ಚಟುವಟಿಕೆಗಳು ದಿಢೀರ್‌ ಹೆಚ್ಚಳ: ಎಚ್ಚರ, ಈಗ ಗರಿಷ್ಠ ಅಪಾಯ!

By Kannadaprabha NewsFirst Published May 5, 2020, 7:13 AM IST
Highlights

ಎಚ್ಚರ, ಈಗ ಗರಿಷ್ಠ ಅಪಾಯ!| ಅನ್‌ಲಾಕ್‌ 1.0: ಚಟುವಟಿಕೆಗಳು ದಿಢೀರ್‌ ಹೆಚ್ಚಳ| ಹಸಿರು ವಲಯದಲ್ಲಿ ಬಸ್‌ ಸಂಚಾರ, ವ್ಯಾಪಾರ ವಹಿವಾಟು ಬಹುತೇಕ ಪುನಾರಂಭ| ಕಿತ್ತಳೆ, ಕೆಂಪು ವಲಯದಲ್ಲೂ ಜನರ ಓಡಾಟ| ಕೋರೋನಾ ಮತ್ತೆ ಹೆಚ್ಚುವ ಆತಂಕ

ಬೆಂಗಳೂರು(ಮೇ.05): ಕೊರೋನಾ ಸೋಂಕು ತಡೆಗೆ ಘೋಷಿಸಲಾದ ಲಾಕ್‌ಡೌನ್‌ ನಿಯಮಾವಳಿಯಲ್ಲಿ ಸಡಿಲಿಕೆ ನೀಡಿದ ಬೆನ್ನಲ್ಲೇ ರಾಜ್ಯದ ಬಹುತೇಕ ಗ್ರೀನ್‌ಝೋನ್‌ ಹಾಗೂ ಆರೆಂಜ್‌ ಝೋನ್‌ ಹಾಗೂ ರೆಡ್‌ಝೋನ್‌ನ ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಉಳಿದೆಡೆ ಸೋಮವಾರ ಬಹುತೇಕ ಆರ್ಥಿಕ ಚಟುವಟಿಕೆಗಳು ಪುನರ್‌ ಆರಂಭಗೊಂಡಿವೆ. ಅದರಂತೆ ಬೆಂಗಳೂರೂ ಸೇರಿದಂತೆ ಕೊಪ್ಪಳ, ಧಾರವಾಡ ಮತ್ತಿತರ ಕಡೆ ಶಾಲಾ-ಕಾಲೇಜು, ಕೋರ್ಟ್‌, ಮಾಲ್‌ಗಳು, ಚಿತ್ರಮಂದಿರಗಳನ್ನು ಹೊರತುಪಡಿಸಿ ಬಹುತೇಕ ಕಚೇರಿ, ವ್ಯಾಪಾರ-ವಹಿವಾಟು ಆರಂಭಗೊಂಡಿವೆ. ಸಾರ್ವಜನಿಕರು ಕೊರೋನಾ ಆತಂಕ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ದಿಢೀರ್‌ ಓಡಾಟ ಆರಂಭಿಸಿದ್ದಾರೆ.

ಆರ್ಥಿಕ ಚಟುವಟಿಕೆಯನ್ನು ಹಂತಹಂತವಾಗಿ ಪುನರ್‌ ಆರಂಭಿಸುವುದು ಅನಿವಾರ್ಯವಾದರೂ ರಾಜ್ಯದ ನೆತ್ತಿಮೇಲಿನ್ನೂ ಕೊರೋನಾತಂಕದ ತೂಗುಗತ್ತಿ ನೇತಾಡುತ್ತಲೇ ಇದೆ. ರಾಜ್ಯದಲ್ಲಿ ಲಾಕ್‌ಡೌನ್‌ ಮೂರನೇ ಹಂತದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆಯೇ ಹೊರತು ಸಂಪೂರ್ಣ ತೆರವುಗೊಳಿಸಿಲ್ಲ. ಪ್ರತಿದಿನ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಎರಡಂಕಿಯಷ್ಟುದಾಖಲಾಗುತ್ತಲೇ ಇವೆ. ಇಂಥ ಪರಿಸ್ಥಿತಿಯಲ್ಲಿ ಜನ ಕೊರೋನಾದ ಭಯವೇ ಇಲ್ಲ ಎಂಬಂತೆ ಸಾಮಾಜಿಕ ಅಂತರ ಗಾಳಿಗೆ ತೂರಿ ಓಡಾಟ ಆರಂಭಿಸಿರುವುದು ರಾಜ್ಯದಲ್ಲಿ ಮತ್ತೊಮ್ಮೆ ಸೋಂಕು ವ್ಯಾಪಿಸುವ ಆತಂಕ ಹುಟ್ಟುಹಾಕಿದೆ.

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ಬಸ್‌ ಸಂಚಾರವೂ ಆರಂಭ: ಕೊರೋನಾ ಸೋಂಕಿನ ಪಟ್ಟಿಯಲ್ಲಿ ಗ್ರೀನ್‌ಝೋನ್‌ನಲ್ಲಿರುವ ರಾಜ್ಯದ 11 ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಮತ್ತು ವ್ಯಾಪಾರ ವಹಿವಾಟುಗಳಿಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಅದರಂತೆ ಕೊಡಗು, ದಾವಣಗೆರೆ ಹೊರತುಪಡಿಸಿ ಎಲ್ಲ 9 ಜಿಲ್ಲೆಗಳಲ್ಲಿ ಅಂಗಡಿ-ಮುಂಗಟ್ಟುಗಳ ಜತೆಗೆ ಸಾರಿಗೆ, ರಿಕ್ಷಾ ಸಂಚಾರ ಸಾಮಾಜಿಕ ಅಂತರ ಕಾಯ್ದುಕೊಂಡು ಪುನರ್‌ ಆರಂಭಗೊಂಡಿವೆ. ಕೊಡಗಿನಲ್ಲಿ ಹೆಚ್ಚಿನ ಅಂಗಡಿಗಳ ಬಾಗಿಲು ತೆರೆದಿದ್ದರೂ ಬಸ್‌ ಸಂಚಾರಕ್ಕೆ ಅವಕಾಶ ನೀಡಿಲ್ಲ.

ಇನ್ನು ವಿಜಯಪುರ, ಬಾಗಲಕೋಟೆ, ಬಾಗಲಕೋಟೆ ಸೇರಿದಂತೆ ಆರೆಂಜ್‌ ಝೋನ್‌ ವ್ಯಾಪ್ತಿಯಲ್ಲಿರುವ ಇತರೆ ಜಿಲ್ಲೆಗಳಲ್ಲಿ ರಿಕ್ಷಾ ಸಂಚಾರ, ಬಹುತೇಕ ವ್ಯಾಪಾರ-ವಹಿವಾಟು ಶೇ.50ರಷ್ಟುಸಿಬ್ಬಂದಿಯೊಂದಿಗೆ ಮತ್ತೆ ಆರಂಭಗೊಂಡಿವೆ. ಈ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲಿಸಲಾಗುತ್ತಿದೆ. ಧಾರವಾಡದ ಇಂಡಸ್ಟ್ರೀಯಲ್‌ ಏರಿಯಾದಲ್ಲಂತು ಟಾಟಾ ಸೇರಿದಂತೆ ಬಹುತೇಕ ಕಾರ್ಖಾನೆಗಳು ಕೆಲಸ ಕಾರ್ಯ ಆರಂಭಿಸಿವೆ.

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ಅದೇ ರೀತಿ ರೆಡ್‌ಝೋನ್‌ನಲ್ಲಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಟೋನ್ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದೆಡೆ ಅಗತ್ಯವಸ್ತುಗಳ ಜತೆಗೆ ಇತರೆ ವ್ಯಾಪಾರ-ವಹಿವಾಟಿಗೂ ಷರತ್ತುಬದ್ಧ ಅನುಮತಿ ಸಿಕ್ಕಿದೆ. ಆದರೆ, ಇದೇ ಝೋನ್‌ ವ್ಯಾಪ್ತಿಗೆ ಒಳಪಡುವ ಮೈಸೂರಲ್ಲಿ ಮಾತ್ರ ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದ್ಯಾವ ಚಟುವಟಿಕೆಗಳಿಗೂ ಅವಕಾಶ ನೀಡಿಲ್ಲ.

ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಂತೂ ಸೋಮವಾರ ಜನಸಂಚಾರ ಹೆಚ್ಚಾಗಿಯೇ ಇತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರೆಯಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಗರದೊಳಗೆ ಪಾಸ್‌ ಇಲ್ಲದೆ ರಾತ್ರಿ ಏಳುಗಂಟೆವರೆಗೆ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಚೀನಾಗಿಂತ ಕಡಿಮೆ!

ನಮ್ಮ ಕಳಕಳಿ

1. ಲಾಕ್‌ಡೌನ್‌ ಸಡಿಲವಾಗಿದೆ ಅಷ್ಟೆ. ಆದರೆ, ಕೊರೋನಾ ಸೋಂಕು ನಿಂತೇ ಇಲ್ಲ

2. ರಾಜ್ಯವೂ ಸೇರಿದಂತೆ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ

3. ಹಾಗಾಗಿ, ಮೇ 17ರವರೆಗಿನ ಲಾಕ್‌ಡೌನ್‌ 3.0 ಅವಧಿ ಅತಿ ಅಪಾಯಕಾರಿ ಕಾಲ

4. ಒಮ್ಮೆಲೇ ಜನರು ಹೊರ ಬಂದು ಓಡಾಟ ನಡೆಸಿದರೆ ಸೋಂಕು ಹೆಚ್ಚುವ ಸಾಧ್ಯತೆ

5. ಹಾಗಾಗಿ, ಜನರು ಅತ್ಯಂತ ಅಗತ್ಯ ಇಲ್ಲದಿದ್ದರೆ ಹೊರಗೆ ಬರದಿರುವುದೇ ಉತ್ತಮ

6. ಹೊರಬಂದರೂ ಈಗಾಗಲೇ ಜಾರಿಯಲ್ಲಿರುವ ಸುರಕ್ಷತಾ ಕ್ರಮ ಪಾಲನೆ ಅತ್ಯಗತ್ಯ

7. ಇಲ್ಲವಾದಲ್ಲಿ ಸೋಂಕಿನ ಪ್ರಮಾಣ ಸ್ಫೋಟಗೊಂಡು ಅಪಾರ ಸಾವುನೋವು ಸಂಭವ

click me!