ಪತ್ರಿಕೆ ಜವಾಬ್ದಾರಿಯುತ, ಟೀವಿ ಹೊಣೆಗೇಡಿ: ಸಿಜೆಐ ಚಾಟಿ

By Govindaraj SFirst Published Jul 24, 2022, 6:57 AM IST
Highlights

ಮಾಧ್ಯಮಗಳು ನಡೆಸುತ್ತಿರುವ ‘ಕಾಂಗರೂ ನ್ಯಾಯಾಲಯ’ಗಳು (ಅನಧಿಕೃತ ಕೋರ್ಟ್‌) ಹಾಗೂ ಅಜೆಂಡಾ ಆಧರಿತ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೇ ಅಪಾಯಕಾರಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಕಿಡಿಕಾರಿದ್ದಾರೆ.

ರಾಂಚಿ (ಜು.24): ಮಾಧ್ಯಮಗಳು ನಡೆಸುತ್ತಿರುವ ‘ಕಾಂಗರೂ ನ್ಯಾಯಾಲಯ’ಗಳು (ಅನಧಿಕೃತ ಕೋರ್ಟ್‌) ಹಾಗೂ ಅಜೆಂಡಾ ಆಧರಿತ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೇ ಅಪಾಯಕಾರಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಕಿಡಿಕಾರಿದ್ದಾರೆ. ಮುದ್ರಣ ಮಾಧ್ಯಮ (ಪತ್ರಿಕೆಗಳು) ಈಗಲೂ ಒಂದಷ್ಟು ಹೊಣೆಗಾರಿಕೆಯನ್ನು ಹೊಂದಿವೆ. ಆದರೆ ವಿದ್ಯುನ್ಮಾನ ಮಾಧ್ಯಮ (ಟೀವಿ ವಾಹಿನಿಗಳು)ಗಳಿಗೆ ಹೊಣೆಗಾರಿಕೆಯೇ ಇಲ್ಲ. ಎಲೆಕ್ಟ್ರಾನಿಕ್‌ ಹಾಗೂ ಸೋಷಿಯಲ್‌ ಮೀಡಿಯಾಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಅದು ಬಿಟ್ಟು ಸರ್ಕಾರ ಅಥವಾ ಕೋರ್ಟ್‌ಗಳ ಮಧ್ಯಪ್ರವೇಶಕ್ಕೆ ಆಹ್ವಾನ ನೀಡಬಾರದು ಎಂದೂ ತಾಕೀತು ಮಾಡಿದ್ದಾರೆ.

‘ಮಾಧ್ಯಮಗಳ ವಿಚಾರಣೆಯಿಂದಾಗಿ ನ್ಯಾಯಾಂಗದ ಪಾರದರ್ಶಕ ಕಾರ್ಯನಿರ್ವಹಣೆ ಹಾಗೂ ಸ್ವಾತಂತ್ರ್ಯಕ್ಕೆ ತೊಂದರೆಯಾಗುತ್ತಿದೆ. ಮಾಧ್ಯಮಗಳ ವಿಚಾರಣೆ ಪ್ರಕರಣಗಳ ಇತ್ಯರ್ಥದಲ್ಲಿ ಮಾರ್ಗದರ್ಶನದ ಅಂಶವಾಗಿರಬಾರದು. ಅನುಭವಿ ನ್ಯಾಯಾಧೀಶರೇ ಕೆಲವೊಂದು ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳಲು ಕಷ್ಟಪಡುತ್ತಿರುವಾಗ, ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿವೆ’ ಎಂದು ನ್ಯಾ.ಸತ್ಯಬ್ರತ ಸಿನ್ಹಾ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಶನಿವಾರ ಹೇಳಿದರು.

ಐಷಾರಾಮಿ ವಕೀಲರ ಕೊಠಡಿ ನಿರೀಕ್ಷಿಸಬೇಡಿ, ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ

‘ನ್ಯಾಯಾಧೀಶರ ವಿರುದ್ಧವೇ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಂಡು, ಪದಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಅತಿಕ್ರಮಣ ಮಾಡುವ ಮೂಲಕ ಸರ್ಕಾರ ಅಥವಾ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದಕ್ಕೆ ಆಹ್ವಾನ ನೀಡಬಾರದು. ಜಡ್ಜ್‌ಗಳು ತಕ್ಷಣಕ್ಕೆ ಪ್ರತಿಕ್ರಿಯೆ ನೀಡದೇ ಇರಬಹುದು. ಆದರೆ ಇದನ್ನು ದೌರ್ಬಲ್ಯ ಅಥವಾ ಅಸಹಾಯಕತೆ ಎಂದು ದಯಮಾಡಿ ತಪ್ಪು ತಿಳಿಯಬೇಡಿ’ ಎಂದು ತಾಕೀತು ಮಾಡಿದರು.

ರಾಜಕೀಯ ಪಕ್ಷಗಳ ಅಜೆಂಡಾವನ್ನು ಬೆಂಬಲಿಸುವುದು ಕೋರ್ಟ್‌ನ ಕೆಲಸವಲ್ಲ: ಸಿಜೆಐ ಎನ್‌ವಿ ರಮಣ

‘ಮಾಧ್ಯಮಗಳು ಪಸರಿಸುತ್ತಿರುವ ಪಕ್ಷಪಾತಿ ಅಭಿಪ್ರಾಯಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರಿ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ, ವ್ಯವಸ್ಥೆಗೇ ಕೆಡಕುಂಟು ಮಾಡುತ್ತಿವೆ. ಈ ಪ್ರಕ್ರಿಯೆಯಲ್ಲಿ ನ್ಯಾಯದಾನದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಜವಾಬ್ದಾರಿಯನ್ನು ಅತಿಕ್ರಮಿಸುವ ಹಾಗೂ ಉಲ್ಲಂಘಿಸುವ ಮೂಲಕ ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಎರಡು ಹೆಜ್ಜೆ ಹಿಂದಕ್ಕೆ ಒಯ್ಯುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!