
ಮದುವೆಯಾದ ಸಂದರ್ಭದಲ್ಲಿ ವಿವಾಹಿತೆ ಬೇರೊಂದು ಸಂಬಂಧದಿಂದ ಗರ್ಭಿಣಿಯಾದರೆ, ಆ ಮಗುವಿನ ಅಪ್ಪ ಯಾರು ಎನ್ನುವ ಬಗ್ಗೆ ಈಚೆಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ, ಮಾನ್ಯ ವಿವಾಹದ ಸಮಯದಲ್ಲಿ ಜನಿಸಿದ ಮಗುವನ್ನು ಪತಿಯ ಕಾನೂನುಬದ್ಧ ಮಗು ಎಂದೇ ಊಹಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಇದರ ಅರ್ಥ ವಿವಾಹಿತೆಯ ಕಾನೂನುಬದ್ಧ ಗಂಡ ಆ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ ಎಂದು ಕೋರ್ಟ್ ಹೇಳಿದೆ. ಮಗುವಿನ ಜೈವಿಕ ಪಿತೃತ್ವಕ್ಕಿಂತ ಘನತೆಗೆ ಆದ್ಯತೆ ನೀಡುವುದು ಮುಖ್ಯವಾಗಿರುವ ಕಾರಣದಿಂದ ಮಗು ಹೇಗೆ ಹುಟ್ಟಿದ್ದರೂ ಆಕೆಯ ಕಾನೂನುಬದ್ಧ ಗಂಡ ಆ ಮಗುವಿನ ಅಪ್ಪ ಆಗುತ್ತಾನೆ ಎಂದಿದೆ ಕೋರ್ಟ್.
ಆದರೆ ಒಂದು ವೇಳೆ, ವಿವಾಹದ ಬಳಿಕ ದಂಪತಿ ನಡುವೆ ಗರ್ಭ ಧರಿಸುವ ರೀತಿಯಲ್ಲಿ ದೈಹಿಕ ಸಂಪರ್ಕ ನಡೆಯದೇ ಹೋದರೆ ಆ ಸಮಯದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲು ಪತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಪತ್ನಿ ವ್ಯಭಿಚಾರಿಣಿ ಎಂದೇ ಅಥವಾ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ನಡೆಸುವ ಮೂಲಕ ಇದು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಆ ಮಗುವಿನ ನಿಜವಾದ ತಂದೆ ಯಾರೇ ಇದ್ದರೂ, ಮಹಿಳೆಯ ಕಾನೂನುಬದ್ಧ ಪತಿಯೇ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ. ಯಾವುದೇ ತಪ್ಪು ಮಾಡದ ಮಗುವನ್ನು ಕಳಂಕದಿಂದ ರಕ್ಷಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮದುವೆಯಾದ ಬಳಿಕ ದಂಪತಿ ನಡುವೆ ದೈಹಿಕ ಸಂಬಂಧ ಇದ್ದರೆ, ಆ ಮಗು ಬೇರೆವರಿಗೆ ಹುಟ್ಟಿದರೂ ಮಹಿಳೆ ಕಾನೂನುಬದ್ಧ ಗಂಡನೇ ಆ ಮಗುವಿನ ಅಪ್ಪ ಆಗುತ್ತಾನೆ ಎಂದಿದ್ದಾರೆ ನ್ಯಾಯಮೂರ್ತಿಗಳು.
ಪಿತೃತ್ವವನ್ನು ನಿರಾಕರಿಸಲು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಇಂಥ ಪ್ರಕರಣಗಳಲ್ಲಿ ಆದೇಶಿಸುವಂತಿಲ್ಲ ಎಂದಿರುವ ಕೋರ್ಟ್, ಮಗುವಿನ ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವುದು, ಕುಟುಂಬದ ಖಾಸಗಿ ವಿಷಯಗಳನ್ನು ಮಗುವಿಗೆ ಕಳಂಕ ತರಲು ಬಳಸುವುದನ್ನು ತಡೆಯುವುದು ಈ ನಿಯಮದ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ