
ನವದೆಹಲಿ (ಡಿ.17): ಬುರ್ಖಾ ಧರಿಸದೇ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗಿದ್ದ ಕಾರಣಕ್ಕೆ ಸಿಟ್ಟಾದ ವ್ಯಕ್ತಿ ಎಲ್ಲರನ್ನೂ ಕೊಲೆ ಮಾಡಿ ಅವರ ಶವಗಳನ್ನು ತನ್ನ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಹೂತುಹಾಕಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಸಮಯದಲ್ಲಿ ಆರೋಪಿ ಫಾರೂಕ್ ತನ್ನ ಪತ್ನಿ ತಾಹಿರಾ ಮತ್ತು ಹಿರಿಯ ಮಗಳು ಅಫ್ರೀನ್ ಅವರನ್ನು ಗುಂಡಿಕ್ಕಿ ಕೊಂದಿದ್ದು, ಕಿರಿಯ ಮಗಳು ಸಹ್ರೀನ್‌ಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮನೆಯ ಅಂಗಳದಲ್ಲಿ ಶೌಚಾಲಯಕ್ಕಾಗಿ ಮೊದಲೇ ಅಗೆದ ಗುಂಡಿಯಲ್ಲಿ ಮೂವರ ಶವಗಳನ್ನು ಹೂತು ಹಾಕಿದ್ದಾನೆ.
ಆರೋಪಿಯ ಮಾಹಿತಿ ಮೇರೆಗೆ ಮಂಗಳವಾರ ಸಂಜೆ ಪೊಲೀಸರು ಸೆಪ್ಟಿಕ್ ಟ್ಯಾಂಕ್ ಅಗೆದು ಮೃತದೇಹಗಳನ್ನು ಹೊರತೆಗೆದರು. ಕಂಧ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಧಿ ದೌಲತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಫಾರುಕ್ ಹೋಟೆಲ್ ನಲ್ಲಿ ರೊಟ್ಟಿ ತಯಾರಕನಾಗಿ ಕೆಲಸ ಮಾಡುತ್ತಾನೆ. ಫಾರೂಕ್ ತನ್ನ ತಂದೆ ಮತ್ತು ಸಹೋದರರಿಂದ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಾನೆ. ಅವನಿಗೆ ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಐದು ಮಕ್ಕಳಿದ್ದರು.
ಫಾರೂಕ್ ತನ್ನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ (16) ಮತ್ತು ಸಹ್ರೀನ್ (14) ಅವರನ್ನು ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಪರ್ದಾದಲ್ಲಿಯೇ ಇರಲು ಕೇಳಿಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ. ಆದರೆ ತಾಹಿರಾ ಇದಕ್ಕೆ ಒಪ್ಪಲಿಲ್ಲ. ಈ ವಿಷಯದ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಫಾರೂಕ್ ಇದನ್ನು ತನ್ನ ಸಾಮಾಜಿಕ ಅಗೌರವ ಎಂದು ಪರಿಗಣಿಸಿದ್ದ ಎನ್ನಲಾಗಿದೆ.
ಫಾರೂಕ್ ಅವರ ಪತ್ನಿ ಮತ್ತು ಇಬ್ಬರೂ ಹೆಣ್ಣುಮಕ್ಕಳು 10 ದಿನಗಳಿಂದ ಕಾಣೆಯಾಗಿದ್ದರು. ಫಾರೂಕ್ ಅವರ ತಂದೆ ದಾವೂದ್, ಸಂಭವನೀಯ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಫಾರೂಕ್‌ನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಾಗ, ಅವನು ಏನೇನೋ ನೆಪಗಳನ್ನು ಹೇಳುತ್ತಲೇ ಇದ್ದ. ತೀವ್ರ ವಿಚಾರಣೆಯ ಸಮಯದಲ್ಲಿ ಆತ ಇದ್ದ ವಿಚಾರ ತಿಳಿಸಿದ್ದಾನೆ.
ಅವನ ಹೆಂಡತಿ ಮತ್ತು ಹೆಣ್ಣುಮಕ್ಕಳು ಬುರ್ಖಾ ಧರಿಸದೆ ಮನೆಯಿಂದ ಹೊರಗೆ ಹೋಗುತ್ತಿದ್ದರು. ಇದು ನನಗೆ ಬೇಸರ ತಂದಿತು. ಹಾಗಾಗಿ ನಾನು ಅವರ ಮೂವರನ್ನೂ ಕೊಲ್ಲಲು ಯೋಜಿಸಿದೆ ಎಂದಿದ್ದಾನೆ. ನಾನು ಕೈರಾನದಿಂದ ಅಕ್ರಮ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ಖರೀದಿಸಿದೆ. ಮನೆಯ ಅಂಗಳದಲ್ಲಿ ಸೆಪ್ಟಿಕ್ ಟ್ಯಾಂಕ್ ಅಗೆದಿದ್ದೆ.
ಆ ಸಮಯದಲ್ಲಿ, ಪತ್ನಿ ತಾಹಿರಾ ತನ್ನ ಹೆತ್ತವರ ಮನೆಯಲ್ಲಿದ್ದಳು. ಅವರನ್ನು ಮನೆಗೆ ಕರೆಸಲಾಯಿತು. ಡಿಸೆಂಬರ್ 8 ರ ರಾತ್ರಿ, ಚಹಾ ಕುಡಿಯುವ ನೆಪದಲ್ಲಿ ಆಕೆಯನ್ನು ಎಬ್ಬಿಸಿ ಗುಂಡು ಹಾರಿಸಲಾಯಿತು. ಗುಂಡೇಟಿನ ಶಬ್ದ ಕೇಳಿ, ಅಫ್ರೀನ್ ಮತ್ತು ಸಹ್ರೀನ್ ಎಚ್ಚರಗೊಂಡರು. ನಾನು ಸಹ ಅಫ್ರೀನ್ ಮೇಲೆ ಗುಂಡು ಹಾರಿಸಿದೆ. ಆದರೆ ಸಹ್ರೀನ್ ಕತ್ತು ಹಿಸುಕಿ ಕೊಂದೆ ಎಂದು ಹೇಳಿದ್ದಾನೆ.
ಕೊಲೆಗಳ ನಂತರ, ಮೂವರನ್ನೂ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಹೂತಿದ್ದಾಗಿ ತಿಳಿಸಿದ್ದಾನೆ. ಇದಾದ ನಂತರ, ಕುಟುಂಬ ಸದಸ್ಯರನ್ನು ದಾರಿ ತಪ್ಪಿಸಲು, ಅವನು ಮಕ್ಕಳೊಂದಿಗೆ ಶಾಮ್ಲಿಯಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದೇನೆ ತಿಳಿಸಿದ್ದ ಎನ್ನಲಾಗಿದೆ. ದೀರ್ಘಕಾಲದವರೆಗೆ ಮಹಿಳೆ ಮತ್ತು ಹುಡುಗಿಯರ ಯಾವುದೇ ಕುರುಹು ಇಲ್ಲದಿದ್ದಾಗ, ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎನ್.ಪಿ. ಸಿಂಗ್ ಮಾತನಾಡಿ,ಇಬ್ಬರು ಹುಡುಗಿಯರು ಮತ್ತು ಒಬ್ಬ ಮಹಿಳೆ ಕಾಣೆಯಾಗಿರುವ ಬಗ್ಗೆ ಗ್ರಾಮದ ಮುಖ್ಯಸ್ಥರಿಂದ ಮಾಹಿತಿ ಬಂದಿತ್ತು. ತನಿಖೆಯ ಸಮಯದಲ್ಲಿ, ಮಹಿಳೆಯ ಪತಿ ಫಾರೂಕ್ ಅವರೊಂದಿಗೆ ಕಠಿಣ ವಿಚಾರಣೆ ನಡೆಸಲಾಯಿತು. ಇದರಲ್ಲಿ ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಮೂವರ ಮೃತದೇಹಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ