
ನವದೆಹಲಿ: ಭಾರತದಲ್ಲಿ ವಿಧ್ವಂಸ ಸೃಷ್ಟಿಸಿದ್ದ ಸಂಸತ್ ಮೇಲಿನ ದಾಳಿ ಹಾಗೂ ಮುಂಬೈನಲ್ಲಿ ನಡೆದ 26/11 ಸರಣಿ ಸ್ಫೋಟ ಪ್ರಕರಣದ ರೂವಾರಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಎಂದು ಅದೇ ಸಂಘಟನೆಯ ಕಮಾಂಡರ್ ಮಸೂದ್ ಇಲ್ಯಾಸಿ ಕಾಶ್ಮೀರಿ ಬಹಿರಂಗವಾಗಿ ಹೇಳಿದ್ದಾನೆ.
ಪಾಕ್‌ನಲ್ಲಿದ್ದೇ ಮುಂಬೈ ದೆಹಲಿಯಲ್ಲಿ ದಾಳಿ ನಡೆಸಿದ ಶೂರ ಎಂದು ಬಣ್ಣಿಸಿದ ಮಸೂದ್ ಇಲ್ಯಾಸಿ
ವೇದಿಕೆಯೊಂದರಲ್ಲಿ ಮಾತನಾಡಿದ ಇಲ್ಯಾಸಿ, ದೆಹಲಿಯ ತಿಹಾರ್ ಜೈಲಿಂದ ತಪ್ಪಿಸಿಕೊಂಡ ಬಳಿಕ ಅಜರ್ ಪಾಕಿಸ್ತಾನಕ್ಕೆ ಬಂದು, ಬಾಲಾಕೋಟ್‌ನಲ್ಲಿ ತಮ್ಮ ಉಗ್ರ ಚಟುವಟಿಕೆ ಆರಂಭಿಸಿದರು. ಇಲ್ಲಿಂದಲೇ ದೆಹಲಿ ಮತ್ತು ಮುಂಬೈನಲ್ಲಿ ದಾಳಿ ನಡೆಸಿದ ಶೂರ ಅವರು ಎಂದು ಬಣ್ಣಿಸಿದ್ದಾನೆ. ಈ ಮೂಲಕ ಮಸೂದ್ ಅಜರ್‌ನ ಪಾಪಕೃತ್ಯಗಳನ್ನು ಒಪ್ಪಿಕೊಳ್ಳುವುದರ ಜತೆಗೆ, ಪಾಕಿಸ್ತಾನ ಉಗ್ರರ ಸ್ವರ್ಗ ಎಂಬುದನ್ನು ಆ ದೇಶ ಅಲ್ಲಗಳೆಯಲು ಸಾಧ್ಯವಾಗದಂತೆ ಮಾಡಿದ್ದಾನೆ.
ಇತ್ತೀಚೆಗಷ್ಟೇ ಇಲ್ಯಾಸ್, ಆಪರೇಷನ್ ಸಿಂದೂರದಿಂದಾಗಿ ಬಹಾವಲ್ಪುರದಲ್ಲಿದ್ದ ಅಜರ್‌ನ ಪರಿವಾರದ 10 ಮಂದಿ ಹತರಾಗಿದ್ದರು ಎಂದು ಒಪ್ಪಿಕೊಂಡಿದ್ದ.
ಕಂದಹಾರ್ ವಿಮಾನ ಅಪಹರಣದ ಬಳಿಕ ಬಿಡುಗಡೆಗೊಂಡಿದ್ದ
ಭಾರತದಲ್ಲಿ ಉಗ್ರಚಟುವಟಿಕೆಗಳಲ್ಲಿ ತೊಡಗಿದ್ದ ಅಜರ್‌ನನ್ನು 1994ರ ಫೆಬ್ರವರಿಯಲ್ಲಿ ಜಮ್ಮುಕಾಶ್ಮೀರದ ಅನಂತನಾಗ್‌ನಲ್ಲಿ ಬಂಧಿಸಲಾಗಿತ್ತು. ಆದರೆ 1999ರಲ್ಲಿ ಉಗ್ರರಿಂದ ಅಪಹರಣವಾದ ಕಂದಹಾರ್ ವಿಮಾನದ ಬಿಡುಗಡೆಗೆ ಪ್ರತಿಯಾಗಿ ಅಜರ್‌ನನ್ನು ಜೈಲಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಆತ ಪಾಕಿಸ್ತಾನಕ್ಕೆ ಪರಾರಿಯಾಗಿ ಜೈಷ್ ಸಂಘಟನೆ ಹುಟ್ಟುಹಾಕಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ.
ಮುನೀರ್ ಮಾತಿನಂತೆ ಹತ ಉಗ್ರರಿಗೆ ಗೌರವ ಎಂದ ಇಲ್ಯಾಸಿ:
ಅಜರ್ ಪರಿವಾರದವರು ಸೇರಿದಂತೆ ಭಾರತ ನಡೆಸಿದ ದಾಳಿಯಲ್ಲಿ ಮೃತಪಟ್ಟ ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನ ಯೋಧರು ಭಾಗಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ಈಗ ಈ ಬಗ್ಗೆಯೂ ಮಾತನಾಡಿರುವ ಕಾಶ್ಮೀರಿ, ಅವರಿಗೆಲ್ಲ ಗೌರವ ನೀಡಲು ಸೂಚಿಸಿದ್ದೇ ಪಾಕ್ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್ ಎಂದೂ ಹೇಳಿದ್ದಾನೆ.
ಇದನ್ನೂ ಓದಿ: ಜೈಷ್ ಹೇಳಿಕೆಯಿಂದ ಪಾಕ್ ಬಣ್ಣ ಬಯಲು: ಕಣ್ಣು ಮಿಟುಕಿಸುವಷ್ಟರಲ್ಲಿ ಪಾಕ್ ಸೇನೆ ಮಂಡಿಯೂರಿತ್ತು: ಪ್ರಧಾನಿ ಮೋದಿ
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಕೇಂದ್ರದ ಕಠಿಣ ಕಾರ್ಯಾಚರಣೆಯಿಂದ ಕಂಗಾಲಾದ ನಕ್ಸಲರು:ಶಾಂತಿ ಮಾತುಕತೆಗೆ ಸರ್ಕಾರಕ್ಕೆ ಮನವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ