ಲಕ್ನೋ(ಏ.6): 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ತನ್ನ ವಿಗ್ ಅಡಿಯಲ್ಲಿ ಬಚ್ಚಿಟ್ಟ ವ್ಯಕ್ತಿಯನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಸೋಮವಾರ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಬಳಿಯಿಂದ 291 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಜಗತ್ತಿನಾದ್ಯಂತ ಮಾದಕವಸ್ತು ಕಳ್ಳಸಾಗಣೆದಾರರು ಅಕ್ರಮ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ವಿಲಕ್ಷಣವಾದ ಮಾರ್ಗಗಳನ್ನು ಅನುಸರಿಸುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇದೀಗ, ಇದೇ ರೀತಿಯ ಘಟನೆಯಲ್ಲಿ ಲಕ್ನೋ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ತನ್ನ ವಿಗ್‌ನಲ್ಲಿ ಹಳದಿ ಲೋಹವನ್ನು ಬಚ್ಚಿಟ್ಟಿದ್ದ ಪ್ರಯಾಣಿಕನಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 291 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಸುದ್ದಿಸಂಸ್ಥೆ IANS ವರದಿಯ ಪ್ರಕಾರ, ಪ್ರಯಾಣಿಕನು ಶಾರ್ಜಾದಿಂದ (Sharjah) ಲಕ್ನೋ ವಿಮಾನ ನಿಲ್ದಾಣಕ್ಕೆ (Lucknow Airport) ಬಂದಿದ್ದ.
ಪ್ರಯಾಣಿಕರ ವಿವರಗಳ ಆಧಾರದ ಮೇಲೆ, ಆತ ಹಸಿರು ಚಾನಲ್ ಮೂಲಕ ನಡೆದುಕೊಂಡು ಹೋಗುವಾಗ ಆತನನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಆತನ ವೈಯಕ್ತಿಕ ಹುಡುಕಾಟದ ಸಮಯದಲ್ಲಿ ಆತ ವಿಗ್ ಧರಿಸಿರುವುದು ಕಂಡು ಬಂದಿದೆ. ನಂತರ ಆತನ ವಿಗ್ ಅನ್ನು ತೆಗೆದು ಹಾಕಿದಾಗ, ಚಿನ್ನದ ಗಟ್ಟಿಯನ್ನು ಹೊಂದಿದ್ದ ಕಪ್ಪು ಟೇಪ್‌ನಿಂದ ಮಾಡಿದ ಚೀಲವನ್ನು ಅವನ ನೆತ್ತಿಯ ಮೇಲ್ಭಾಗಕ್ಕೆ ಅಂಟಿಸಲಾಗಿತ್ತು ಎಂದು ಕಸ್ಟಮ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ ವಿಗ್ ಧರಿಸಿದ್ದು ತಿಳಿದು ಮಂಟಪದಲ್ಲೇ ಮೂರ್ಛೆ ಹೋದ ವಧು... ಮದುವೆ ರದ್ದು
ಈತನ ಬಳಿ ಇದ್ದ ಒಟ್ಟು 291 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 15,42,300 ರೂ ಎಂದು ತಿಳಿದು ಬಂದಿದೆ.ಈ ಚಿನ್ನವನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಕಾಯಿದೆಯ (Customs Act) ಸೆಕ್ಷನ್ 104ರ ಅಡಿಯಲ್ಲಿ ಪ್ರಯಾಣಿಕನನ್ನು ಬಂಧಿಸಲಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಳ್ಳಸಾಗಣೆದಾರನನ್ನು ನ್ಯಾಯಾಲಯದ ಮುಂದೆ ಅಧಿಕಾರಿಗಳು ನಂತರ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸದ ಕಾರಣ, ಅಧಿಕಾರಿಗಳ ವಾದವನ್ನು ಆಲಿಸಿದ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಕಳೆದ ತಿಂಗಳು ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಬುರ್ಖಾದ ಮೇಲೆ ಡಿಸೈನ್‌ನಂತೆ ಹೊಳೆಯುವ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ತಂದಿದ್ದ ಮಹಿಳೆಯೊಬ್ಬರು ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದರು. ಅವರ ಬುರ್ಕಾದಲ್ಲಿದ್ದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಮಹಿಳೆ ಫೆ. 27 ರಂದು ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದ್ದರು.
ಮುಂಬೈ ಏರ್‌ಫೋರ್ಟ್‌ನಲ್ಲಿ ಕಾಫಿ ಪ್ಲಾಸ್ಕ್‌ನಿಂದ ಕೆಳಗೆ ಸುರಿಯಿತು ಚಿನ್ನ...!
ಇತ್ತೀಚಿನ ದಿನಗಳಲ್ಲಿ, ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಭಾರಿ ಸೃಜನಶೀಲತೆಯನ್ನು ತೋರುತ್ತಿದ್ದಾರೆ. ಕಳ್ಳಸಾಗಣೆಗೆ ಎಂತಹದೇ ತಂತ್ರ ತೋರಿದರು ನಮ್ಮ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಏರ್‌ಪೋರ್ಟ್‌ನಲ್ಲಿ ಖದೀಮರು ಸಿಕ್ಕಿ ಬೀಳುವುದು ಸಾಮಾನ್ಯವಾಗಿದೆ. ಆದಾಗ್ಯೂ ಬುದ್ದಿ ಕಲಿಯದ ಕೆಲವರು ಹೊಸ ತಂತ್ರಗಳನ್ನು ಪ್ರಯೋಗಿಸುತ್ತಲೆ ಇರುತ್ತಾರೆ. ಹಾಗೆಯೇ ತೆಲಂಗಾಣದ ( Telangana) ಹೈದರಾಬಾದ್‌ನ (Hyderabad) ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Shamshabad International Airport) ಕಸ್ಟಮ್ಸ್ ಅಧಿಕಾರಿಗಳು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ, 350 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನವನ್ನು ಬುರ್ಖಾದಲ್ಲಿರುವ ಡಿಸೈನ್‌ನಂತೆ ಮಣಿಗಳ ರೂಪದಲ್ಲಿ ಹೊಲಿಯಲಾಗಿತ್ತು. ಫೆಬ್ರವರಿ 26 ರಂದು ದುಬೈನಿಂದ ಬಂದ ಮಹಿಳೆಯೊಬ್ಬರು ಬುರ್ಖಾದ ಮೇಲೆ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ