
ತಿರುವನಂತಪುರಂ (ಜು.13): ಸಾಲವು ಸಂಬಂಧಗಳ ಪಾಲಿಗೆ ಶೂಲ ಆಗುತ್ತಿರುವ ಈ ಕಾಲದಲ್ಲಿ, ವ್ಯಕ್ತಿಯೊಬ್ಬರು 35 ವರ್ಷಗಳ ಹಿಂದೆ ತಮಗೆ ಸಾಲ ನೀಡಿದವರನ್ನು ಹುಡುಕಿಕೊಂಡು ಹೋಗಿ ಅದನ್ನು ಬಡ್ಡಿ ಸಮೇತ ಪಾವತಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದ ಇಸ್ಮಾಯಿಲ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲಸಕ್ಕೆಂದು ಸೌದಿ ಅರೇಬಿಯಾದ ಅಬ್ಕೈಕ್ ಎಂಬಲ್ಲಿ ನೆಲೆಸಿದ್ದ ಇಸ್ಮಾಯಿಲ್ ಮತ್ತು ಲಚ್ಚಣ್ಣ 1991ರಲ್ಲಿ ಪರಸ್ಪರ ಪರಿಚಯವಾಗಿದ್ದರು. ಸಹೋದ್ಯೋಗಿಗಳೂ ಆಗಿದ್ದ ಇವರು, ಒಂದೇ ಕೋಣೆಯಲ್ಲಿ ಸುಮಾರು 5 ವರ್ಷ ವಾಸವಿದ್ದರು. ಆಗ ಲಚ್ಚಣ್ಣನಿಂದ 120 ರಿಯಾಲ್ (1 ಸಾವಿರ ರು.) ಪಡೆದ ಇಸ್ಮಾಯಿಲ್, ಸಾಧ್ಯವಾದಾಗ ಅದನ್ನು ಮರಳಿಸುವ ಭರವಸೆ ನೀಡಿದ್ದರು.
ಕೆಲ ವರ್ಷಗಳ ಬಳಿಕ ಲಚ್ಚಣ್ಣ ಭಾರತಕ್ಕೆ ಮರಳಿದರು. ಇಬ್ಬರ ಬಳಿಯೂ ಪರಸ್ಪರರ ದೂರವಾಣಿ ಸಂಖ್ಯೆ ಇರಲಿಲ್ಲ. ಕಾಲಕ್ರಮೇಣ ಅವರ ನಡುವೆ ಸಂಪರ್ಕವೇ ಇಲ್ಲವಾಯಿತು. ಆದರೆ ತಾವು ಪಡೆದ ಸಾಲವನ್ನು ಇಸ್ಮಾಯಿಲ್ ಮರೆತಿರಲಿಲ್ಲ.
35 ವರ್ಷದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿಸಬೇಕೆಂದು ಹೊರಟ ಇಸ್ಮಾಯಿಲ್ ಬಳಿ ಲಚ್ಚಣ್ಣನ ದೂರವಾಣಿ ಸಂಖ್ಯೆಯಾಗಲಿ, ವಿಳಾಸವಾಗಲಿ ಇರಲಿಲ್ಲ. ತಿಳಿದಿದ್ದದ್ದು, ಅವರು ಧರ್ಮಪುರಿಯವರು ಎಂದು. ಆ ಅಲ್ಪ ಮಾಹಿತಿಯನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ಲಚ್ಚಣ್ಣ ವಾಸವಿರುವ ಸ್ಥಳ ಪತ್ತೆ ಮಾಡಿದ ಇಸ್ಮಾಯಿಲ್, ಸೀದಾ ಅಲ್ಲಿಗೆ ಹೋಗಿ, ಅವರ ಪರಿವಾರಕ್ಕೆ 25 ಸಾವಿರ ರು. ಮರಳಿಸಿದ್ದಾರೆ. ಸದ್ಯ ಲಚ್ಚಣ್ಣ ಕಾರ್ಯನಿಮಿತ್ತ ಗಲ್ಫ್‌ನಲ್ಲೇ ಇರುವ ಕಾರಣ ವಾಟ್ಸಪ್ ವಿಡಿಯೋ ಕರೆ ಮೂಲಕ ಇಬ್ಬರ ನಡುವೆ ಮಾತುಕತೆ ನಡೆಯಿತು.
ಗೆಳೆಯ ಹಣ ಮರಳಿಸಿದ್ದರ ಬಗ್ಗೆ ಮಾತನಾಡಿದ ಲಚ್ಚಣ್ಣ, ‘25 ಸಾವಿರ ರು.ಅನ್ನು ಹೇಗೆ ಲೆಕ್ಕ ಮಾಡಿ ಕೊಟ್ಟನೋ ಗೊತ್ತಿಲ್ಲ. ಬಹುಶಃ ಬಡ್ಡಿ ಸೇರಿಸಿ ಕೊಟ್ಟಿರಬೇಕು. ಆತ ಪ್ರಾಮಾಣಿಕ ವ್ಯಕ್ತಿ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ’ ಎಂದು ಸ್ನೇಹಿತನ ಗುಣಗಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ