ಆಂಟಿ ಮೇಲಿನ ದ್ವೇಷಕ್ಕೆ ಏರ್‌ಪೋರ್ಟ್‌ಗೆ ಹುಸಿಬಾಂಬ್ ಕರೆ ಮಾಡಿದ ವ್ಯಕ್ತಿ

By Mahmad RafikFirst Published Oct 28, 2024, 3:51 PM IST
Highlights

60 ವರ್ಷದ ಮಹಿಳೆಯೊಬ್ಬರು 90 ಲಕ್ಷ ರೂ.ಗಳೊಂದಿಗೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಆತ್ಮಹತ್ಯಾ ಬಾಂಬರ್ ಎಂದು ಹುಸಿ ಕರೆ ಬಂದಿತ್ತು. ತನಿಖೆಯಲ್ಲಿ ಕರೆ ಮಾಡಿದ್ದು ಮಹಿಳೆಯ ಸೋದರ ಸಂಬಂಧಿ ಎಂದು ತಿಳಿದುಬಂದಿದೆ.

ಮುಂಬೈ: ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. 60 ವರ್ಷದ ಮಹಿಳೆಯೊಬ್ಬಳು ತನ್ನ ಗೆಳೆಯನನ್ನು ಭೇಟಿಯಾಗಲು 90 ಲಕ್ಷ ರೂಪಾಯಿ ನಗದು ಹಣದ ಜೊತೆ ಪ್ರಯಾಣಿಸುತ್ತಿದ್ದಾಳೆ ಎಂದು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆ ಬಂದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಈ ರೀತಿಯ ಕರೆ ಬರುತ್ತಿದ್ದಂತೆ ಶುಕ್ರವಾರ ಸಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯಲ್ಲಿ ಹುಸಿ ಕರೆ ಮಾಡಿದ್ದು ಮಹಿಳೆಯ ಸೋದರ ಸಂಬಂಧಿ ಎಂದು ತಿಳಿದು ಬಂದಿದೆ. ಕರೆ ಮಾಡಿರುವ ವ್ಯಕ್ತಿಯನ್ನು ಗೌರಿ ಭರ್ವಾನಿ ಎಂದು ಗುರುತಿಸಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಬೆಳಗಿನ ಜಾವ 1.30ಕ್ಕೆ ಕರೆ ಬಂದಿತ್ತು. 

Latest Videos

60 ವರ್ಷದ ಮಹಿಳೆ ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಳೆ. ಅಲ್ಲಿಂದ ಆಕೆ ಉಜ್ಬೇಕಿಸ್ತಾನ ವಿಮಾನ ಹಿಡಿದು ಗೆಳೆಯನನ್ನು ಭೇಟಿಯಾಗಲು ತೆರಳುತ್ತಿದ್ದಾಳೆ. ಮಹಿಳೆ ಅಪಾರಪ್ರಮಾಣದ ಹಣದ ಜೊತೆ ಪ್ರಯಾಣಿಸುತ್ತಿದ್ದು, ಆಕೆಯನ್ನು ಆತ್ಮಹತ್ಯೆ ಬಾಂಬರ್ ಎಂಬಂತೆ ಬಿಂಬಿಸಿ ಹೇಳಲಾಗಿತ್ತು. ಈ ಕರೆ ಬರುತ್ತಿದ್ದಂತೆ ಮುಂಬೈನ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗಿತ್ತು. 

ಇದನ್ನೂ ಓದಿ: ವಿಮಾನಗಳಿಗೆ ಹುಸಿ ಬಾಂಬ್‌ ಕರೆ; ನೀವು ಅಪರಾಧಕ್ಕೆ ಬೆಂಬಲ ನೀಡುತ್ತಿದ್ದೀರಿ; ಎಕ್ಸ್‌ಗೆ ಕೇಂದ್ರ ತೀವ್ರ ತರಾಟೆ

ಈ ವಿಷಯ ತಿಳಿಯುತ್ತಿದ್ದಂತೆ ಎಲ್ಲಾ ತನಿಖಾ ಸಂಸ್ಥೆಗಳು ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ಪತ್ತೆ ಮಾಡಲು ಮುಂದಾಗಿದ್ದವು. ಮುಂಬೈನಿಂದ ದೆಹಲಿಗೆ ತೆರಳುವ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಹುಸಿಕರೆ ಮಾಡಿದ್ದ ವ್ಯಕ್ತಿ ಮಹಿಳೆಯ ವಿಳಾಸವನ್ನು ಸಹ ನೀಡಿದ್ದನು. ಈ ವಿಳಾಸಕ್ಕೆ ತೆರಳಿ ಪರಿಶೀಲಿಸಿದಾಗ ಬಹಳ ದಿನಗಳ ಹಿಂದೆಯೇ ಮಹಿಳೆ ಅಲ್ಲಿಂದ ತೆರಳಿರುವ ವಿಷಯ ಗೊತ್ತಾಗಿದೆ. ಹಾಗೆ ಮಹಿಳೆ ಯಾವುದೇ ವಿಮಾನ ಟಿಕೆಟ್ ಬುಕ್ ಮಾಡದಿರೋದು ಸಹ  ಖಚಿತವಾಗಿದೆ. 

ಕರೆ ಮಾಡಿರುವ ವ್ಯಕ್ತಿ ಗೌರಿ ಭರ್ವಾನಿ ಮಹಿಳೆಯ ಸಂಬಂಧಿಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 
ಹುಸಿ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ನಿನ್ನೆ ಮತ್ತೆ 50 ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಕಳೆದೆರಡು ವಾರದಲ್ಲಿ ಬಂದ ಬೆದರಿಕೆಗಳ ಸಂಖ್ಯೆ 350!

click me!