ಗಂಡನೋರ್ವ ಹೆಂಡತಿಗೆ ತಿಳಿಯದೇ ಕದ್ದುಮುಚ್ಚಿ ಥೈಲ್ಯಾಂಡ್ ಟೂರ್ ಹೋಗಿದ್ದು ಬಳಿಕ, ತನ್ನ ಥೈಲ್ಯಾಂಡ್ ಪ್ರವಾಸದ ಬಗ್ಗೆ ಹೆಂಡ್ತಿಗೆ ತಿಳಿಯಬಾರದು ಎಂದು ಹೇಳಿ ಪಾಸ್‌ಪೋರ್ಟ್‌ನ ಪೇಜ್‌ಗಳನ್ನು ಹರಿದು ಅಲ್ಲಿ ಖಾಲಿ ಪೇಜ್‌ಗಳನ್ನು ಅಂಟಿಸಿದ್ದ ಘಟನೆ ನಡೆದಿದೆ.
ಮುಂಬೈ: ಗಂಡನೋರ್ವ ಹೆಂಡತಿಗೆ ತಿಳಿಯದೇ ಕದ್ದುಮುಚ್ಚಿ ಥೈಲ್ಯಾಂಡ್ ಟೂರ್ ಹೋಗಿದ್ದು ಬಳಿಕ, ತನ್ನ ಥೈಲ್ಯಾಂಡ್ ಪ್ರವಾಸದ ಬಗ್ಗೆ ಹೆಂಡ್ತಿಗೆ ತಿಳಿಯಬಾರದು ಎಂದು ಹೇಳಿ ಪಾಸ್‌ಪೋರ್ಟ್‌ನ ಪೇಜ್‌ಗಳನ್ನು ಹರಿದು ಅಲ್ಲಿ ಖಾಲಿ ಪೇಜ್‌ಗಳನ್ನು ಅಂಟಿಸಿದ್ದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಏರ್‌ಪೋರ್ಟ್ ಪೊಲೀಸರು ಆತನನ್ನು ಬಂಧಿಸಿದ್ದಾರೆ
ತನ್ನ ವಿದೇಶಿ ಪ್ರವಾಸಗಳ ದಾಖಲೆ ಇರುವ ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಹಾಕಿದ್ದ ಮಹಾರಾಷ್ಟ್ರದ ಉದ್ಯಮಿಯೋರ್ವನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಥೈಲ್ಯಾಂಡ್‌ಗೆ ಮತ್ತೆ ಫ್ಲೈಟ್ ಏರುವ ಮೊದಲು ಅಧಿಕಾರಿಗಳು ಬಂಧಿಸಿದ್ದಾರೆ. 33 ವರ್ಷದ ತುಷಾರ್ ಪವಾರ್ ಬಂಧಿತ ಆರೋಪಿ. ಈತ ಪಾಸ್‌ಪೋರ್ಟ್‌ನ 12 ಪೇಜ್‌ಗಳನ್ನು ಹರಿದು ಅಲ್ಲಿ ಖಾಲಿ ಪೇಜುಗಳನ್ನು ಅಂಟಿಸಿದ್ದ. ಆದರೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆಗೆ ಭದ್ರತಾ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದಾರೆ.
ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಲಸೆ ಅಧಿಕಾರಿ ಅಸ್ಥಾ ಮಿತ್ತಲ್ ಅವರು ತುಷಾರ್ ಪಾಸ್‌ಪೋರ್ಟ್‌ನಲ್ಲಿ ವಿಭಿನ್ನವಾಗಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ಆತ 12 ಪೇಜ್‌ಗಳನ್ನು ಹರಿದು ಆ ಜಾಗದಲ್ಲಿ ಹೊಸದಾದ ಪೇಜ್‌ಗಳನ್ನು ಅಂಟಿಸಿರುವುದು ಗಮನಕ್ಕೆ ಬಂದಿದೆ. ಈ ವೇಳೆ ವಿಚಾರಿಸಿದಾಗ ತನ್ನ ಥೈಲ್ಯಾಂಡ್ ಪ್ರವಾಸದ ಬಗ್ಗೆ ಹೆಂಡತಿಯ ಬಳಿ ವಿಚಾರ ಮುಚ್ಚಿಡುವುದಕ್ಕಾಗಿ ಈ ಕೃತ್ಯವೆಸಗಿರುವುದಾಗಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಏರ್ ಇಂಡಿಯಾದ ಎಐ-330 ವಿಮಾನದಲ್ಲಿ ತುಷಾರ್ ಮತ್ತೆ ಬ್ಯಾಕಾಂಕ್‌ಗೆ ಹೊರಟಿದ್ದ. ಈ ವೇಳೆ ಪಾಸ್ಪೋರ್ಟ್ ತಪಾಸಣೆ ವೇಳೆ ಭದ್ರತಾ ಅಧಿಕಾರಿಗಳು ಗಮನಿಸಿದಾಗ ಅಲ್ಲಿ ಎಡವಟ್ಟು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ತುಷಾರ್ 2023 ಹಾಗೂ 2024ರಲ್ಲಿಯೂ ಪತ್ನಿಗೆ ತಿಳಿಸದೇ ಸ್ನೇಹಿತರ ಜೊತೆ ಥೈಲ್ಯಾಂಡ್ ಟೂರ್ ಹೋಗಿದ್ದಾರೆ. ಆದರೆ ಇದು ಪತ್ನಿಗೆ ತಿಳಿದು ಹೋದರೆ ಎಲ್ಲಿ ಅನಾಹುತವಾಗುತ್ತದೋ ಎಂದು ಭಯಗೊಂಡ ಈತ ಈ ಪ್ರವಾಸದ ದಾಖಲೆಯನ್ನು ಮುಚ್ಚಿಡುವುದಕ್ಕಾಗಿ ಪಾಸ್‌ಪೋರ್ಟ್‌ನ ಪೇಜನ್ನೇ ಹರಿದು ಅಲ್ಲಿ ಹೊಸ ಪೇಜ್‌ಗಳನ್ನು ಅಂಟಿಸಿದ್ದಾನೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಘಟನೆ ಬಗ್ಗೆ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿ, ಸೆಕ್ಷನ್ 318(4)ರ ಅಡಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ತುಷಾರ್ ಪದವಿ ಓದಿದ್ದು, ತಮ್ಮ ಕುಟುಂಬದೊಂದಿಗೆ ಸತಾರಾದಲ್ಲಿ ವಾಸ ಮಾಡುತ್ತಿದ್ದು, ಲಾಜಿಸ್ಟಿಕ್ ಉದ್ಯಮ ನಡೆಸುತ್ತಿದ್ದರು. ತಮ್ಮ ಗ್ರಾಹಕರೊಬ್ಬರ ಜೊತೆಗೆ ಅಧಿಕೃತ ಟ್ರಿಪ್ ಹೊರಟಿದ್ದಾಗ ಅವರನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ.