲಿ ಓಡಾಡುತ್ತಿದ್ದರು. 8ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ ಮತ್ತು ಹುಡುಗರಿಗೆ ಪರಸ್ಪರ ವೈಯಕ್ತಿಕವಾಗಿ ಪರಿಚಯವಿರಲಿಲ್ಲ. ಈ ಅಪ್ರಾಪ್ತ ಹುಡುಗರು ಒಂದಕ್ಕಿಂತ ಹೆಚ್ಚು ಬಾರಿ ಹುಡುಗಿಗೆ ಕಿರುಕುಳ ನೀಡಿದ್ದಾರೆ ಮತ್ತು ಈ ಹುಡುಗರು ಬಾಲಾಪರಾಧಿಗಳಾಗಿರುವುದರಿಂದ ಪೊಲೀಸರು ಪೋಷಕರಿಗೆ ನೋಟಿಸ್ ನೀಡಿದ್ದಾರೆ ಎಂದು ಸಿಂಗ್ ಅವರು ಹೇಳಿದರು. ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಖಾರ ನೀಡದ ಪೋಷಕರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಲು ಅವರ ತಾಯಂದಿರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಇದು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ವಿಫಲರಾದ ಪೋಷಕರನ್ನು ಶಿಕ್ಷಿಸುವ ಒಂದು ಮಾರ್ಗವಾಗಿದೆ. ಉತ್ತರ ಪ್ರದೇಶದ ಹೊರಗೆ ಕೆಲಸ ಮಾಡುತ್ತಿರುವ ನಾಲ್ವರು ಬಾಲಕರ ತಂದೆಯರು ರಾಜ್ಯಕ್ಕೆ ಹಿಂದಿರುಗಿದಾಗ ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಹಳ್ಳಿಯ ಇತರ ಮಕ್ಕಳಲ್ಲಿಯೂ ಇದೇ ರೀತಿಯ ನಡವಳಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಈ ಪ್ರಕರಣದಲ್ಲಿ (preventive detention) ಕಾಯ್ದೆಯ ಬಳಕೆಯ ಬಗ್ಗೆ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ತಡೆಗಟ್ಟುವ ಬಂಧನ ಅಂದರೆ ಪ್ರಿವೆನ್ಟಿವಿ ಡಿಟೆನ್ಶನ್ ಕಾಯ್ದೆಯಡಿ, ಸಾರ್ವಜನಿಕ ಸುವ್ಯವಸ್ಥೆ, ರಾಷ್ಟ್ರೀಯ ಭದ್ರತೆ ಅಥವಾ ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆ ತರುವ ಭವಿಷ್ಯದ ಅಪರಾಧಗಳನ್ನು ಮಾಡದಂತೆ ತಡೆಯಲು ಯಾರನ್ನಾದರೂ ವಿಚಾರಣೆಯಿಲ್ಲದೆ ಬಂಧಿಸುವ ರಾಜ್ಯದ ಅಧಿಕಾರವಾಗಿದೆ. ಇದರಡಿ ಒಬ್ಬ ವ್ಯಕ್ತಿಯು ಸಮಾಜದ ಭದ್ರತೆಗೆ ಬೆದರಿಕೆಯನ್ನು ಒಡ್ಡುತ್ತಾನೆ ಎಂಬ ಮುನ್ಸೂಚನೆ ಇದ್ದಾಗ ಈ ಕಾಯ್ದೆಯಡಿ ಆತನನ್ನು ಬಂಧಿಸಲಾಗುತ್ತದೆ. ಇದನ್ನು ಭಾರತವೂ ಸೇರಿದಂತೆ ಹಲವು ಇತರ ದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ, ಆದರೆ ಮೂಲಭೂತ ಹಕ್ಕುಗಳನ್ನು ಇದು ಉಲ್ಲಂಘಿಸುತ್ತಿದೆ ಎಂಬ ಟೀಕೆ ಇದೆ.

ಇದನ್ನೂ ಓದಿ: ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಮಗುಚಿ ಮನೆ ಮುಂದೆ ಕುಳಿತಿದ್ದ ವೃದ್ಧನ ದುರಂತ ಸಾವು

ಬಿಎನ್‌ಎಸ್ ಕಾಯ್ದೆಯಡಿ ಪೊಲೀಸರು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅಥವಾ ನಿರೀಕ್ಷಿತ ಅಪರಾಧಗಳನ್ನು ತಡೆಯಲು ಈ ತಡೆಗಟ್ಟುವ ಬಂಧನ ಕಾಯ್ದೆಯಡಿ ಕಾರ್ಯನಿರ್ವಹಿಸಬಹುದು. ಆದರೆ, ಪೂರ್ವ ಎಚ್ಚರಿಕೆಗಳು ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕೆ ಸಾಕ್ಷಿ ಇಲ್ಲದೇ ಅಪ್ರಾಪ್ತ ವಯಸ್ಕರ ಪೋಷಕರ ವಿರುದ್ಧ ಈ ಕ್ರಮಗಳನ್ನು ಕೈಗೊಳ್ಳುವುದು ಅಪರೂಪವಾಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಪೋಕ್ಸೊ ಕಾಯ್ದೆಯು ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸಲು ಹಲವು ಕಾರ್ಯವಿಧಾನಗಳನ್ನು ರೂಪಿಸಿದೆ ಆದರೆ ನಿರ್ಲಕ್ಷ್ಯ ಅಥವಾ ಪ್ರಚೋದನೆ ಸಾಬೀತಾಗದ ಹೊರತು ಪೋಷಕರನ್ನು ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ
ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ