ಅರ್ಜೆಂಟ್‌ ಅಂದ್ಕೊಂಡು ವಂದೇ ಭಾರತ್‌ ಏರಿದ ವ್ಯಕ್ತಿಗೆ ಆಗಿದ್ದು 6 ಸಾವಿರ ರೂಪಾಯಿ ನಷ್ಟ!

By Santosh Naik  |  First Published Jul 20, 2023, 5:12 PM IST

ಭೋಪಾಲ್‌ ಸ್ಟೇಷನ್‌ನಲ್ಲಿ ನಿಂತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಮೂತ್ರ ಮಾಡೋಕೆ ಹತ್ತಿದ ವ್ಯಕ್ತಿಗೆ ಕೊನೆಗೆ 6 ಸಾವಿರ ರೂಪಾಯಿ ನಷ್ಟವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ನವದೆಹಲಿ (ಜು.20): ರೈಲ್ವೇ ಸ್ಟೇಷನ್‌ಗೆ ಬಂದ ಬಳಿಕ ವ್ಯಕ್ತಿಯೊಬ್ಬನಿಗೆ ಮೂತ್ರಕ್ಕೆ ಅರ್ಜೆಂಟ್‌ ಆಗಿದ್ದರಿಂದ ಬರೋಬ್ಬರಿ 6 ಸಾವಿರ ರೂಪಾಯಿ ನಷ್ಟ ಎದುರಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹೈದರಾಬಾದ್‌ ಮೂಲದ ಅಬ್ದುಲ್‌ ಖಾದಿರ್‌, 6 ಸಾವಿರ ರೂಪಾಯಿ ನಷ್ಟಕ್ಕೆ ಒಳಗಾದ ವ್ಯಕ್ತಿ. ಭೋಪಾಲ್‌ ರೈಲ್ವೇ ಸ್ಟೇಷನ್‌ನ ಫ್ಲ್ಯಾಟ್‌ಫಾರ್ಮ್‌ಗೆ ಬಂದಾಗ, ಅಬ್ದುಲ್‌ ಖಾದಿರ್‌ಗೆ ಮೂತ್ರಕ್ಕೆ ಅರ್ಜೆಂಟ್‌ ಆಗಿದೆ. ಆದರೆ, ಸ್ಟೇಷನ್‌ನಲ್ಲಿದ್ದ ಶೌಚಾಲಯಕ್ಕೆ ಹೋಗುವ ಬದಲು ತಮ್ಮ ಮುಂದೆಯೇ ನಿಂತಿದ್ದ ವಂದೇ ಭಾರತ್‌ ರೈಲಿನ ಬಾತ್‌ರೂಮ್‌ಅನ್ನು ಬಳಸಲು ಮುಂದಾಗಿದ್ದ. ತನ್ನ ಪತ್ನಿ ಹಾಗೂ ಎಂಟು ವರ್ಷದ ಪುತ್ರನೊಂದಿಗೆ ಹೈದರಾಬಾದ್‌ನಿಂದ ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ಸಿಂಗ್ರೌಲಿಗೆ ಖಾದಿರ್‌ ಪ್ರಯಾಣ ಮಾಡುತ್ತಿದ್ದರು. ಹೈದರಾಬಾದ್‌ ಹಾಗೂ ಸಿಂಗ್ರೌಲಿಯಲ್ಲಿ ಎರಡು ಡ್ರೈಪ್ರೂಟ್‌ ಶಾಪ್‌ಗಳನ್ನು ಅಬ್ದುಲ್‌ ಖಾದಿರ್‌ ಹೊಂದಿದ್ದಾರೆ. ಹೈದರಾಬಾದ್‌ನಿಂದ ಭೋಪಾಲ್‌ಗೆ ಬಂದಿದ್ದ ಖಾದಿರ್‌ ಕುಟುಂಬ ಅಲ್ಲಿಂದ ಸಿಂಗ್ರೌಲಲಿಯ ರೈಲಿಗಾಗಿ ಕಾಯುತ್ತಿತ್ತು. ಜುಲೈ 15 ರಂದು ಸಂಜೆ 5.20ರ ವೇಳೆಗೆ ಇವರು ಭೋಪಾಲ್‌ಗೆ ಬಂದಿದ್ದರೆ, ಸಿಂಗ್ರೌಲಿಗೆ ಹೋಗಬೇಕಿದ್ದ ರೈಲು ರಾತ್ರಿ 8.55ಕ್ಕೆ ಹೊರಡಬೇಕಿತ್ತು.

ಇಡೀ ಕುಟುಂಬ ಫ್ಲ್ಯಾಟ್‌ಫಾರ್ಮ್‌ನಲ್ಲಿ ಇರುವಾಗ, ಖಾದಿರ್‌ ಇಂದೋರ್‌ಗೆ ತೆರಳಬೇಕಿದ್ದ ವಂದೇ ಭಾರತ್‌ ರೈಲಿನ ಬಾಥ್‌ರೂಮ್‌ ಬಳಕೆ ಮಾಡಲು ಹೋಗಿದ್ದರು. ಆದರೆ, ಅಬ್ದುಲ್ ಬಾತ್ ರೂಂನಿಂದ ಹೊರಬಂದ ತಕ್ಷಣ, ರೈಲಿನ ಬಾಗಿಲುಗಳು ಲಾಕ್ ಆಗಿದ್ದವು ಮತ್ತು ರೈಲು ಚಲಿಸಲು ಪ್ರಾರಂಭಿಸಿತು ಎನ್ನುವುದನ್ನು ಗಮನಿಸಿದ್ದರು. ಈ ವೇಳೆ ಅಬ್ದುಲ್  ಖಾದಿರ್‌, ಮೂರು ಟಿಕೆಟ್ ಕಲೆಕ್ಟರ್‌ಗಳು ಮತ್ತು ವಿವಿಧ ಕೋಚ್‌ಗಳಲ್ಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯಿಂದ ಸಹಾಯ ಪಡೆಯಲು ಪ್ರಯತ್ನಿಸಿದರು, ಆದರೆ, ರೈಲಿನ ಬಾಗಿಲನ್ನು ತೆರೆಯುವ ಅಧಿಕಾರ ಲೋಕೋಪೈಲಟ್‌ ಅಂದರೆ ಚಾಲಕನಿಗೆ ಮಾತ್ರವೇ ಇದೆ ಎಂದು ತಿಳಿಸಲಾಗಿತ್ತು.

ಚಾಲಕನ ಬಳಿಕ ಹೋಗಲು ಪ್ರಯತ್ನಿಸಿದಾಗ ಅವರನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು. ಕೊನೆಗೆ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡಿದ್ದಕ್ಕಾಗಿ ಅಬ್ದುಲ್‌ ಖಾದಿರ್‌ಗೆ 1020ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಬಳಿಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಉಜ್ಜೈಯಿನಿಗೆ ಹೋಗಿ ನಿಂತಾಗ ಅಲ್ಲಿಂದ ಕೆಳಗಿಳಿದಿದ್ದರು. ಬಳಿಕ ಅಲ್ಲಿಂದ 750 ರೂಪಾಯಿ ಕೊಟ್ಟು ಬಸ್‌ನಲ್ಲಿ ಭೋಪಾಲ್‌ಗೆ ಆಗಮಿಸಿದ್ದರು.

ಅಬ್ದುಲ್ ರೈಲಿನಲ್ಲಿ ಸಿಲುಕಿಕೊಂಡಿದ್ದಾಗ, ಅವನ ಹೆಂಡತಿ ಮತ್ತು ಮಗ ಅವರ ಬಗ್ಗೆ ಚಿಂತಿತರಾಗಿದ್ದರು. ಮುಂದೇನು ಮಾಡುವುದು ಎಂದು ತೋಚದೇ ನಿಂತಿದ್ದ ಅವರು ಸಿಂಗ್ರೌಲಿಗೆ ಹೋಗಬೇಕಾಗಿದ್ದ ದಕ್ಷಿಣ್‌ ಎಕ್ಸ್‌ಪ್ರೆಸ್‌ ರೈಲನ್ನು ಹತ್ತದೇ ಇರಲು ತೀರ್ಮಾನ ಮಾಡಿದ್ದರು. ಇದರಿಂದಾಗಿ ಸಿಂಗ್ರೌಲಿ ಪ್ರಯಾಣಕ್ಕಾಗಿ ದಕ್ಷಿಣ ಎಕ್ಸ್‌ಪ್ರೆಸ್‌ನಲ್ಲಿ ಬುಕ್‌ ಮಾಡಲಾಗಿದ್ದ 4 ಸಾವಿರ ರೂಪಾಯಿ ಮೌಲ್ಯದ ಟಿಕೆಟ್‌ಗಳು ವೇಸ್ಟ್‌ ಆಗಿದ್ದವು. ಇದರಿಂದಾಗಿ ವಂದೇ ಭಾರತ್‌ ಟ್ರೇನ್‌ನ ಬಾತ್‌ ರೂಮ್‌ ಬಳಕೆ ಮಾಡಿದ್ದ ಕಾರಣಕ್ಕಾಗಿ ಅಬ್ದುಲ್‌ ಖಾದಿರ್‌ ಅಂದಾಜು 6 ಸಾವಿರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

Tap to resize

Latest Videos

Vande bharat: ವರ್ಷದಲ್ಲಿ 200+ ರೈಲಿಗೆ ಕಲ್ಲೆಸೆತ, ವಂದೇ ಭಾರತ್‌ ರೈಲಿಗೆ 24 ಬಾರಿ ಕಲ್ಲಿನ ದಾಳಿ!

ವಂದೇ ಭಾರತ್ ರೈಲುಗಳಲ್ಲಿ ತುರ್ತು ವ್ಯವಸ್ಥೆ ಇಲ್ಲದ ಕಾರಣ ಅವರ ಕುಟುಂಬ ಮಾನಸಿಕ ಕಿರುಕುಳ ಅನುಭವಿಸಬೇಕಾಯಿತು ಎಂದು ಅಬ್ದುಲ್ ಆರೋಪಿಸಿದ್ದಾರೆ. ಈ ಘಟನೆಯು ರೈಲಿನ ತುರ್ತು ವ್ಯವಸ್ಥೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

 

ಪ್ರಯಾಣಿಕರ ಆಕರ್ಷಣೆಗೆ ರೈಲು ಟಿಕೆಟ್‌ನಲ್ಲಿ ಶೇ.25ರವರೆಗೂ ರಿಯಾಯ್ತಿ

ಅಬ್ದುಲ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಭೋಪಾಲ್ ರೈಲ್ವೆ ವಿಭಾಗದ ಪಿಆರ್‌ಒ ಸುಬೇದಾರ್ ಸಿಂಗ್, ವಂದೇ ಭಾರತ್ ರೈಲು ಪ್ರಾರಂಭವಾಗುವ ಮೊದಲು ಘೋಷಣೆ ಮಾಡಲಾಗುತ್ತದೆ. ಯಾವ ದಿಕ್ಕಿನಲ್ಲಿ ಬಾಗಿಲು ತೆರೆಯುತ್ತದೆ ಮತ್ತು ಯಾವ ದಿಕ್ಕಿನ ಬಾಗಿಲುಗಳನ್ನು ಲಾಕ್ ಮಾಡಲಾಗುತ್ತಿದೆ ಎಂದು ಸೂಚಿಸುತ್ತದೆ. ಅಪಘಾತಗಳನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಈ ಸುರಕ್ಷತಾ ಕ್ರಮವು ಜಾರಿಯಲ್ಲಿದೆ. ಹೆಚ್ಚುವರಿಯಾಗಿ, ಉನ್ನತ ಅಧಿಕಾರಿಗಳಿಂದ ಆದೇಶವನ್ನು ಪಡೆದ ನಂತರವೇ ರೈಲನ್ನು ನಿಲ್ಲಿಸಬಹುದು ಎಂದು ಸಿಂಗ್ ತಿಳಿಸಿದ್ದಾರೆ.

click me!