ಕಾವೇರಿಗೆ ತಮಿಳ್ನಾಡು ಯೋಜನೆ : ರಾಜ್ಯದ ಹಿತಾಸಕ್ತಿಗೆ ಧಕ್ಕೆ

Kannadaprabha News   | Asianet News
Published : Feb 22, 2021, 07:44 AM IST
ಕಾವೇರಿಗೆ ತಮಿಳ್ನಾಡು ಯೋಜನೆ : ರಾಜ್ಯದ ಹಿತಾಸಕ್ತಿಗೆ ಧಕ್ಕೆ

ಸಾರಾಂಶ

ಕಾವೇರಿ ನದಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಕೈಗೊಂಡ ಯೋಜನೆ ಸಂಬಂಧ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ. 

 ನವದೆಹಲಿ(ಫೆ.22):  ಕಾವೇರಿ ಕಣಿವೆಯಲ್ಲಿನ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಲುವಾಗಿ ತಮಿಳುನಾಡು ಯೋಜಿಸಿರುವ ನದಿ ಜೋಡಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ರಾಜ್ಯ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಮಂಡಲದ ಸರ್ವಪಕ್ಷಗಳ ನಾಯಕರ ಸಭೆ ಕರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಸುಪ್ರೀಂ ಕೋರ್ಟಿ ಮತ್ತು ನ್ಯಾಯಾಧಿಕರಣಗಳಲ್ಲಿ ಬಾಕಿ ಇರುವ ವಿವಿಧ ಅಂತಾರಾಜ್ಯ ಜಲವಿವಾದಗಳ ಪ್ರಸ್ತಾವನೆಗಳ ಕುರಿತು ದೆಹಲಿಯ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರು ಮತ್ತು ತಾಂತ್ರಿಕ ಸಲಹೆಗಾರರೊಂದಿಗೆ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಭಾನುವಾರ ವಿಶೇಷ ಸಭೆ ನಡೆಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ತಮಿಳುನಾಡು ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ನೀರನ್ನು ರಾಜ್ಯವು ಪೂರೈಸಿದ ನಂತರ ಕರ್ನಾಟಕದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೀರನ್ನು ಕರ್ನಾಟಕವೇ ಬಳಸಿಕೊಳ್ಳುವುದು ರಾಜ್ಯದ ಹಕ್ಕಾಗಿದೆಯೆಂಬುದು ರಾಜ್ಯದ ನಿಲುವಾಗಿರುತ್ತದೆ. ಈ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಎಲ್ಲ ಪಕ್ಷಗಳ ಸಭಾ ನಾಯಕರೊಂದಿಗೆ ಸಮಾಲೋಚಿಸಿ, ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಜೀವ ನದಿ ಕಾವೇರಿಗೆ ‘ವಿಷಪೂರಿತ ನೀರು’

ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್‌ ಪ್ರಕಟಣೆ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸಲ್ಲಿಸಿರುವ ಮಧ್ಯಕಾಲೀನ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು, ಮದ್ರಾಸ್‌ ಉಚ್ಚ ನ್ಯಾಯಾಲಯದ ಮಧುರೈ ಪೀಠದಲ್ಲಿ ತಮಿಳುನಾಡು ರೈತರು ಸಲ್ಲಿಸಿರುವ ಪಿಐಎಲ್ ಕುರಿತು ರಾಜ್ಯವು ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಹಾಗೂ ಮಹದಾಯಿ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಕಣಿವೆ ರಾಜ್ಯಗಳು ಸಲ್ಲಿಸಿರುವ ಎಸ್‌.ಎಲ್.ಪಿ.ಗಳ ವಿಚಾರಣೆ ಬರುವ ಸಾಧ್ಯತೆ ಇದ್ದು, ಈ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಸಭೆಯಲ್ಲಿ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ನಾವದಗಿ, ಸೀನಿಯರ್‌ ಅಡ್ವೋಕೇಟ್‌ ಮೋಹನ ಕಾತರಕಿ, ಅಡ್ವೋಕೇಟ್‌ ವಿ.ಎನ್‌.ರಘುಪತಿ, ನಿಶಾಂತ ಪಾಟೀಲ್, ರಾಜೇಶ್ವರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್‌ ಸಿಂಗ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು