
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಹಿಮನದಿ ಪ್ರವಾಹದ ಹಿನ್ನೆಲೆಯಲ್ಲಿ, ಸಿಕ್ಕಿಂ ಸರ್ಕಾರವು ತನ್ನ ರಾಜ್ಯದಲ್ಲಿರುವ ಅಪಾಯಕಾರಿ ಹಿಮನದಿ ಸರೋವರಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನೀರ್ಗಲ್ಲು ಸ್ಪೋಟದ ಪ್ರವಾಹ (GLOF) ಅಪಾಯಗಳನ್ನು ನಿರ್ವಹಿಸುವಲ್ಲಿ ತನಗಿರುವ ಅನುಭವವನ್ನು ನೇಪಾಳದೊಂದಿಗೆ ಹಂಚಿಕೊಳ್ಳಲು ಸಿಕ್ಕಿಂ ಮುಂದಾಗಿದೆ ಎಂದು ರಾಜ್ಯ ಪರಿಹಾರ ಆಯುಕ್ತ ರಿನ್ಜಿಂಗ್ ಚೆವಾಂಗ್ ಸೋಮವಾರ ತಿಳಿಸಿದ್ದಾರೆ.
ಸಿಕ್ಕಿಂನಲ್ಲಿ ಚಿಕ್ಕದೂ ಸೇರಿದಂತೆ ಒಟ್ಟು 400 ಕ್ಕೂ ಹೆಚ್ಚು ಹಿಮನದಿ ಸರೋವರಗಳಿವೆ. ಇವುಗಳಲ್ಲಿ ಅತಿ ಹೆಚ್ಚು ಅಪಾಯವನ್ನು ತಂದೊಡ್ಡಬಹುದಾದ 16 ದುರ್ಬಲ ಸರೋವರಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 13 ಉತ್ತರ ಸಿಕ್ಕಿಂನಲ್ಲಿ ಮತ್ತು 3 ಪಶ್ಚಿಮ ಸಿಕ್ಕಿಂನಲ್ಲಿವೆ.
ಅಪಾಯಕಾರಿ ಸರೋವರಗಳ ಮೇಲ್ವಿಚಾರಣೆಗೆ ಸಿಕ್ಕಿಂ ನಿರಂತರ ಜಾಗರೂಕತೆಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನೀರಿನ ಪ್ರಮಾಣ ಮತ್ತು ಮಟ್ಟದಲ್ಲಾಗುವ ಏರಿಳಿತಗಳನ್ನು ಕ್ಷಣಕ್ಷಣಕ್ಕೂ ಪತ್ತೆಹಚ್ಚಲು ಸೂಕ್ಷ್ಮ ಸಂವೇದಕಗಳನ್ನು (Sensors) ಅಳವಡಿಸಲಾಗಿದೆ. ಅಪಾಯಕಾರಿ ಸರೋವರಗಳು ಹೆಚ್ಚಾಗಿರುವ ಉತ್ತರ ಸಿಕ್ಕಿಂನಲ್ಲಿ ಹವಾಮಾನ ಬದಲಾವಣೆಗಳನ್ನು ಗಮನಿಸಲು ಅತ್ಯಾಧುನಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಟ್ಟ ಹೆಚ್ಚಾದರೆ ತಕ್ಷಣವೇ ಕೆಳಭಾಗದ ಜನರಿಗೆ ಮಾಹಿತಿ ತಲುಪಿಸುವ ಮುನ್ಸೂಚನೆ ಜಾಲವನ್ನು ಬಲಪಡಿಸಲಾಗಿದೆ.
ನೇಪಾಳ-ಟಿಬೆಟ್ ಗಡಿಯಲ್ಲಿ ನೀರ್ಗಲ್ಲು ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹವು ಜಲವಿದ್ಯುತ್ ಯೋಜನೆಗಳ ಮೇಲೆಯೂ ಪರಿಣಾಮ ಬೀರಿದೆ. ಈ ದುರಂತವು 2023 ರ ಅಕ್ಟೋಬರ್‌ನಲ್ಲಿ ಸಿಕ್ಕಿಂನಲ್ಲಿ ನಡೆದ ‘ದಕ್ಷಿಣ ಲೋನಾಕ್’ GLOF ದುರಂತವನ್ನು ನೆನಪಿಸುತ್ತದೆ ಎಂದು ಆಯುಕ್ತ ಚೆವಾಂಗ್ ತಿಳಿಸಿದರು.
"ಅಂದು ದಕ್ಷಿಣ ಲೋನಾಕ್‌ನಲ್ಲಿ ಹಿಮನದಿಯ ದೊಡ್ಡ ಭಾಗವೊಂದು ಸರೋವರಕ್ಕೆ ಬಿದ್ದಾಗ ನೀರು ಹೊರಚೆಲ್ಲಿ ಕೆಳಭಾಗದಲ್ಲಿ ವಿನಾಶಕಾರಿ ಪ್ರವಾಹ ಉಂಟಾಗಿತ್ತು. ನೇಪಾಳದಲ್ಲೂ ಹಿಮನದಿ ಕುಸಿದು ನದಿಯನ್ನು ತಡೆದಿದ್ದರಿಂದಲೇ ಈ ಪ್ರವಾಹ ಸಂಭವಿಸಿದೆ. 2023 ರ ಆ ಭೀಕರ ಘಟನೆಯು ನಮಗೆ ಈ ಅಪಾಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನೆರವಾಯಿತು ಎಂದು ಅವರು ವಿವರಿಸಿದರು.
ವಿಪತ್ತಿಗೆ ಸಿಲುಕಿರುವ ನೇಪಾಳಕ್ಕೆ ಸಿಕ್ಕಿಂ ಸರ್ಕಾರ ಮಾನವೀಯ ನೆರವು ನೀಡಿದೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ಗೋಲೆ ಅವರು ಪರಿಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ತಂಡವಿದ್ದ ಸ್ವಯಂಸೇವಕರ ವಾಹನಗಳಿಗೆ ಹಸಿರು ನಿಶಾನೆ ತೋರಿದರು. 2023 ರಲ್ಲಿ ಸಿಕ್ಕಿಂಗೆ ವಿಪತ್ತು ಎದುರಾದಾಗ ಕೇಂದ್ರ ಸರ್ಕಾರ ಹಾಗೂ ನೇಪಾಳ ಸೇರಿದಂತೆ ಹಲವೆಡೆಯಿಂದ ಸಾಂತ್ವನ ಮತ್ತು ಬೆಂಬಲ ಸಿಕ್ಕಿದ್ದನ್ನು ಸ್ಮರಿಸಿದ ಸಿಕ್ಕಿಂ ಮುಖ್ಯಮಂತ್ರಿ, ಪ್ರಸ್ತುತ ಪರಿಸ್ಥಿತಿಯಲ್ಲಿ ನೇಪಾಳಕ್ಕೆ ಸಹಕಾರದ ಹಸ್ತ ಚಾಚುವುದು ತಮ್ಮ ಕರ್ತವ್ಯ ಎಂದಿದ್ದಾರೆ.
ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SSDMA) ಇಬ್ಬರು ಉಪ ನಿರ್ದೇಶಕರು ಸೇರಿದಂತೆ ಮೂವರು ಅನುಭವಿ ಅಧಿಕಾರಿಗಳನ್ನು ನೇಪಾಳಕ್ಕೆ ನಿಯೋಜಿಸಲಾಗಿದೆ.
ಈ ತಂಡವು ಸ್ಥಳೀಯ ಅಧಿಕಾರಿಗಳೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಲಿದೆ. ವಿಪತ್ತಿನ ಸ್ವರೂಪವನ್ನು ಅಧ್ಯಯನ ಮಾಡಿ ಪರಿಹಾರ ಕಾರ್ಯಗಳಿಗೆ ನೆರವಾಗಲಿದೆ. ಸಿಕ್ಕಿಂನಿಂದ ಇನ್ನು ಹೆಚ್ಚಿನ ನೆರವು ಹೇಗೆ ನೀಡಬಹುದು ಎಂಬುದನ್ನು ನಿರ್ಣಯಿಸಲಿದೆ.
ಸಿಕ್ಕಿಂ ಪ್ರಸ್ತುತ ಕೇಂದ್ರ ಸರ್ಕಾರಿ ಸಂಸ್ಥೆಗಳು ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ವೈಜ್ಞಾನಿಕ ವಿಪತ್ತು ಸನ್ನದ್ಧತಾ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಅಪಾಯಕಾರಿ ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ಹಾನಿಗೊಳಗಾದ ಸೇತುವೆ-ಮೂಲಸೌಕರ್ಯಗಳ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದೆ. 2023 ರ ಅನುಭವದ ಆಧಾರದ ಮೇಲೆ, ನೈಜ-ಸಮಯದ ಮೇಲ್ವಿಚಾರಣೆಯ ಮೂಲಕ ಸಿಕ್ಕಿಂ ಹಿಮಾಲಯನ್ ಪ್ರದೇಶದ ಜಲ-ಹವಾಮಾನ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಮಾದರಿಯಾಗಿ ಹೊರಹೊಮ್ಮುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ