ಕಾರ್ಮಿಕನ ಅದೃಷ್ಟ ಬದಲಾಯಿಸಿದ ವಜ್ರ| ಕೆಲಸ ಕಳೆದುಕೊಂಡು ಲಾಕ್‌ಡೌನ್ ಮಧ್ಯೆ ಮನೆ ಸೇರಿದ ಕಾರ್ಮಿಕನೀಗ ಲಕ್ಷಾಧಿಪತಿ| ಹರಾಜಿನ ಬಳಿಕ ಸಿಗಲಿದೆ ಮೊತ್ತ
ಭೋಪಾಲ್(ಫೆ.23): ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಅನೇಕ ಕಡೆ ವಜ್ರ ಸಿಗುತ್ತದೆ. ಈ ವಜ್ರಗಳು ಯಾರಿಗೆ ಸಿಗುತ್ತವೋ ಅವರ ಅದೃಷ್ಟವೇ ಬದಲಾಗುತ್ತದೆ. ಊಟಕ್ಕೂ ಪರದಾಡುವಂತಹ ಬಡತನದಲ್ಲಿರುವವರೂ ಲಕ್ಷಾಧಿಪತಿಗಳಾಗುತ್ತಾರೆ. ಸದ್ಯ ಮತ್ತೊಂದು ಬಾರಿ ಇದು ಸಾಬೀತಾಗಿದೆ. ಲಾಕ್‌ಡೌನ್ ವೇಳೆ ಮನಗೆ ಮರಳಿದ ಕಾರ್ಮಿಕ ಭಗವಾನ್ ದಾಸ್ ಅದೃಷ್ಟವೇ ಬದಲಾಗಿದೆ. ಆತನಿಗೆ ಅಗೆಯುವ ವೇಳೆ ಎರಡುಉ ವಜ್ರಗಳು ಸಿಕ್ಕಿವೆ. ಇದನ್ನು ಕಂಡು ಭಗವಾನ್ ಹಾಗೂ ಆತನ ಗೆಳೆಯರು ಬಹಳ ಖುಷಿಪಟ್ಟಿದ್ದಾರೆ.
ಹೌದು ಪನ್ನಾದ ಕಿಟ್ನಾದಲ್ಲಿರುವ ಉಥಲೀ ವಜ್ರದ ಗಣಿಯಲ್ಲಿ ಭಗವಾನ್ ದಾಸ್ ತನ್ನ ಜೊತೆಗಾರರೊಂದಿಗೆ ಭೂಮಿ ಅಗೆತ ಆರಂಭಿಸಿದ್ದ. ಗಣಿಗಾರಿಕೆ ಮುಗಿದ ಬಳಿಕ ಕೆಲ ದಿನಗಳಿಂದ ಆತ ಜರಡಿ ಹಿಡಿಯುತ್ತಿದ್ದ. ಹೀಗಿರುವಾಗ ಆತ ಎರಡು ವಜ್ರ ಸಿಕ್ಕಿದೆ. ಇದನ್ನು ಕಂಡು ಆತ ಕುಣಿದು ಕುಪ್ಪಳಿಸಿದ. ಇದಾದ ಬಳಿಕ ಆತ ವಜ್ರದೊಂದಿಗೆ ಜಿಲ್ಲಾ ಕೇಂದ್ರದಲ್ಲಿರುವ ವಜ್ರ ಕಚೇರಿಯನ್ನು ತಲುಪಿದ್ದಾರೆ.
ಇನ್ನು ಭಗವಾನ್ ದಾಸ್‌ಗೆ ಸಿಕ್ಕ ವಜ್ರಗಳು 7.94 ಹಾಗೂ 1.93 ಕ್ಯಾರೆಟ್‌ನದ್ದಾಗಿವೆ. ಮಾರುಕಟ್ಟೆಯಲ್ಲಿ ಇವು ಸುಮಾರು 30 ಲಕ್ಷ ಬೆಲೆ ಬಾಳುತ್ತವೆ. ಹೀಗಾಗಿ ಭಗವಾನ್ ಇದನ್ನು ಖನಿಜ ಕಚೇರಿಗೆ ನೀಡಿದ್ದಾನೆ. ಹರಾಜಿನ ಬಳಿಕ ಸಿಗುವ ಮೊತ್ತದಲ್ಲಿ ಟ್ಯಾಕ್ಸ್ ತೆಗೆದು ಉಳಿದ ಹಣವನ್ನು ಭಗವಾನ್‌ಗೆ ನೀಡಲಾಗುತ್ತದೆ.
ಲಾಕ್‌ಡೌನ್ ವೇಳೆ ಮನೆಗೆ ಮರಳಿದ್ದ ಭಗವಾನ್
ಇನ್ನು 2021 ರಲ್ಲಿ ಇದೇ ಮೊದಲ ಬಾರಿ ವಜ್ರ ಸಿಕ್ಕಿದೆ ಎಂಬುವುದು ಖನಿಜ ಕಚೇರಿ ಅಧಿಕಾರಿಗಳ ಮಾತಾಗಿದೆ. ಇನ್ನು ತಮ್ಮ ಬಗ್ಗೆ ಮಾತನಾಡಿರುವ ಭಗವಾನ್ ತಾನೊಬ್ಬ ಕಾರ್ಮಿಕನಾಗಿದ್ದೆ. ಲಾಕ್‌ಡೌನ್ ವೇಳೆ ಮನೆಗೆ ಮರಳಿದ್ದೆ. ಮನೆಗೆ ಬಂದ ಬಳಿಕ ಕೆಲಸವಿರಲಿಲ್ಲ. ಹೀಗಾಗಿ ಜೊತೆಗಾರರೊಂದಿಗೆ ಸೇರಿ ಗಣಿಯಲ್ಲಿ ಅಗೆಯಲಾರಂಭಿಸಿದೆ. ಇಲ್ಲಿ ಎರಡು ವಜ್ರಗಳು ಸಿಕ್ಕಿವೆ. ಇದರಿಂದ ಬರುವ ಹಣದಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವುದರೊಂದಿಗೆ, ಮನೆಯವರ ಅಗತ್ಯ ಪೂರೈಸುತ್ತೇನೆಂದಿದ್ದಾರೆ.