
ನವದೆಹಲಿ (ಆ.29): 150 ಕ್ಕೂ ಹೆಚ್ಚು ನಾಗರಿಕ ಸಂಘಟನೆಗಳು ಮತ್ತು ಸ್ವಯಂಸೇವಾ ಚಳುವಳಿಗಳ ಹೋರಾಟಗಾರರು ಇಂಡಿ ಒಕ್ಕೂಟಕ್ಕೆ ಬೆಂಬಲವನ್ನು ನೀಡಿದೆ. ಮೂಲಗಳ ಪ್ರಕಾರ, ಗುಜರಾತ್‌ನಲ್ಲಿ ನರ್ಮದಾ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದ್ದ ಮೇಧಾ ಪಾಟ್ಕರ್ ಹಾಗೂ ಗುಜರಾತ್ ಗಲಭೆಯ ವೇಳೆ ಅಂದಿನ ಗುಜರಾತ್ ಸಿಎಂ ಅಗಿದ್ದ ನರೇಂದ್ರ ಮೋದಿ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದ ಆರೋಪ ಹೊತ್ತಿರುವ ತೀಸ್ತಾ ಸೆತಲ್ವಾಡ್ ಇಂಡಿ ಒಕ್ಕೂಟದ ಮುಂಬೈ ಸಭೆಗೆ ಹಾಜರಾಗಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಸಾಂತಾಕ್ರೂಜ್‌ನ ವಕೋಲಾ ಸೇತುವೆ ಬಳಿ ಆಗಸ್ಟ್ 30 ರಂದು ನಡೆಯಲಿರುವ ಸಮರ್ಥನ ಸಂಕಲ್ಪ ಜನಸಭೆಯಲ್ಲಿ ತೀಸ್ತಾ ಸೆತಲ್ವಾಡ್, ಮೇಧಾ ಪಾಟ್ಕರ್ ಮತ್ತು ರಾಕೇಶ್ ಟಿಕಾಯತ್ ಸೇರಿದಂತೆ ಇನ್ನೂ ಕೆಲವು ಹಿರಿಯ ನಾಯಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಫಿರೋಜ್ ಮಿಥಿಬೋರ್ವಾಲಾ ತಿಳಿಸಿದ್ದಾರೆ. ಇನ್ನು ಇಂಡಿ ಒಕ್ಕೂಟದ ಮುಂಬೈ ಸಭೆ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ನಿಗದಿಯಾಗಿದೆ.
ಈ ಸಾರ್ವಜನಿಕ ಸಭೆಯಲ್ಲಿ ನಮ್ಮ ದೇಶ ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ಹಂಚಿಕೊಂಡ ದೃಷ್ಟಿಕೋನವನ್ನು ವಿವರಿಸಲಾಗುವುದು ಮತ್ತು ನಾಗರಿಕ ಸಮಾಜದ ನಿರೀಕ್ಷೆಗಳು ಮತ್ತು ಬೇಡಿಕೆಗಳ ಕುರಿತು ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಸಮನ್ವಯ ಸಮಿತಿಯ ಸದಸ್ಯ ವಿಶಾಲ ಹಿವಾಲೆ ತಿಳಿಸಿದ್ದಾರೆ. ಗುಡ್ಡಿ ಎಸ್ ಎಲ್, ರಾಮ್ ಪುನಿಯಾನಿ, ಇರ್ಫಾನ್ ಇಂಜಿನಿಯರ್, ಡಾ. ವಿವೇಕ್ ಕೋರ್ಡೆ ಮತ್ತು ಶರದ್ ಕದಂ ಸಮಿತಿಯ ಇತರ ಕೆಲವು ಸದಸ್ಯರಾಗಿದ್ದಾರೆ.
ರಾಜಕೀಯ ಪಕ್ಷಗಳಿಂದ ಶರದ್ ಪವಾರ್, ನಾನಾ ಪಟೋಲೆ, ಕಾಂ. ಅಶೋಕ್ ಧವಳೆ, ಕಾಂ. ಡಿ.ರಾಜ, ಕಾಂ. ದೀಪಂಕರ್ ಭಟ್ಟಾಚಾರ್ಯ, ಅಬು ಅಸಿಂ ಅಜ್ಮಿ, ಪ್ರೊ.ಜಯಂತ್ ಪಾಟೀಲ್, ಕಪಿಲ್ ಪಾಟೀಲ್ ಮತ್ತು ವಿದ್ಯಾ ಚವಾಣ್ ಮತ್ತು ಸಿವಿಲ್ ಸೊಸೈಟಿಯಿಂದ ಡಾ.ಜಿ.ಜಿ.ಪಾರೀಖ್, ಸತ್ಯಪಾಲ್ ಮಲಿಕ್, ರಾಕೇಶ್ ಟಿಕಾಯತ್, ಮೇಧಾ ಪಾಟ್ಕರ್, ತೀಸ್ತಾ ಸೆಟಲ್ವಾಡ್, ಶ್ಯಾಮ್ ದಾದಾ ಗಾಯಕವಾಡ, ನಿರಂಜನ್ ಟಾಕ್ಲೆ, ಫಿರೋಜ್ ಮಿಥಿಬೋರ್ವಾಲಾ, ಡಾ. ಸಲೀಂ ಖಾನ್, ಡಾಲ್ಫಿ ಡಿಸೋಜಾ ಮತ್ತು ಡಾ. ವಿವೇಕ್ ಕೋರ್ಡೆ ಅವರು ಸಾರ್ವಜನಿಕ ಸಭೆಯಲ್ಲಿ ಇರಲಿದ್ದಾರೆ.
ಇನ್ನು ಇಂಡಿ ಒಕ್ಕೂಟಕ್ಕೆ ಮೇಧಾ ಪಾಟ್ಕರ್ ಹಾಗೂ ತೀಸ್ತಾ ಸೆತಲ್ವಾಡ್ ಬೆಂಬಲ ನೀಡಿದ್ದಲ್ಲದೆ, ಇಂಡಿ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ನಳೀನ್ ಕುಮಾರ್ ಕೊಹ್ಲಿ, ಪ್ರತಿಪಕ್ಷಗಳ ಒಕ್ಕೂಟವು ಒಂದೇ ಒಂದು ಅಜೆಂಡಾವನ್ನು ಹೊಂದಿದೆ ಮತ್ತು ಅದು ಪ್ರಧಾನಿ ಮೋದಿಯನ್ನು ವಿರೋಧಿಸುವುದು. ಭಾರತದ ಜನರು ನಕಾರಾತ್ಮಕತೆಯನ್ನು ನೋಡುತ್ತಿದ್ದಾರೆ ಎಂದು ಅವರು ಭಾವಿಸಿದರೆ ಅದು ತಪ್ಪು. ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕ ಕಾರ್ಯಸೂಚಿಯನ್ನು ಹೊಂದಿದ್ದಾರೆ ಮತ್ತು ಜನರು ನಮ್ಮ ಪ್ರಧಾನಿಯ ಸಕಾರಾತ್ಮಕ ಬೆಳವಣಿಗೆಯನ್ನು ಮಾತ್ರ ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.
ಇಂಡಿಯಾ ಕೂಟಕ್ಕೆ ಅಶೋಕ ಚಕ್ರ ಇಲ್ಲದ ತ್ರಿವರ್ಣ ಧ್ವಜ, ಸಂಚಾಲಕನಾಗುವ ಆಸೆಯಿಲ್ಲ ಎಂದ ನಿತೀಶ್
ಇನ್ನು ಪಾಟ್ನಾ ಹಾಗೂ ಬೆಂಗಳೂರು ಸಭೆಯ ಬಳಿಕ ಇಂಡಿ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಿಗದಿಯಾಗಿದೆ. ಈ ವಾರ ಮುಂಬೈನಲ್ಲಿ ನಡೆಯಲಿರುವ ಇಂಡಿ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸಲಿದ್ದಾರೆ. ಅವರಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಆಗಸ್ಟ್ 31 ರಿಂದ ಪ್ರಾರಂಭವಾಗುವ ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ಲಾನ್, ಬಿಜೆಪಿಯಿಂದ ಎಲ್ಲಾ ಕಾಪ್ಟರ್ ಬುಕ್: ಮಮತಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ