President Droupadi Murmu : ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ನೀರಿಲ್ಲದ ಟಾಯ್ಲೆಟ್‌ ಕೊಟ್ಟ ಮಮತಾ? ವರದಿ ಕೇಳಿದ ಕೇಂದ್ರ

Kannadaprabha News, Ravi Janekal |   | Kannada Prabha
Published : Mar 09, 2026, 05:06 AM IST
Mamata Banerjee denies insult to President Droupadi Murmu PM Modi attacks TMC

ಸಾರಾಂಶ

ಪಶ್ಚಿಮ ಬಂಗಾಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದಾಗ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಇದು ಪ್ರಧಾನಿ ಮೋದಿ ಮತ್ತು ಮಮತಾ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. 

ನವದೆಹಲಿ (ಮಾ.9): ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತದ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪದ ಬೆನ್ನಲ್ಲೇ, ರಾಷ್ಟ್ರಪತಿಗಳಿಗೆ ನೀಡಿದ್ದ ಶೌಚಾಲಯದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಮಾಡಿರಲಿಲ್ಲ, ಜೊತೆಗೆ ಕಸ ತುಂಬಿದ ರಸ್ತೆಯಲ್ಲಿ ಅವರನ್ನು ಕರೆದೊಯ್ಯಲಾಗಿತ್ತು ಎಂಬ ಆಪಾದನೆಯೊಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಡೀ ಘಟನಾವಳಿಗಳ ಕುರಿತು ಕಾರಣ ಕೇಳಿ ಬಂಗಾಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ.

ಈ ನಡುವೆ ಮಮತಾ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ಮೋದಿ, ‘ದೇಶಾದ್ಯಂತ ಮಹಿಳಾ ದಿನ ಆಚರಿಸುತ್ತಿರುವಾಗ, ಬಂಗಾಳದ ಟಿಎಂಸಿ ಸರ್ಕಾರ ರಾಷ್ಟ್ರಪತಿಗಳನ್ನು ಅವಮಾನಿಸಿದ್ದು ಕಳವಳಕಾರಿ. ಒಬ್ಬ ಬುಡಕಟ್ಟು ಮಹಿಳೆಯನ್ನು, ರಾಷ್ಟ್ರಪತಿಗಳನ್ನು ಅವಮಾನಿಸಿದ್ದಕ್ಕಾಗಿ ರಾಜ್ಯದ ಪ್ರಬುದ್ಧ ಜನರು ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ಇದರ ನಡುವೆಯೇ ಕೇಂದ್ರದ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಸಿಎಂ, ‘2024ರ ಭಾರತ ರತ್ನ ಪ್ರಧಾನ ವೇಳೆ ರಾಷ್ಟ್ರಪತಿ ನಿಂತಿರುವಾಗ ಪ್ರಧಾನಿ ಮೋದಿ ಕುಳಿತೇ ಇದ್ದ ಫೋಟೋ ಟ್ವೀಟ್‌ ಮಾಡುವ ಮೂಲಕ ರಾಷ್ಟ್ರಪತಿಗೆ ಅವಮಾನ ಮಾಡುವುದು ಪ್ರಧಾನಿ ಮೋದಿಯೇ ಹೊರತೂ ತಾವಲ್ಲ ಎಂದಿದ್ದಾರೆ.

ನೋಟಿಸ್‌ ಜಾರಿ:

ಶನಿವಾರ ಅಂತಾರಾಷ್ಟ್ರೀಯ ಸೆಂತಾಲ್‌ ಸಮ್ಮೇಳನದಲ್ಲಿ ಭಾಗವಹಿಸಲು ಮುರ್ಮು, ಸಿಲಿಗುರಿಗೆ ಆಗಮಿಸಿದ್ದರು. ಈ ವೇಳೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಅಥವಾ ಸಚಿವರು ಬಂದಿರಲಿಲ್ಲ. ಮೇಯರ್‌ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಲಾಗಿತ್ತು. ಜೊತೆಗೆ ರಾಷ್ಟ್ರಪತಿ ಮುರ್ಮು ಅವರಿಗೆ ವ್ಯವಸ್ಥೆ ಮಾಡಲಾಗಿದ್ದ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಅವರನ್ನು ಕರೆದೊಯ್ಯಲು ಆಡಳಿತವು ಆಯ್ಕೆ ಮಾಡಿದ ಮಾರ್ಗವು ಸಹ ಕಸದಿಂದ ತುಂಬಿಹೋಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುರ್ಮು ಅವರ ಭೇಟಿ ಸಮಯದಲ್ಲಿ ಶಿಷ್ಟಾಚಾರ, ಸ್ಥಳ ಮತ್ತು ಸಂಚಾರ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಬಂಗಾಳ ಸರ್ಕಾರಕ್ಕೆ ನೋಟಿಸ್‌ನಲ್ಲಿ ಸೂಚಿಸಿದೆ.

ದೀದಿ ತಿರುಗೇಟು:

‘ನಾವು ರಾಷ್ಟ್ರಪತಿ ಸ್ಥಾನ ಮತ್ತು ಸಂವಿಧಾನಕ್ಕೆ ಸಂಪೂರ್ಣ ಗೌರವ ನೀಡುತ್ತೇವೆ. ಅವರನ್ನು ನಮ್ಮ ತಾಯಿಯೆಂದು ಭಾವಿಸುತ್ತೇವೆ. ವಿಧಾನಸಭಾ ಚುನಾವಣೆಗೂ ಮುನ್ನ ನಮ್ಮನ್ನು ಗುರಿಯಾಗಿಸಲಾಗಿದೆ. ರಾಷ್ಟ್ರಪತಿಗಳು ನಿಂತಿರುವಾಗ ಪ್ರಧಾನಿ ಮೋದಿ ಕುಳಿತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು. ರಾಷ್ಟ್ರಪತಿಗಳನ್ನು ಅವಮಾನಿಸುವ ಸಂಸ್ಕೃತಿ ಬಿಜೆಪಿಯದ್ದೇ ಹೊರತು, ನಮ್ಮದಲ್ಲ’ ಎಂದಿದ್ದಾರೆ. ಇದಕ್ಕೆ ಪೂರಕವಾಗಿ 2024ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕುಳಿತಿರುವ ಹಾಗೂ ರಾಷ್ಟ್ರಪತಿಗಳು ನಿಂತಿರುವ ಫೋಟೊವೊಂದನ್ನು ಅವರು ಪ್ರದರ್ಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India's first Ring Metro: ದೇಶದ ಮೊತ್ತಮೊದಲ ರಿಂಗ್‌ ಮೆಟ್ರೋಗೆ ಮೋದಿ ಚಾಲನೆ
ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿಟಿ ನೀಡಿದ ಸುಳಿವು