
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾಜಿ ಸಹಾಯಕರಾಗಿದ್ದ (ಎಡಿಸಿ) ಹಾಗೂ 4 ಪ್ಯಾರಾ ವಿಶೇಷ ಪಡೆಗಳ (Para SF) ಅಧಿಕಾರಿಯಾಗಿದ್ದ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ 12 ವರ್ಷಗಳ ಸೇವೆಯ ನಂತರ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸೇವೆಯಿಂದ ಔಪಚಾರಿಕವಾಗಿ ಬಿಡುಗಡೆ ಪಡೆದ ನಂತರ, ಅವರು ಆಗಸ್ಟ್ 21, 2026 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಜಮ್ಮುವಿನ ಡೋಗ್ರಾ ರಜಪೂತ ಮಿಲಿಟರಿ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮೇಜರ್ ಸಂಬ್ಯಾಲ್, ಎನ್‌ಡಿಎ ಮತ್ತು ಐಎಂಎ ತರಬೇತಿ ಸೇರಿದಂತೆ ಒಟ್ಟು 12 ವರ್ಷಗಳ ಕಾಲ ಸಶಸ್ತ್ರ ಪಡೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. 2021ರ ಗಣರಾಜ್ಯೋತ್ಸವ ವೇಳೆ ಕ್ಯಾಪ್ಟನ್ ಆಗಿದ್ದಾಗ ಜಾಟ್ ರೆಜಿಮೆಂಟ್ ತುಕಡಿಯನ್ನು ಮುನ್ನಡೆಸಿ 'ಅತ್ಯುತ್ತಮ ಮಾರ್ಚಿಂಗ್ ತುಕಡಿ' ಪ್ರಶಸ್ತಿ ಪಡೆದುಕೊಂಡಿತ್ತು. ತದನಂತರ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 4 ಪ್ಯಾರಾ ವಿಶೇಷ ಪಡೆಗಳ ("ಡ್ಯಾಗರ್ಸ್") ಕಮಾಂಡೋ ಆಗಿ ಅರ್ಹತೆ ಪಡೆದರು. ಅತ್ಯಂತ ಅಪರೂಪದ ಹಾಗೂ ಕಠಿಣ ಮಿಲಿಟರಿ ಸಾಧನೆಯಾದ ಪ್ರತಿಷ್ಠಿತ 'ಬಲಿದಾನ್ ಬ್ಯಾಡ್ಜ್' ಗಳಿಸಿ ಗಮನ ಸೆಳೆದರು.
2024–2025ರ ಅವಧಿಯಲ್ಲಿ ರಾಷ್ಟ್ರಪತಿಗಳ ಎಡಿಸಿ (Aide-de-Camp) ಆಗಿ ನೇಮಕಗೊಂಡ ನಂತರ ಮೇಜರ್ ಸಂಬ್ಯಾಲ್ ದೇಶಾದ್ಯಂತ ಅಪಾರ ಪ್ರಸಿದ್ದಿ ಪಡೆದರು. ಮಳೆಯಲ್ಲಿ ರಾಷ್ಟ್ರಪತಿಗಳ ಮೇಲೆ ಛತ್ರಿ ಹಿಡಿದು ನಿಂತ ಕ್ಷಣ, ಭಾವನಾತ್ಮಕ ಸಂದರ್ಭದಲ್ಲಿ ಕರವಸ್ತ್ರ ನೀಡಿದ್ದು ಮತ್ತು ದೇವಾಲಯದ ಮೆಟ್ಟಿಲುಗಳನ್ನು ಹತ್ತುವಾಗ ನೆರವಾದ ವಿಡಿಯೋಗಳು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅವರ ಕಟ್ಟುನಿಟ್ಟಾದ ಮಿಲಿಟರಿ ಶಿಸ್ತು ಮತ್ತು ಜಾಗರೂಕ ನಡವಳಿಕೆಯು ಸಾಮಾಜಿಕ ಜಾಲತಾಣ ಬಳಕೆದಾರರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ನಿವೃತ್ತಿಯ ನಂತರ ನಡೆಸಿದ ಸಾರ್ವಜನಿಕ ಸಂವಾದದಲ್ಲಿ, ಸೇನೆ ತೊರೆಯುವ ನಿರ್ಧಾರವು ಸಂಪೂರ್ಣವಾಗಿ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಕೈಗೊಂಡದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಮವಸ್ತ್ರ ಧರಿಸುವುದು ತಮ್ಮ ಬಾಲ್ಯದ ಕನಸಾಗಿತ್ತು ಮತ್ತು ಸೇವಾವಧಿಯಲ್ಲಿ ಸಾಧಿಸಿದ ಸಫಲತೆ ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಮದುವೆ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಭವಿಷ್ಯದಲ್ಲಿ ಬೇರೆ ರೀತಿಯಲ್ಲಿ ದೇಶಸೇವೆಗೆ ಕೊಡುಗೆ ನೀಡುವುದಾಗಿ ಹೇಳಿದ್ದಾರೆ. 12 ವರ್ಷಗಳ ಸುದೀರ್ಘ ಸೇನಾ ಜೀವನ ತಮಗೆ ಕಲಿಸಿದ ಅಂತಿಮ ಪಾಠ ಯಾವತ್ತೂ ಭರವಸೆ ಕಳೆದುಕೊಳ್ಳಬೇಡಿ (Don't give up) ಎಂಬುದಾಗಿದೆ ಎಂದು ಬಣ್ಣಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ