
ಬರೇಲಿ (ಡಿ.04): ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ಬಂದ ನಂತರ ಇದೇ ಮೊದಲ ಬಾರಿ ಈ ಕಾಯ್ದೆಯಡಿ ಮೊದಲ ಬಂಧನವಾಗಿದೆ. ವಿವಾಹಿತ ಹಿಂದೂ ಯುವತಿಯೊಬ್ಬರಿಗೆ ಮತಾಂತರಕ್ಕೆ ಹಾಗೂ ಮದುವೆಗೆ ಬಲವಂತಪಡಿಸಿದ ಆರೋಪದಲ್ಲಿ ಒವೈಸ್ ಅಹ್ಮದ್ ಎಂಬಾತನನ್ನು ಬರೇಲಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದಲ್ಲೇ ಮೊದಲ ಬಾರಿಗೆ ಲವ್ ಜಿಹಾದ್ ನಿಷೇಧಿಸಿ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಒವೈಸ್ ವಿರುದ್ಧ ಯುವತಿಯ ತಂದೆ ಟೀಕಾರಾಂ ದೂರು ನೀಡಿದ್ದರು. ಇದು ನೂತನ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣವಾಗಿತ್ತು.
ಇದರ ಬೆನ್ನಲ್ಲೇ ಪರಾರಿಯಾಗಿದ್ದ ಒವೈಸ್ ಬೆನ್ನಟ್ಟಿದ್ದ ಪೊಲೀಸರು ಬರೇಲಿ ಜಿಲ್ಲೆಯ ಬಹೇದಿ ಎಂಬಲ್ಲಿ ಬಂಧಿಸಿದ್ದಾರೆ. ಇದು ಈ ಹೊಸ ಕಾಯ್ದೆಯಡಿಯ ಮೊದಲ ಬಂಧನವಾಗಿದೆ. ಈತನನ್ನು ಕೋರ್ಟ್ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ಬರೇಲಿ ಡಿಐಜಿ ರಾಕೇಶ್‌ಕುಮಾರ್ ಪಾಂಡೆ ಹೇಳಿದ್ದಾರೆ.
ಲವ್ ಜಿಹಾದ್ ನಿಷೇಧ ಬಳಿಕ ಅಂತರ್ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು! .
ದೇವರ್ಣಿಯಾ ಠಾಣಾ ವ್ಯಾಪ್ತಿಯ ಶರೀಫ್ ನಗರದ ಗ್ರಾಮಸ್ಥ ಒವೈಸ್, ಅದೇ ಗ್ರಾಮದ ತನ್ನ ಕ್ಲಾಸ್‌ಮೇಟ್ ಹಿಂದೂ ಯುವತಿಯನ್ನು ಮತಾಂತರಗೊಂಡು ಮದುವೆ ಆಗುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಒಪ್ಪದ ಯುವತಿ ಮನೆಯವರು ಕಳೆದ ಜೂನ್‌ನಲ್ಲಿ ಬೇರೊಬ್ಬನೊಂದಿಗೆ ಯುವತಿಯ ಮದುವೆ ಮಾಡಿಸಿದ್ದರು. ಆದರೂ ಒವೈಸ್ ತನ್ನ ಹಳೇ ಚಾಳಿ ಮುಂದುವರಿಸಿ, ವಿವಾಹವಾಗಿದ್ದ ಈ ಯುವತಿಯನ್ನು ತನ್ನನ್ನು ಮದುವೆ ಆಗುವಂತೆ ಹಾಗೂ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಒವೈಸ್ ವಿರುದ್ಧ ಆರೋಪ ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರು.ವರೆಗೂ ದಂಡ ಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ