
ಜೈಸಲ್ಮೇರ್ (ಏ.20) ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಕೈಗಾರಿಕಾ ಅಭಿವೃದ್ಧಿಯಲ್ಲಿ ಒಂದಾಗ ರಾಜಸ್ಥಾನದ ಬಲೋತ್ರಾದಲ್ಲಿನ ರಿಫೈನರಿ ಘಟಕ ಉದ್ಘಾಟನೆಗೆ ಸಜ್ಜಾದ ಬೆನ್ನಲ್ಲೇ ಅಗ್ನಿ ಅವಘಡ ಸಂಭವಿಸಿದೆ. ಬರೋಬ್ಬರಿ 79,000 ಕೋಟಿ ರೂಪಾಯಿ ಮೊತ್ತ ಹೂಡಿಕೆ ಮಾಡಿ ಈ ರಿಫೈನರಿ ಘಟಕವನ್ನು ಅಭಿವೃದ್ಧಿ ಮಾಡಲಾಗಿತ್ತು. ನಾಳೆ(ಏ.21) ಪ್ರಧಾನಿ ನರೇಂದ್ರ ಮೋದಿ ಈ ಘಟಕವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ಉದ್ಘಾಟನೆಗೂ ಮೊದಲೇ ಅಗ್ನಿ ಅವಘಡ ಸಂಭವಿಸಿದೆ. ಭಾರತದಲ್ಲಿರುವ ತೈಲ ಶುದ್ಧೀಕರಣ ಘಟಕಗಳ ಪೈಕಿ ರಾಜಸ್ಥಾನದಲ್ಲಿ ನಾಳೆ ಉದ್ಘಾಟನೆಯಾಗಬೇಕಿದ್ದ ಘಟಕ ಅತ್ಯಾಧುನಿಕ ತಂತ್ರಜ್ಞಾನದ ಹಾಗೂ ಸುಸಜ್ಜಿತ ಘಟಕ ಎಂದೇ ಗುರುತಿಸಿಕೊಂಡಿತ್ತು
ರಾಜಸ್ಥಾನದ ಬಲೋತ್ರದಲ್ಲಿ ತಲೆ ಎತ್ತಿ ನಿಂತಿರುವ ಈ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. 20 ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬಲೋತ್ರದಲ್ಲಿರುವ ಪೆಟ್ರೋ ಕೆಮಿಕಲ್ ರಿಫೈನರಿ ಭಾರತದ ಮೊದಲ ಗ್ರೀನ್ ಫೀಲ್ಡ್ ರಿಫೈನರಿ ಎಂದೇ ಗುರುತಿಸಿಕೊಂಡಿದೆ.
ಭಾರತದಲ್ಲಿ 23 ತೈಲ ಶುದ್ಧೀಕರಣ ಘಟಕಗಳಿವೆ. ಈ ಪೈಕಿ ರಾಜಸ್ಥಾನದಲ್ಲಿ ಉದ್ಘಾಟನೆಯಾಗಬೇಕಿದ್ದ ಈ ರಿಫೈನರಿ ಘಟಕ ಅತ್ಯಾಧುನಿಕ ಘಟಕವಾಗಿತ್ತು. ಬರೋಬ್ಬರಿ 41 ದೇಶಗಳಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಬಳಿಕ ಭಾರತದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ಬಲೋತ್ರದಲ್ಲಿರುವ ಈ ತೈಲ ಶುದ್ಧೀಕರಣ ಘಟಕ ನೇರವಾಗಿ ಮುದ್ರಾ ಬಂದರಿಗೆ ಸಂಪರ್ಕಹೊಂದಿದೆ. ಹೀಗಾಗಿ ಸಾಗಣೆ, ಪೂರೈಕೆಯಲ್ಲೂ ಭಾರತಕ್ಕೆ ಹೆಚ್ಚಿನ ಲಾಭಗಳಿವೆ.
ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ ಮುಖ್ಯಮಂತ್ರಿ ಬಜನ್ ಲಾಲ್ ಶರ್ಮಾ ಸೇರಿದಂತೆ ಪ್ರಮುಖ ನಾಯಕರು ನಾಳೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು, ಸದ್ಯ ಅಗ್ನಿಅವಘಡದಲ್ಲಿ ರಿಫೈನರಿ ಘಟಕಕ್ಕೆ ಭಾರಿ ಹಾನಿಯಾಗಿದೆ. ಹೀಗಾಗಿ ನಾಳೆ ಮೋದಿ ಉದ್ಘಾಟನಾ ಕಾರ್ಯಕ್ರಮ ಮುಂದೂಡುವ ಸಾಧ್ಯತೆ ಇದೆ. ರಿಪೇರಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡುವ ಸಾಧ್ಯತೆ ಇದೆ.
ರಾಜಸ್ಥಾನ ಮರಭೂಮಿಯಲ್ಲಿ ಈ ರಿಫೈನರ್ ಘಟಕ ನಿರ್ಮಾಣ ಮಾಡಲಾಗಿದೆ. ಇನ್ನು ಪೈಪ್‌ಲೈನ್ ಕೆಲಸಗಳು ಪೂರ್ಣಗೊಳಿಸಲಾಗಿದೆ. ಈ ಘಟಕದಿಂದ ವಾರ್ಷಿಕವಾಗಿ ರಾಜಸ್ಥಾನ ಸರ್ಕಾರಕ್ಕೆ 5000 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇದೆ. ಈ ಘಚಕ ಭಾರತದ ತೈಲ ಆತಂಕವನ್ನೂ ತಗ್ಗಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ