ದೆಹಲಿಯಲ್ಲಿ ಕಾರು ಎಳೆದೊಯ್ದು ಯುವತಿ ಬಲಿ: ಲೆಫ್ಟಿನೆಂಟ್‌ ಗವರ್ನರ್‌ ರಾಜೀನಾಮೆಗೆ ಆಗ್ರಹಿಸಿ ಆಪ್‌ ಪ್ರೊಟೆಸ್ಟ್‌

By BK AshwinFirst Published Jan 2, 2023, 3:23 PM IST
Highlights

 ಸುಲ್ತಾನ್‌ಪುರಿಯಿಂದ ಕಂಝಾವಾಲಾವರೆಗೆ ಯುವತಿಯ ದೇಹವನ್ನು ಎಳೆದಾಡಿದ್ದು, ಈ ಹಿನ್ನೆಲೆ ಯುವತಿ ಮೃತಪಟ್ಟಿದ್ದಳು. ಅಲ್ಲದೆ, ನಗ್ನ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಇದರಿಂದ ದೆಹಲಿಯಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (National Capital of Delhi) ಯುವತಿಯನ್ನು ಹಲವು ಕಿಲೋಮೀಟರ್‌ಗಳವರೆಗೆ ಕಾರೊಂದು (Car) ಎಳೆದೊಯ್ದು ಯುವತಿ ಬಲಿಯಾಗಿರುವ (Death) ಘಟನೆ ಹೊಸ ವರ್ಷದ ಮೊದಲ ದಿನದಂದೇ ಬೆಳಕಿಗೆ ಬಂದಿದೆ. 20ರ ಹರೆಯದ ಯುವತಿಯೊಬ್ಬಳು ತಾನು ಚಲಾಯಿಸುತ್ತಿದ್ದ ಸ್ಕೂಟಿಗೆ (Scooty) ಕಾರು ಡಿಕ್ಕಿ ಹೊಡೆದು, ನಂತರ ಆ ಕಾರು ಆಕೆಯ ದೇಹವನ್ನು ಹಲವು ಕಿಲೋಮೀಟರ್‌ಗಳವರೆಗೆ ಎಳೆದಾಡಿತ್ತು.  ಸುಲ್ತಾನ್‌ಪುರಿಯಿಂದ ಕಂಝಾವಾಲಾವರೆಗೆ ಆಕೆಯ ದೇಹವನ್ನು ಎಳೆದಾಡಿದ್ದು, ಈ ಹಿನ್ನೆಲೆ ಯುವತಿ ಮೃತಪಟ್ಟಿದ್ದಳು. ಅಲ್ಲದೆ, ನಗ್ನ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಇದರಿಂದ ದೆಹಲಿಯಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗ್ತಿದೆ. ಒಂದೆಡೆ, ದೆಹಲಿಯ ಸುಲ್ತಾನ್‌ಪುರಿ ಪ್ರದೇಶದ ಪೊಲೀಸ್‌ ಠಾಣೆ ಬಳಿ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ರಾಜೀನಾಮೆಗೆ ಆಗ್ರಹಿಸಿ ಅವರ ನಿವಾಸದ ಎದುರು ಆಪ್‌ ಭಾರಿ ಪ್ರತಿಭಟನೆ ನಡೆಸಿದೆ.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರ ನಿವಾಸದ ಎದುರು ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ವಿ.ಕೆ. ಸಕ್ಸೇನಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದು, ಈ ಹಿನ್ನೆಲೆ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲ ಫಿರಂಗಿಯನ್ನು ಬಳಸುತ್ತಿದ್ದಾರೆ. ಆದರೆ, ಲೆಫ್ಟಿನೆಂಟ್‌ ಗವರ್ನರ್‌ ನಿವಾಸಕ್ಕೆ ಮುತ್ತಿಗೆ ಹಾಕಲು ಅರವಿಂದ್‌ ಕೇಜ್ರಿವಾಲ್‌ ಅವರ ಪಕ್ಷದ ಕಾರ್ಯಕರ್ತರು ಪ್ರಯತ್ನ ನಡೆಸುತ್ತಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ..!

ಇನ್ನು, ಈ ಪ್ರತಿಭಟನೆಗೂ ಮುನ್ನ ಈ ಬಗ್ಗೆ ಟ್ವೀಟ್‌ ಮಾಡಿದ್ದ ಎಎಪಿ ಶಾಸಕ ದುರ್ಗೇಶ್ ಪಾಠಕ್, ದೆಹಲಿ ನಗರದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆಪ್‌ ಶಾಸಕ ದುರ್ಗೇಶ್ ಪಾಠಕ್, ರಾಷ್ಟ್ರ ರಾಜಧಾನಿ ಕ್ರೈಂ ಸಿಟಿಯಾಗುತ್ತಿದೆ, ದೆಹಲಿಯಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ, ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ರಾಜಕೀಯ ಮಾಡಲು ಬಿಟ್ಟಿದ್ದಾರೆ. ಈ ಹಿನ್ನೆಲೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಾವು ಎಲ್‌ಜಿ ನಿವಾಸಕ್ಕೆ ಘೇರಾವ್ ಮಾಡುತ್ತೇವೆ, ಹಾಗೂ ದುರ್ಬಲ ಕಾನೂನು ಮತ್ತು ಸುವ್ಯವಸ್ಯ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’’ ಎಂದು ಟ್ವೀಟ್ ಮಾಡಿದ್ದರು.

ಇನ್ನು, ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. "ಕಾಂಝಾವಾಲಾದಲ್ಲಿ ನಮ್ಮ ಸಹೋದರಿಗೆ ಏನಾಯಿತು ಎಂಬುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಿದ ದೆಹಲಿ ಸಿಎಂ “ಇದು ಯಾರ ಮಗಳಿಗೂ ಆಗಬಹುದು. ಅಪರಾಧಿ ಎಷ್ಟೇ ಪ್ರಭಾವಿ, ರಾಜಕೀಯ ಸಂಪರ್ಕ ಹೊಂದಿದ್ದರೂ ಆತನನ್ನು ಗಲ್ಲಿಗೇರಿಸಲೇಬೇಕು ಎಂದು ಹೇಳಿದರು. 

ಇದನ್ನೂ ಓದಿ: ರಾಜಸ್ಥಾನದಲ್ಲಿ ಟ್ರಕ್‌ - ಕಾರು ಮುಖಾಮುಖಿ ಡಿಕ್ಕಿ: ಐವರು ಬಲಿ; ಟ್ರಕ್‌ ಚಾಲಕ ನಾಪತ್ತೆ..!

ಸುಲ್ತಾನ್‌ಪುರಿ ಪೊಲೀಸ್ ಠಾಣೆಯ ಮುಂದೆ ಸ್ಥಳೀಯರಿಂದ ಪ್ರತಿಭಟನೆ  
ಈ ಮಧ್ಯೆ, ಸೋಮವಾರ ದೆಹಲಿಯ ಸುಲ್ತಾನ್‌ಪುರಿ ಪೊಲೀಸ್ ಠಾಣೆಯ ಹೊರಗೆ ಭಾರಿ ಜನಸಮೂಹ ಜಮಾಯಿಸಿದ್ದು, ಈ ಪ್ರದೇಶದಲ್ಲಿ 20 ವರ್ಷದ ಮಹಿಳೆಯನ್ನು ಕಾರೊಂದು ಎಳೆದೊಯ್ದು ಕೊಂದ ಘಟನೆಯನ್ನು ಪ್ರತಿಭಟಿಸಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಬೆಳಕಿಗೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಆದರೂ, ಪೊಲೀಸ್ ಠಾಣೆಯ ಹೊರಗೆ ಜನರು ಪ್ರತಿಭಟನೆ ನಡೆಸಿ ಯುವತಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.  

ಯುವತಿಯ ಬಟ್ಟೆ ಇಲ್ಲದೆ ಶವ ಪತ್ತೆಯಾಗಿದ್ದು, ಆಕೆಯ ಕೈಕಾಲು ಮುರಿದಿದ್ದು, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಪ್ರಕರಣವು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಸಾವು ಎಂದು ತೋರುತ್ತಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Accident: ಹೊಸ ವರ್ಷಕ್ಕೆ ಗೋವಾಕ್ಕೆ ಹೋದವರ ಕಾರು ಡಿಕ್ಕಿ: ತಮಿಳುನಾಡಿನ ನಾಲ್ವರು ಸಾವು

ಆದರೆ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. “ಇದು ಅಪಘಾತವೇ ಅಲ್ಲ. ನನ್ನ ಮಗಳ ಮೈಮೇಲೆ ಒಂದು ಬಟ್ಟೆಯೂ ಇಲ್ಲದಿರುವಾಗ ಇದು ಯಾವ ರೀತಿಯ ಅಪಘಾತ. ನಾವು ಸಂಪೂರ್ಣ ತನಿಖೆಯನ್ನು ಬಯಸುತ್ತೇವೆ ಎಂದು ಆಕೆಯ ತಾಯಿ ರೇಖಾ ದೇವಿ ಹೇಳಿದ್ದಾರೆ.

click me!