ರೈಲು ಪ್ರಯಾಣಿಕರಿಗೆ ಕಂಟಕ ಎನಿಸಿರುವ ಕಲ್ಲೆಸೆತ ಪ್ರಕರಣಗಳು ರೈಲ್ವೆ ವಲಯಗಳಿಗೆ ತಲೆನೋವು ತಂದಿವೆ. ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 200ಕ್ಕೂ ಹೆಚ್ಚು ಇಂತಹ ಪ್ರಕರಣಗಳು ನಡೆದಿದ್ದು, 49 ದುಷ್ಕರ್ಮಿಗಳ ಬಂಧನವಾಗಿದೆ.

ಮಯೂರ್‌ ಹೆಗಡೆ

ಬೆಂಗಳೂರು (ಜು.12): ರೈಲು ಪ್ರಯಾಣಿಕರಿಗೆ ಕಂಟಕ ಎನಿಸಿರುವ ಕಲ್ಲೆಸೆತ ಪ್ರಕರಣಗಳು ರೈಲ್ವೆ ವಲಯಗಳಿಗೆ ತಲೆನೋವು ತಂದಿವೆ. ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 200ಕ್ಕೂ ಹೆಚ್ಚು ಇಂತಹ ಪ್ರಕರಣಗಳು ನಡೆದಿದ್ದು, 49 ದುಷ್ಕರ್ಮಿಗಳ ಬಂಧನವಾಗಿದೆ.

ಈಚೆಗೆ ನೈಋುತ್ಯ ರೈಲ್ವೆ ವಲಯದಲ್ಲಿ ಸಂಚಾರ ಆರಂಭಿಸಿದ ಬೆಂಗಳೂರು-ಧಾರವಾಡ ‘ವಂದೇ ಭಾರತ್‌’ ಹದಿನೈದು ದಿನಗಳಲ್ಲೇ ಮೂರು ಕಲ್ಲೆಸೆತಕ್ಕೆ ಗುರಿಯಾಗಿದೆ. ಹೆಚ್ಚುತ್ತಿರುವ ಈ ದುಷ್ಕೃತ್ಯ ಒಂದು ಕಡೆ ರೈಲುಗಳಿಗೆ ಹಾನಿಯುಂಟು ಮಾಡುತ್ತಿದ್ದರೆ, ಇನ್ನೊಂದು ಕಡೆ ಪ್ರಯಾಣಿಕರಿಗೂ ಆತಂಕ ಮೂಡಿಸುತ್ತಿದೆ. ರಾಜ್ಯದಲ್ಲಿನ ನೈಋುತ್ಯ ರೈಲ್ವೆ, ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆ ವಲಯಗಳಿಗೆ ಇದು ಸವಾಲೆನಿಸಿದೆ.

ಧಾರವಾಡ-ಬೆಂಗ್ಳೂರು ‘ವಂದೇ ಭಾರತ್‌’ ರೈಲಿಗೆ ಕಲ್ಲೆಸೆತ, ಗಾಜು ಪುಡಿಪುಡಿ

ವಂದೇ ಭಾರತ್‌ಗೆ 24 ಬಾರಿ ಕಲ್ಲೇಟು:

ರಾಜ್ಯದಲ್ಲಿ ಈವರೆಗೆ ಚೆನ್ನೈ-ಮೈಸೂರು ಮತ್ತು ಬೆಂಗಳೂರು-ಧಾರವಾಡ ಸೇರಿ ಎರಡು ‘ವಂದೇ ಭಾರತ್‌’ ರೈಲು(Vande bharat train)ಗಳು 24 ಬಾರಿ ಕಲ್ಲೇಟು ತಿಂದಿವೆ. ಇತರೆ ರೈಲುಗಳು 190ಕ್ಕೂ ಹೆಚ್ಚು ಬಾರಿ ಕಲ್ಲೆಸೆತದ ಪರಿಣಾಮ ಎದುರಿಸಿವೆ. ದಕ್ಷಿಣ ರೈಲ್ವೆಯ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ (ಚೆನ್ನೈ-ಮೈಸೂರು )ಗೆ ಬೆಂಗಳೂರು ವಲಯ ವ್ಯಾಪ್ತಿಯಲ್ಲೇ 21 ಬಾರಿ ಕಲ್ಲೇಟು ಬಿದ್ದಿದ್ದು, 25 ಗಾಜುಗಳು ಒಡೆದಿವೆ.

ಅದೃಷ್ಟವಶಾತ್‌ ಹೊರಗಿನ ಗಾಜು ಮಾತ್ರ ಒಡೆದ ಕಾರಣ ಪ್ರಯಾಣಿಕರಿಗೆ ಗಾಯವಾಗಿಲ್ಲ. ಕಳೆದ ಏಳು ತಿಂಗಳಲ್ಲಿ ಈವರೆಗೆ ನೈಋುತ್ಯ ರೈಲ್ವೆಯ ಸಾಮಾನ್ಯ ರೈಲುಗಳಿಗೆ 65ಕ್ಕೂ ಹೆಚ್ಚು ಸಲ ಕಲ್ಲೆಸೆಯಲಾಗಿದೆ. ಎರಡು ಬಾರಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿತ್ತು. ಕೇಂದ್ರ ರೈಲ್ವೆಯ ಸೊಲ್ಲಾಪುರ ವಿಭಾಗ ವ್ಯಾಪ್ತಿಯ ಕಲಬುರಗಿಯಲ್ಲಿ ಪ್ಯಾಸೆಂಜರ್‌ ರೈಲೊಂದಕ್ಕೆ ಕಲ್ಲೆಸೆತ ಪ್ರಕರಣದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಗಾಯಗೊಂಡಿದ್ದರು.

ವಂದೇ ಭಾರತ್‌ನ ಒಂದು ಕಿಟಕಿ ಗಾಜು ಒಡೆದರೆ ಅದರ ಬದಲಾವಣೆಗೆ ಸುಮಾರು .15-.18 ಸಾವಿರ ಖರ್ಚಾಗುತ್ತದೆ. ಬಾಣಸವಾಡಿಯ ಲೋಕೋಶೆಡ್‌ನಲ್ಲಿ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಹೆಚ್ಚು ಹಾನಿಯಾದರೆ ದುರಸ್ತಿಗಾಗಿ ರೈಲಿನ ಸಂಚಾರವನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಬರಬಹುದು ಎನ್ನುತ್ತಾರೆ ಅಧಿಕಾರಿಗಳು.

ಸ್ಥಳ ಗುರುತು:

ಬೆಂಗಳೂರಲ್ಲಿ ಕೊಡಿಗೇಹಳ್ಳಿ, ಕಾರ್ಮೆಲ್‌ರಾಂ, ಲೊಟ್ಟಗೊಲ್ಲಹಳ್ಳಿ, ಯಶವಂತಪುರ, ಹೊಸೂರು ಸೇರಿ ದೇವನಗೊಂದಿಯಿಂದ ದಂಡು ನಿಲ್ದಾಣದವರೆಗೆ ಹಲವು ಸ್ಥಳಗಳನ್ನು ಕಲ್ಲೆಸೆವ ಬ್ಲ್ಯಾಕ್‌ಸ್ಪಾಟ್‌ ಆಗಿ ಗುರುತಿಸಲಾಗಿದೆ. ದಾವಣಗೆರೆಯಲ್ಲಿ ವಂದೇ ಭಾರತ್‌ಗೆ ಕಲ್ಲೆಸೆತ ಪ್ರಕರಣದ ಬಳಿಕ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲೂ ನೈಋುತ್ಯ ರೈಲ್ವೆ ಗಸ್ತು ತಂಡ ರಚಿಸಿದೆ. ಲಭ್ಯ ಇರುವೆಡೆ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನೂ ಸಂಗ್ರಹಿಸಲು ನಿರ್ಧರಿಸಲಾಗಿದೆ.

ಟ್ರ್ಯಾಕ್‌ಮನ್‌ಗಳಂತೆ ಓಡಾಟ:

ಗುರುತಿಸಲಾದ ಸ್ಥಳಗಳ ಸುತ್ತಮುತ್ತಲ ರಾಜ್ಯ ರೈಲ್ವೆ ಪೊಲೀಸರು ಜನವಸತಿ ಸ್ಥಳಕ್ಕೆ ತೆರಳಿ ಕಲ್ಲೆಸೆಯುವವರಿಗೆ ತಿಳಿ ಹೇಳುತ್ತಿದ್ದಾರೆ. ಆದರೆ, ಎಲ್ಲಿ, ಯಾವ ಸಮಯಕ್ಕೆ ಕಲ್ಲು ಎಸೆಯುತ್ತಾರೆ ಎಂಬುದು ಹಾಗೂ ಕಿಡಿಗೇಡಿಗಳ ಪತ್ತೆ ಕಷ್ಟ. ಹೀಗಾಗಿಯೇ 200ಕ್ಕೂ ಹೆಚ್ಚು ಪ್ರಕರಣ ಆಗಿದ್ದರೂ ಬಂಧಿತರ ಸಂಖ್ಯೆ 49ರಷ್ಟುಮಾತ್ರವಿದೆ. ಹೆಚ್ಚುತ್ತಿರುವ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಆರ್‌ಪಿಎಫ್‌, ರಾಜ್ಯ ರೈಲ್ವೆ ಪೊಲೀಸರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಸಿವಿಲ… ಧಿರಿಸಿನಲ್ಲಿ ಟ್ರ್ಯಾಕ್‌ಮನ್‌ಗಳಂತೆ ಗಸ್ತು ತಿರುಗುತ್ತಿದ್ದಾರೆ. ಅಪರಾಧ ಪತ್ತೆ, ಗುಪ್ತಚರ ಪೊಲೀಸರಿಂದಲೂ ಇದಕ್ಕಾಗಿ ಮಾಹಿತಿ ಪಡೆಯಲು ನೈಋುತ್ಯ ರೈಲ್ವೆ ಮುಂದಾಗಿದೆ.

ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

  • 21 ಬಾರಿ: ಚೆನ್ನೈ-ಮೈಸೂರು ವಂದೇ ಭಾರತ್‌ಗೆ ಕಲ್ಲೇಟು
  • 3 ಸಲ: ಬೆಂಗಳೂರು-ಧಾರವಾಡ ವಂದೇ ಭಾರತ್‌ಗೆ ಕಲ್ಲೆಸೆತ

ರೈಲು ಕಲ್ಲೆಸೆತ ಪ್ರಕರಣ ದಾಖಲು ಬಂಧನ

ವಂದೇ ಭಾರತ್‌ 24 19 5

ಇತರೆ ರೈಲುಗಳಿಗೆ ಕಲ್ಲೆಸೆತ (ನೈಋುತ್ಯ ರೈಲ್ವೆ)

ವಿಭಾಗ ಕಲ್ಲೆಸೆತ ಪ್ರಕರಣ ದಾಖಲು ಬಂಧನ

  • ಬೆಂಗಳೂರು 98 84 42
  • ಮೈಸೂರು 34 17 01
  • ಹುಬ್ಬಳ್ಳಿ 34 17 01
  • ಒಟ್ಟೂ 190 137 44

ರಾಜ್ಯದ ರೈಲ್ವೆ ವಲಯಗಳು ಕಲ್ಲೆಸೆತ ತಡೆಯಲು ಹೆಚ್ಚಿನ ಗಸ್ತು ತಂಡ ರಚಿಸಬೇಕು. ಜೊತೆಗೆ ಈ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಯೋಚಿಸಬೇಕು.

ಕೃಷ್ಣಪ್ರಸಾದ್‌, ರೈಲ್ವೆ ಹೋರಾಟಗಾರ