ಭಾನುವಾರ ನಡೆದ ಗಲಭೆಗಳಲ್ಲಿ ಮೃತರಾದವರ ಸಂಖ್ಯೆ 5ಕ್ಕೇರಿದೆ. ಹಿಂಸಾಚಾರ ತಡೆಯುವಲ್ಲಿ ನಿರತರಾಗಿದ್ದ ಐವರು ಪೊಲೀಸರು ಮೃತಪಟ್ಟಿದ್ದಾರೆ
ಇಂಫಾಲ್ (ಮೇ 30, 2023): ಮಣಿಪುರದ ಇಂಫಾಲ್‌ನಲ್ಲಿ ಕುಕಿ ಹಾಗೂ ಮೀಟಿ ಸಮದಾಯಗಳ ನಡುವೆ ನಡೆದಿರುವ ಜನಾಂಗೀಯ ಸಂಘರ್ಷ ಸೋಮವಾರ ಕೊಂಚ ತಣ್ಣಗಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ಪರಿಸ್ಥಿತಿ ಪರಾಮರ್ಶೆಗೆಂದು ಇಂಫಾಲ್‌ಗೆ ಬಂದಿಳಿದಿದ್ದು, ಈ ವೇಳೆ ಶಾಂತಿ ನೆಲೆಸಿರುವುದು ಗಮನಾರ್ಹವಾಗಿದೆ. ಅಮಿತ್ ಶಾ 4 ದಿನ ಮಣಿಪುರದಲ್ಲೇ ತಂಗಲಿದ್ದಾರೆ.
ಈ ನಡುವೆ, ಭಾನುವಾರ ನಡೆದ ಗಲಭೆಗಳಲ್ಲಿ ಮೃತರಾದವರ ಸಂಖ್ಯೆ 5ಕ್ಕೇರಿದೆ. ಹಿಂಸಾಚಾರ ತಡೆಯುವಲ್ಲಿ ನಿರತರಾಗಿದ್ದ ಐವರು ಪೊಲೀಸರು ಮೃತಪಟ್ಟಿದ್ದಾರೆ. ಹಿಂಸಾಚಾರದ ಕಾರಣ ಇಂಫಾಲ್ ಕಣಿವೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳು, ಕಾರ್ಯಾಚರಣೆ ಮುಂದುವರಿಸಿವೆ. ಉದ್ರಿಕ್ತರನ್ನು ವಶಕ್ಕೆ ಪಡೆದು ಅವರು ಸಂಗ್ರಹಿಸಿಟ್ಟ ಶಸ್ತ್ರಾಸ್ತ್ರಗಳ ಜಪ್ತಿಯಲ್ಲಿ ತೊಡಗಿವೆ.
ಇದನ್ನು ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!
ರಕ್ಷಣಾ ಪಡೆಗಳು ಸೋಮವಾರ ಸನ್ಸಬಿ, ಗ್ವಾಲ್ಟಬಿ, ಶಭುಂಖೋಲ್, ಖುನಾವ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ 22 ಜನರನ್ನು ಬಂಧಿಸಿದೆ. ಬಂಧಿತರಿಂದ 15 ಕೋವಿಗಳು, ಒಂದು ದೇಶಿ ಆಯುಧ, ಎರಡು ಬಂದೂಕು ವಶಪಡಿಸಿಕೊಂಡಿದೆ.
ಜೊತೆಗೆ ಇಂಫಾಲ್‌ನ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ಅವರಿಂದ ಚೀನಿ ಗ್ರೆನೇಡ್, ಬಂದೂಕು, ಬುಲೆಟ್ ವಶಪಡಿಸಿಕೊಂಡಿದೆ. ರಾಜ್ಯದಲ್ಲಿ ಸೇನೆ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಕಾರ್ಯಾಚರಣೆ ವೇಳೆ 40 ಸಶಸ್ತ್ರ ಉಗ್ರರನ್ನು ಪಡೆಗಳು ಕೊಂದು ಹಾಕಿದ್ದವು.
ಇದನ್ನೂ ಓದಿ: Operation Weapon Recovery: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಂತಿ ಸ್ಥಾಪನೆಗೆ ಆಯುಧ ವಶಪಡಿಸಿಕೊಳ್ಳಲು ಮುಂದಾದ ಸೇನೆ
ಕ್ರೈಸ್ತ ಧರ್ಮ ಪಾಲಿಸುವ ಮೀಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ಮಣಿಪುರ ಹೈಕೋರ್ಚ್ ಆದೇಶ ನೀಡಿದ ಬಳಿಕ ರಾಜ್ಯದಲ್ಲಿ ಹಿಂಸೆ ಆರಂಭವಾಗಿದೆ. ಮೀಟಿಗಳಿಗೆ ಎಸ್‌ಟಿ ಮಾನ್ಯತೆ ನೀಡಲು ಹಿಂದೂಗಳಾದ ಕುಕಿ ಸಮುದಾಯದ ವಿರೋಧವಿದೆ. ಕಳೆದ ತಿಂಗಳು ಆರಂಭವಾದ ಹಿಂಸೆಗೆ ರಾಜ್ಯದಲ್ಲಿ ಈವರೆಗೆ 75 ಮಂದಿ ಬಲಿಯಾಗಿದ್ದಾರೆ.
ಮಾನವ ತಡೆಯಾಗಿ ಜನರ ಬಳಕೆಗೆ ಉಗ್ರರ ಸಂಚು
ಮಣಿಪುರದಲ್ಲಿ ತಮ್ಮ ವಿರುದ್ಧದ ಸೇನಾ ಕಾರ್ಯಾಚರಣೆಗೆ ಕುತಂತ್ರದ ಮೂಲಕ ಅಡ್ಡಿಪಡಿಸುವ ಯೋಜನೆಯನ್ನು ಉಗ್ರರು ಹಾಕಿಕೊಂಡಿದ್ದಾರೆ ಎಂದು ಸೇನೆ ಹೇಳಿದೆ. ಮುಗ್ಧರು, ಮಹಿಳೆ, ಮಕ್ಕಳನ್ನು ‘ಮಾನವ ತಡೆ’ಯಾಗಿ ಬಳಸುವ ಯೋಜನೆಯು ಉಗ್ರರ ಫೋನ್ ಕದ್ದಾಲಿಸಿದಾಗ ಪತ್ತೆಯಾಗಿದೆ. ಮುಗ್ಧರನ್ನು ತಮ್ಮೆದುರು ನಿಲ್ಲಿಸಿಕೊಂಡರೆ ಸೇನೆ ಗುಂಡು ಹಾರಿಸಲ್ಲ ಎಂಬ ಯೋಜನೆ ಉಗ್ರರದ್ದು. ಇದಲ್ಲದೆ, ಶಸ್ತ್ರಾಸ್ತ್ರ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದು ಕೂಡ ಕದ್ದಾಲಿಕೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಹಿಂದೂ ಮೀಟಿ ಸಮುದಾಯ, ಆದಿವಾಸಿ ಕ್ರೈಸ್ತರ ನಡುವೆ ಸಂಘರ್ಷ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ ಹಿಂಸೆಗೆ 54 ಬಲಿ!