2022ರಲ್ಲಿ ಗ್ರಾಹಕರೊಬ್ಬರು ಅಮೇಜಾನ್‌ನಿಂದ ಕುಕ್ಕರ್ ಆರ್ಡರ್ ಮಾಡಿ ಬಳಿಕ ಅದನ್ನು ಕ್ಯಾನ್ಸಲ್ ಮಾಡಿದ್ದರು. ಎರಡು ವರ್ಷಗಳ ಬಳಿಕ ಈಗ ಅದು ಮನೆಗೆ ಬಂದಿರುವ ಘಟನೆ ನಡೆದಿದೆ.
ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಆಗಿರುವ ಎಡವಟ್ಟುಗಳ ಬಗ್ಗೆ ಇದಾಗಲೇ ಹಲವಾರು ಉದಾಹರಣೆಗಳಿವೆ. ಯಾವುದೋ ವಸ್ತುಗಳನ್ನು ಆರ್ಡರ್ ಮಾಡಿದರೆ, ಇನ್ನಾವುದೋ ವಸ್ತು ಬರುವುದು ಮಾಮೂಲಾಗಿದೆ. ಹಲವು ಸಂದರ್ಭಗಳಲ್ಲಿ ಮನೆಗೆ ಕಲ್ಲಿನ ಪಾರ್ಸೆಲ್ ಕೂಡ ಬಂದಿರುವ ಘಟನೆ ನಡೆದಿದೆ. ಅಮೇಜಾನ್‌ನಲ್ಲಿ ಈ ರೀತಿಯ ಅವಘಡಗಳು ಆಗಾಗ್ಗೆ ಆಗುತ್ತಲೇ ಇರುತ್ತವೆ. ದುಬಾರಿ ಬೆಲೆಯ ವಸ್ತು ಖರೀದಿ ಮಾಡಿದರೆ, ಸಂಬಂಧವೇ ಇಲ್ಲದ ಯಾವುದೇ ವಸ್ತು ಬರುವುದೇ ಹೆಚ್ಚು. ಆದ್ರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಗ್ರಾಹಕರೊಬ್ಬರು ಕುಕ್ಕರ್ ಆರ್ಡರ್ ಮಾಡಿದ ಎರಡು ವರ್ಷಗಳ ಬಳಿಕ ಅದು ಮನೆಗೆ ಬಂದಿದೆ. ಇಷ್ಟೇ ಆದರೆ ಇದು ಅಷ್ಟಾಗಿ ಸುದ್ದಿಯಾಗುತ್ತಿರಲಿಲ್ಲ. ಆದರೆ ಕುಕ್ಕರ್ ಆರ್ಡರ್ ಕ್ಯಾನ್ಸಲ್ ಮಾಡಿದ್ದ ಬಳಿಕ ಆರ್ಡರ್ ಬಂದಿರುವುದು ಈ ಪರಿ ಸುದ್ದಿ ಮಾಡುತ್ತಿದೆ.
ತಾವು ಆದೇಶವನ್ನು ರದ್ದುಗೊಳಿಸಿದ ಎರಡು ವರ್ಷಗಳ ನಂತರ ಇ-ಕಾಮರ್ಸ್ ಕಂಪೆನಿ ಅಮೇಜಾನ್ ಪ್ರೆಷರ್ ಕುಕ್ಕರ್ ಅನ್ನು ವಿತರಿಸಿದೆ ಎಂದು ಅಮೆಜಾನ್ ಗ್ರಾಹಕ ವಿನೋದ್ ಎನ್ನುವವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಅವರು ತಾವು ಆರ್ಡರ್ ಮಾಡಿರುವ ಹಾಗೂ ಅದನ್ನು ಕ್ಯಾನ್ಸಲ್ ಮಾಡುವ ದಾಖಲೆಯನ್ನೂ ತೋರಿಸಿದ್ದಾರೆ. ಒಟ್ಟಿನಲ್ಲಿ ಅಮೇಜಾನ್‌ನಿಂದ ಆಗಿರುವ ಈ ಎಡವಟ್ಟು ಗ್ರಾಹಕರಲ್ಲಿ ನಗು ತರಿಸಿದ್ದಂತೂ ನಿಜ.
ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್ ಶೆಟ್ಟಿ
ಅಷ್ಟಕ್ಕೂ, ಈ ಕುಕ್ಕರ್ ನೋಡಿ ವಿನೋದ್ ಅವರು ಅರೆಕ್ಷಣ ಗಾಬರಿಗೊಂಡರಂತೆ. ಯಾವುದೇ ಪಾರ್ಸೆಲ್ ಆರ್ಡರ್ ಮಾಡಿರಲಿಲ್ಲ ಎನ್ನುವುದು ಒಂದೆಡೆಯಾದರೆ, ಎರಡು ವರ್ಷಗಳ ಹಿಂದೆ ಕ್ಯಾನ್ಸಲ್ ಮಾಡಿದ ವಸ್ತು ಮನೆಗೆ ಬರುತ್ತದೆ ಎನ್ನುವುದನ್ನು ಯಾರೂ ಊಹಿಸಿರಲು ಸಾಧ್ಯವೇ ಇಲ್ಲ ಬಿಡಿ. ಕುಕ್ಕರ್ ಅನ್ನು ಅವರು, ಅಕ್ಟೋಬರ್ 1, 2022 ರಂದು ಆರ್ಡರ್ ಮಾಡಿದ್ದರು. ಬಳಿಕ ಅದನ್ನು ರದ್ದು ಮಾಡಿದ್ದರು. ಆದರೆ ಆಗಸ್ಟ್ 28, 2024 ರಂದು ಮನೆಗೆ ಪಾರ್ಸೆಲ್ ಬಂದಿರುವುದಗಿ ಹೇಳಿದ್ದಾರೆ.
ವಿನೋದ್ ಅವರು, ಇದನ್ನು ತಮಾಷೆಯಾಗಿ ಬರೆದುಕೊಂಡಿದ್ದಾರೆ. ''ಧನ್ಯವಾದಗಳು, 2 ವರ್ಷಗಳ ನಂತರ ನನ್ನ ಆರ್ಡರ್ ಅನ್ನು ತಲುಪಿಸಿದ್ದಕ್ಕಾಗಿ Amazon ಎಂದಿದ್ದಾರೆ. ಇದು ವಿಶೇಷವಾದ ಪ್ರೆಷರ್ ಕುಕ್ಕರ್ ಆಗಿರಬೇಕು. ಕ್ಯಾನ್ಸಲ್ ಮಾಡಿದ ಬಳಿಕವೂ ನನಗೆ ಬಂದಿದೆ ಎಂದರೆ ನಿಜಕ್ಕೂ ಇದು ಅದ್ಭುತ ಕುಕ್ಕರ್ ಎಂದು ಎನಿಸುತ್ತದೆ ಎಂದಿದ್ದಾರೆ. ಇದಕ್ಕೆ ತಮಾಷೆಯ ಕಮೆಂಟ್ಸ್ ಸುರಿಮಳೆಯಾಗಿದೆ. ಬಹುಶಃ ಇದು "ಮಂಗಳ ಗ್ರಹದಿಂದ ತಲುಪಿಸಲಾಗಿದೆ" ಎಂದು ಎನಿಸುತ್ತಿದೆ ಎಂದು ಒಬ್ಬರು ಬರೆದಿದ್ದರೆ, ಕುಕ್ಕರ್ ಬಾಂಬ್ ಜಾಸ್ತಿಯಾಗಿದೆ, ಅಷ್ಟು ಬೇಗ ನೀವು ಅದನ್ನು ಓಪನ್ ಮಾಡಬಾರದಿತ್ತು, ನಿಮಗೆ ಏನೂ ಆಗಿಲ್ಲ ತಾನೇ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.