ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ... ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿ

Published : Sep 14, 2025, 02:55 PM IST
Mental Health Struggle Ends in Tragedy

ಸಾರಾಂಶ

Greater Noida Tragedy: ಮಾನಸಿಕ ಅಸ್ವಸ್ಥ ಮಗನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಗನ ಭವಿಷ್ಯದ ಚಿಂತೆಯಿಂದ ಬಳಲುತ್ತಿದ್ದ ತಾಯಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮಾನಸಿಕ ಅಸ್ವಸ್ಥ ಮಗನೊಂದಿಗೆ ತಾಯಿ ಸಾವಿಗೆ ಶರಣು

ಮಕ್ಕಳಿಲ್ಲದವರದ್ದು ಮಕ್ಕಳಿಲ್ಲ ಎಂಬ ಕೊರಗಾದರೆ ಮಕ್ಕಳಿದ್ದವರದ್ದು ನೂರೆಂಟು ಗೋಳು. ಇಲ್ಲೊಂದು ಕಡೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತನ್ನ ಮಗನ ಕಷ್ಟ ನೋಡಲಾಗದೇ ತಾಯಿಯೊಬ್ಬಳು ಆ ಮಗನನ್ನು ಕರೆದುಕೊಂಡು ಕಟ್ಟಡದಿಂದ ಕೆಳಗೆ ಹಾರಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿಗೆ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 37 ವರ್ಷದ ಸಾಕ್ಷಿ ಛಾವ್ಲಾ ಎಂಬ ಮಹಿಳೆ ತಮ್ಮ 11 ವರ್ಷದ ಮಾನಸಿಕ ಅಸ್ವಸ್ಥ ಮಗನೊಂದಿಗೆ ಸಾವಿಗೆ ಶರಣಾಗಿದ್ದಾರೆ. ಸಾಕ್ಷಿ ಛಾವ್ಲಾ ಅವರ 11 ವರ್ಷದ ಮಗ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ತಾಯಿ ಸಾಕ್ಷಿ ಛಾವ್ಲಾ ಮಗುವನ್ನು ಕರೆದುಕೊಂಡು 13ನೇ ಮಹಡಿಯ ಫ್ಲಾಟ್‌ನಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

11ವರ್ಷದ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿ

ಸಾಕ್ಷಿ ಛಾವ್ಲಾಅವರು ತಮ್ಮ ಪತಿ ದರ್ಪಣ್ ಛಾವ್ಲಾ ಹಾಗೂ ಮಗ ದಕ್ಷ್ ಜೊತೆ ಗ್ರೇಟರ್ ನೋಯ್ಡಾದ ಏಸ್ ಸಿಟಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡ್ತಿದ್ದರು. ಇವರ ಮಗ ದಕ್ಷ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ, ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಮಗನ ಈ ಸ್ಥಿತಿಯನ್ನು ನೋಡುತ್ತಾ ಬಂದಿದ್ದ ಸಾಕ್ಷಿಗೆ ಇದರಿಂದ ಮಾನಸಿಕ ಒತ್ತಡ ಉಂಟಾಗಿದ್ದು, ಮಗನ ಭವಿಷ್ಯದ ಜೊತೆ ಮುಂದೇನು ಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಮಗನಿಗೆ ಅವರು ಹಲವು ವರ್ಷಗಳಿಂದ ಚಿಕಿತ್ಸೆ ನೀಡುತ್ತಲೇ ಬಂದಿದ್ದರು. ಆದರೆ ಆತನ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಆಗಿರಲಿಲ್ಲ. ಇದು ಅವರ ನೋವನ್ನು ಇನ್ನಷ್ಟು ಹೆಚ್ಚು ಮಾಡಿತ್ತು.

ಸಾಕ್ಷಿ ಚಾವ್ಲಾ ಪತಿ ದರ್ಪಣ್ ಜೈನ್ ಅವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಘಟನೆ ನಡೆಯುವ ವೇಳೆ ಅವರು ಮನೆಯಲ್ಲೇ ಬೇರೆ ಕೋಣೆಯಲ್ಲಿ ಇದ್ದರು. ಕಿರುಚಾಟ ಕೇಳಿ ಬಾಲ್ಕನಿಗೆ ತಲುಪುವಷ್ಟರಲ್ಲಿ ಅವರ ಮಗ ಹಾಗೂ ಪತ್ನಿ ನೆಲಕ್ಕೆ ಬಿದ್ದಿರುವುದು ಕಂಡಿದೆ.

ಈ ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ:

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನಿಡಿದ್ದು, ಶವಗಳನ್ನು ಮಹಜರು ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಯ ನಂತರ ಮನೆ ಶೋಧ ನಡೆಸಿದ ಪೊಲೀಸರಿಗೆ ಅಲ್ಲಿ ಡೆತ್‌ನೋಟ್ ಸಿಕ್ಕಿದೆ. ಈ ಪತ್ರದಲ್ಲಿ ಸಾಕ್ಷಿ ಛಾವ್ಲಾ, ನಾವು ಈ ಜಗತ್ತನ್ನು ತೊರೆಯುತ್ತಿದ್ದೇವೆ... ಕ್ಷಮಿಸಿ ನಾವು ಇನ್ನು ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಹೊಣೆಗಾರರಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಈ ಘಟನೆ ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಮಗನ ಮಾನಸಿಕ ಅಸ್ವಸ್ಥತೆಯೇ ಆ ತಾಯಿಯನ್ನು ಸಾವಿನ ದಾರಿ ಹಿಡಿಯುವಷ್ಟು ಮಾನಸಿಕ ಖಿನ್ನತೆಗೆ ದೂಡಿದೆ ಎಂದು ನೆರೆಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪ ಪೊಲೀಸ್ ಕಮೀಷನರ್ ಶಕ್ತಿ ಅವಸ್ಥಿ ಹೇಳಿಕೆ ನೀಡಿದ್ದು, ಪೊಲೀಸ್ ತಂಡಕ್ಕೆ ಡೆತ್‌ನೋಟ್‌ ಸಿಕ್ಕಿದೆ. ಇವರ ಮಗ ಹಲವು ವರ್ಷಗಳಿಂದ ಅನಾರೋಗ್ಯಪೀಡಿತನಾಗಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮಕ್ಕಳಿಲ್ಲದಿದ್ದರೆ ಮಕ್ಕಳಿಲ್ಲ ಎಂಬ ಕೊರಗು ಮಕ್ಕಳಾದ ನಂತರ ಎಲ್ಲರ ಮಕ್ಕಳಂತೆ ನಮ್ಮ ಮಕ್ಕಳು ಚಟುವಟಿಕೆಯಿಂದ ಇಲ್ಲ ಎಂದಾದರೆ ಅದು ಮತ್ತೊಂದು ಕೊರಗು. ಸಮಾಜದಲ್ಲಿ ಕೈಕಾಲು ಬುದ್ಧಿ ಎರಡೂ ಸರಿ ಇದ್ದವರೇ ಬದುಕೋದು ಕಷ್ಟವಾಗುತ್ತದೆ. ಹೀಗಿರುವಾಗ ತಮ್ಮ ಮಕ್ಕಳು ಹೇಗೆ ಬದುಕುತ್ತಾರೋ ಅವರ ಭವಿಷ್ಯ ಹೇಗೋ ಎಂಬುದು ಕಾಡುತ್ತಿರುತ್ತದೆ. ಅದೇ ರೀತಿ ಇಲ್ಲಿ ತಾಯಿಗೆ ಹಲವು ವರ್ಷಗಳನ್ನು ಈ ಅಸ್ವಸ್ಥ ಪುತ್ರನ ಜೊತೆ ಕಳೆದ ನಂತರ ಆತನ ಭವಿಷ್ಯದ ಬಗ್ಗೆ ಕಾಡಲಾರಂಭಿಸಿದೆ. ಇದೇ ಆಕೆಯನ್ನು ಸಾವಿನ ಮನೆ ಸೇರುವಂತೆ ಮಾಡಿದೆ.

ವಿಶೇಷ ಮನವಿ:x

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

ಇದನ್ನೂ ಓದಿ: ಪತಿಯ ಶವಪೆಟ್ಟಿಗೆಯ ಮೇಲೆ ಬಿದ್ದು ಬಿಕ್ಕಳಿಸಿದ ರಾಷ್ಟ್ರೀಯವಾದಿ ಚಾರ್ಲಿ ಕಿರ್ಕ್ ಪತ್ನಿ

ಇದನ್ನೂ ಓದಿ: ಗುಂಡೇಟಿಗೆ ಬಲಿಯಾದ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್‌ ಸಾವಿನ ಭವಿಷ್ಯ ನುಡಿದಿದ್ದಾ ಭದ್ರತಾ ಏಜೆನ್ಸಿ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್