ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಹುದ್ದೆಗೆ ಶಶಿಧರ್ ಜಗದೀಶನ್ ಗುಡ್‌ಬೈ: ಆಡಳಿತ ಮಂಡಳಿ ಮನವೊಲಿಸಿದರೂ ಬದಲದ ನಿರ್ಧಾರ!

Published : Aug 30, 2026, 01:50 PM IST
Sashidhar Jagdishan - HDFC

ಸಾರಾಂಶ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶಶಿಧರ್ ಜಗದೀಶನ್ ಅವರು ತಮ್ಮ ಅಧಿಕಾರಾವಧಿ ಮುಗಿದ ನಂತರ ಮರುನೇಮಕಾತಿ ಪಡೆಯದಿರಲು ನಿರ್ಧರಿಸಿದ್ದಾರೆ. ಅವರ ಮನವೊಲಿಸುವ ಆಡಳಿತ ಮಂಡಳಿಯ ಪ್ರಯತ್ನಗಳು ವಿಫಲವಾಗಿದ್ದು, ಅವರ ನಾಯಕತ್ವ ಮತ್ತು ಐತಿಹಾಸಿಕ ವಿಲೀನದಲ್ಲಿನ ಪಾತ್ರವನ್ನು ಮಂಡಳಿ ಶ್ಲಾಘಿಸಿದೆ. ಈ ನಿರ್ಧಾರವು ಭಾರತೀಯ ಖಾಸಗಿ ಬ್ಯಾಂಕಿಂಗ್ ವಲಯದಲ್ಲಿನ ನಾಯಕತ್ವ ಬದಲಾವಣೆಗಳ ಸರಣಿಯ ಭಾಗವಾಗಿದೆ.

ದೇಶದ ಅತಿದೊಡ್ಡ ಖಾಸಗಿ ರಂಗದ ಸಾಲದಾತ ಸಂಸ್ಥೆಯಾದ ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶಶಿಧರ್ ಜಗದೀಶನ್ ಅವರು ಈ ವರ್ಷದ ಅಕ್ಟೋಬರ್ 26ಕ್ಕೆ ತಮ್ಮ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಮರುನೇಮಕಾತಿ ಪಡೆಯದಿರಲು ನಿರ್ಧರಿಸಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿಯು ಅವರ ಮನವೊಲಿಸಲು ಹಲವು ಪ್ರಯತ್ನಗಳನ್ನು ನಡೆಸಿದರೂ, ಜಗದೀಶನ್ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ ಎಂದು ಬ್ಯಾಂಕ್ ಷೇರು ಮಾರುಕಟ್ಟೆಗೆ ಸಲ್ಲಿಸಿದ ಅಧಿಕೃತ ವರದಿಯಲ್ಲಿ ಸ್ಪಷ್ಟಪಡಿಸಿದೆ. ಅವರ ನಾಯಕತ್ವ, ಸಂಸ್ಥೆಯ ಸುಸ್ಥಿರ ಬೆಳವಣಿಗೆ ಹಾಗೂ ದೇಶದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ವಿಲೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೊಡುಗೆಯನ್ನು ಮಂಡಳಿಯು ಆಳವಾಗಿ ಶ್ಲಾಘಿಸಿದೆ.

ಶಶಿಧರ್ ಜಗದೀಶನ್ ಅವರ ಸುದೀರ್ಘ ವೃತ್ತಿ ಪಯಣ

61 ವರ್ಷದ ಶಶಿಧರ್ ಜಗದೀಶನ್ ಅವರು ಮೂರು ದಶಕಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ 1996: ಹಣಕಾಸು ವಿಭಾಗದ ವ್ಯವಸ್ಥಾಪಕರಾಗಿ ಬ್ಯಾಂಕ್ ಸೇರ್ಪಡೆಗೊಂಡು ಬಳಿಕ 1999ರಲ್ಲಿ ಹಣಕಾಸು ವಿಭಾಗದ ಮುಖ್ಯಸ್ಥರಾಗಿ ಬಡ್ತಿ, 2008ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ನೇಮಕ. 2020ರಲ್ಲಿ ಎಂಡಿ ಹಾಗೂ ಸಿಇಒ ಆಗಿ ಅತ್ಯುನ್ನತ ಹುದ್ದೆಯ ಜವಾಬ್ದಾರಿ ವಹಿಸಿಕೊಂಡರು.

ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರಣಿ ನಾಯಕತ್ವ ಬದಲಾವಣೆ

ಜಗದೀಶನ್ ಅವರ ನಿರ್ಗಮನದ ನಿರ್ಧಾರವು ಭಾರತೀಯ ಖಾಸಗಿ ಬ್ಯಾಂಕಿಂಗ್ ರಂಗದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಸರಣಿಯನ್ನು ಪ್ರತಿಬಿಂಬಿಸುತ್ತದೆ. ಕೋಟಕ್ ಮಹೀಂದ್ರಾ ಬ್ಯಾಂಕ್: ಸಿಇಒ ಅಶೋಕ್ ವಾಸ್ವಾನಿ ತಮ್ಮ ಪ್ರಸ್ತುತ ಅವಧಿಯ ಕೊನೆಯಲ್ಲಿ (ಡಿಸೆಂಬರ್ 31, 2026) ಕೆಳಗಿಳಿಯುವುದಾಗಿ ಜೂನ್‌ನಲ್ಲಿ ತಿಳಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ಯೆಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಂಧನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಸಿಟಿ ಯೂನಿಯನ್ ಬ್ಯಾಂಕುಗಳಲ್ಲೂ ಉನ್ನತ ನಾಯಕತ್ವದ ಮಟ್ಟದಲ್ಲಿ ಬದಲಾವಣೆಗಳಾಗಿವೆ.

ಇತ್ತೀಚಿನ ಬಿಕ್ಕಟ್ಟುಗಳು ಮತ್ತು ಆಂತರಿಕ ತನಿಖೆಗಳು

ಜಗದೀಶನ್ ಅವರ ಮರುನೇಮಕಾತಿ ವಿಷಯದ ವಿಳಂಬಕ್ಕೆ ಬ್ಯಾಂಕಿನಲ್ಲಿ ಸಂಭವಿಸಿದ ಕೆಲವು ಇತ್ತೀಚಿನ ಬೆಳವಣಿಗೆಗಳೂ ಕಾರಣವಾಗಿದ್ದವು. ಐದು ತಿಂಗಳ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕಿನ ಆಗಿನ ಅಧ್ಯಕ್ಷ ಅತನು ಚಕ್ರವರ್ತಿ ಮಾರ್ಚ್ 17 ರಂದು ಪತ್ರ ಬರೆದು, "ಬ್ಯಾಂಕಿನ ಕೆಲವು ಘಟನೆಗಳು ಹಾಗೂ ಅಭ್ಯಾಸಗಳು" ತಮ್ಮ ವೈಯಕ್ತಿಕ ಮೌಲ್ಯಗಳಿಗೆ ಹೊಂದುವುದಿಲ್ಲ ಎಂದು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.

ಚಕ್ರವರ್ತಿಯವರ ಆರೋಪಗಳಿಗೆ ಸ್ಪಷ್ಟನೆ ಸಿಗದಿದ್ದರೂ, ಎರಡು ಬಾಹ್ಯ ಕಾನೂನು ಸಂಸ್ಥೆಗಳಿಂದ ತನಿಖೆ ನಡೆಸಲಾಗಿ ಅಂತಿಮವಾಗಿ ಬ್ಯಾಂಕಿಗೆ ಕ್ಲೀನ್ ಚಿಟ್ ನೀಡಲಾಯಿತು. ಮೇ ತಿಂಗಳಲ್ಲಿ, ಠೇವಣಿಗಳನ್ನು ಆಕರ್ಷಿಸಲು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ (MSRDC) ₹45 ಕೋಟಿಯನ್ನು ಮಾರ್ಕೆಟಿಂಗ್ ವೆಚ್ಚವಾಗಿ ಪಾವತಿಸಲಾಗಿದೆ ಎಂಬ ವರದಿ ಕೇಳಿಬಂದಿತ್ತು. ಆದರೆ ಬ್ಯಾಂಕ್ ಈ ತಪ್ಪು ಕೃತ್ಯದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿತ್ತು.

ನೂತನ ಸಿಇಒ ಆಯ್ಕೆ ಪ್ರಕ್ರಿಯೆ ಮತ್ತು ಆರ್‌ಬಿಐ ನಿಯಮ

ಬ್ಯಾಂಕಿನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಕೈಜಾದ್ ಎಂ. ಭರುಚಾ ತಿಳಿಸಿರುವಂತೆ, ಬ್ಯಾಂಕಿನ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯು (NRC) ನೂತನ ಸಿಇಒ ಶೋಧನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದು, ಪ್ರಕ್ರಿಯೆ ಚುರುಕುಗೊಂಡಿದೆ. ನಿಯಮಾವಳಿಗಳ ಪ್ರಕಾರ, ಹಾಲಿ ಸಿಇಒ ಮುಂದುವರಿಯದಿದ್ದಲ್ಲಿ, ಮಂಡಳಿಯು ಹೊಸ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸಲ್ಲಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ಎಲ್‌ಪಿಜಿ ಸಂಪರ್ಕ ಯಾವಾಗ ಸಿಗುತ್ತೆ? ಕೇಂದ್ರ ಸರ್ಕಾರ ಏಕೆ ನಿಷೇಧ ಮಾಡಿದೆ?
ಇನ್ಫ್ಲುಯೆನ್ಸರ್ ಮಂಜೀತ್ ಕೌರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ 7 ವಾರಗಳ ಗರ್ಭಿಣಿ ಎಂಬ ವಿಚಾರ ಬಯಲು