
ಕೋಲ್ಕತ್ತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯ ಪುತ್ರಿ ಬೃಷ್ಟಿ ಮುಖರ್ಜಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. 28 ವರ್ಷದ ಬೃಷ್ಟಿ ಅವರು ರಾಂಪುರಹತ್ ಪ್ರದೇಶದ ಕುಸುಂಬಾ ಗ್ರಾಮದ ತಮ್ಮ ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೃಷ್ಟಿ ಮುಖರ್ಜಿ ಅವರು ಮಮತಾ ಬ್ಯಾನರ್ಜಿ ಅವರ ಸೋದರಸಂಬಂಧಿ ಹಾಗೂ ರಾಂಪುರಹತ್ ಟಿಎಂಸಿ ಬ್ಲಾಕ್ ಅಧ್ಯಕ್ಷರಾಗಿದ್ದ ನಿಹಾರ್ ಮುಖರ್ಜಿಯ ಪುತ್ರಿ. ಬೃಷ್ಟಿ ಸ್ಥಳೀಯ ಶಾಲೆ ಒಂದರಲ್ಲಿ ಗ್ರೂಪ್ ಸಿ ಉದ್ಯೋಗಿ ಆಗಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ನೇಮಕಾತಿಯನ್ನು ರದ್ದುಗೊಳಿಸಿದ ನಂತರ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದರು.
ಕುಟುಂಬ ಸದಸ್ಯರ ಪ್ರಕಾರ.. ಬೃಷ್ಟಿ ಕಳೆದ ಕೆಲವು ವರ್ಷಗಳಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಉದ್ಯೋಗ ನಷ್ಟದ ಜೊತೆಗೆ, ಅವರ ವೈವಾಹಿಕ ಜೀವನದಲ್ಲಿ ವಿಚ್ಛೇದನ ಪ್ರಕರಣ ಕೂಡ ನಡೆಯುತ್ತಿದ್ದು, ಇದರಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಂಪುರಹತ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮ*ತ್ಯೆ ಎಂದು ತೋರುತ್ತಿದೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಆಗಸ್ಟ್ 16 ರಂದು ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಆಶಿಶ್ ಬ್ಯಾನರ್ಜಿ ಅವರು ಬೀರ್ಭುಮ್‌ನ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಬರೆದಿದ್ದಾರೆ ಎನ್ನಲಾದ ನೋಟ್‌ನಲ್ಲಿ ಪಕ್ಷದೊಳಗಿನ ಭ್ರಷ್ಟಾಚಾರ ಮತ್ತು ತಪ್ಪುಗಳನ್ನು ವಿರೋಧಿಸಲು ಸಾಧ್ಯವಾಗದ ನೋವನ್ನು ಹಂಚಿಕೊಂಡಿದ್ದರು. ಈಗ ಮಮತಾ ಅವರ ಕುಟುಂಬದ ಸದಸ್ಯರೇ ಸಾವನ್ನಪ್ಪಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಬೃಷ್ಟಿ ಮುಖರ್ಜಿ ಅವರ ಸಾವು ಟಿಎಂಸಿ ವಲಯದಲ್ಲಿ ಮತ್ತು ಬ್ಯಾನರ್ಜಿ ಕುಟುಂಬದಲ್ಲಿ ಕಳವಳವನ್ನುಂಟು ಮಾಡಿದೆ. ಕೆಲಸ ಕಳೆದುಕೊಂಡ ಆತಂಕ ಮತ್ತು ವೈಯಕ್ತಿಕ ಸಮಸ್ಯೆಗಳು ಯುವತಿಯೊಬ್ಬಳನ್ನು ಬಲಿ ಪಡೆದಿರುವುದು ವಿಷಾದನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ