
ನವದೆಹಲಿ (ಡಿ.16) ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ- VB G RAM G) ಮಸೂದೆ ಮಂಡಿಸಲಾಗಿದೆ. ಇದು ಯುಪಿಎ ಸರ್ಕಾರದ ಅವಧಿಯಲ್ಲಿ ತಂದ ಮನರೆಗಾ ( MGNREGA) ಯೋಜನೆಗೆ ಮರುನಾಮಕರಣ ಮಾಡಿ ಮಸೂದೆ ಮಂಡಿಸಲಾಗಿದೆ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಮರುನಾಮಕರಣ ಮೂಲಕ ಬಿಜೆಪಿ ಮಹಾತ್ಮಾ ಗಾಂಧಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದೆ. ಇದೇ ವೇಳೆ ಸಂಸತ್ತಿನ ಒಳಗೆ ಹಾಗೂ ಹೊರಗೆ ಭಾರಿ ವಿರೋಧ ವ್ಯಕ್ತಪಡಿಸಿರುವ ಪ್ರಿಯಾಂಕಾ ವಾದ್ರಾ ಗಾಂಧಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಜಿ ರಾಮ್ ಜಿ ಮಸೂದೆ ವಿರೋಧಿಸಿ ಪ್ರಿಯಾಂಕಾ ವಾದ್ರಾ , ಮಹಾತ್ಮಾ ಗಾಂಧಿ ನನ್ನ ಕುಟುಂಬ ಸದಸ್ಯರಲ್ಲ, ಆದರೆ ನಮ್ಮ ಕುಟುಂಬ ಸದಸ್ಯರಂತೆ ಇದ್ದಾರೆ. ಈ ದೇಶದ ಜನತೆಯೂ ಅದೇ ಭಾವನೆಯಲ್ಲಿ ಮಹಾತ್ಮಾ ಗಾಂಧಿಯನ್ನು ನೋಡುತ್ತಾರೆ. ಪ್ರತಿಯೊಬ್ಬರ ಕುಟುಂಬ ಸದಸ್ಯರಾಗಿ ಮಹಾತ್ಮಾ ಗಾಂಧಿಯನ್ನು ಕಾಣುತ್ತಾರೆ. ಆದರೆ ಬಿಜೆಪಿ ಗಾಂಧಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ತಂದ ಮನರೆಗಾ (ಮಹಾತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ) ಹೆಸರು ಬದಲಿಸಿದ್ದಾರೆ. ಇದು ಮಹಾತ್ಮಾ ಗಾಂಧಿಗೆ ಮಾಡಿದೆ ಅವಮಾನ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಬಿ-ಜಿ RAM ಜಿ ಮಸೂದೆ ಮಂಡಿಸಿದ್ದಾರೆ. ಸದನದ ಸಲಹೆಯನ್ನು ತೆಗೆದುಕೊಳ್ಳದೆ ಮತ್ತು ಯಾವುದೇ ಚರ್ಚೆಯಿಲ್ಲದೆ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಬಾರದು ಎಂದು ಪ್ರಿಯಾಂಕಾ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಸರ್ಕಾರ ಹೊಸ ಮಸೂದೆಯನ್ನು ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಸೂದೆಯನ್ನು ಹೆಚ್ಚಿನ ಚರ್ಚೆಗಾಗಿ ಜಂಟಿ ಸ್ಥಾಯಿ ಸಮಿತಿಗೆ ಕಳುಹಿಸಬೇಕು. ಪೂರ್ವಾಗ್ರಹದಿಂದಾಗಿ ಯಾವುದೇ ಮಸೂದೆಯನ್ನು ಮಂಡಿಸಿ ಅಂಗೀಕರಿಸಬಾರದು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಮನ್‌ರೆಗಾ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ಕಲ್ಪಿಸಿದ ಯೋಜನೆ. ಈ ಯೋಜನೆಯಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಕಳೆದ 20 ವರ್ಷದಿಂದ ಮನ್‌ರೆಗಾ ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲ ಪ್ರಮುಖ ಪಾತ್ರನಿರ್ವಸಿದೆ. ಬಡವರಿಗೆ ವರ್ಷದಲ್ಲಿ 100 ದಿನ ಕೆಲಸ ನೀಡುವ ಗ್ಯಾರೆಂಟಿ ಯೋಜನೆ ಇದಾಗಿದೆ. ಕೆಲ ತಿದ್ದುಪಡಿ ಮಾಡಿ ಬಿಜೆಪಿ ಸರ್ಕಾರ ಈ ಬಿಲ್ ಮಂಡಿಸಿದೆ. ಈ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆದಿದ್ದು ಮಾತ್ರವಲ್ಲ, ಮಹಾತ್ಮಾ ಗಾಂಧಿಗೆ ಅವಮಾನ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಯೋಜನೆಯಡಿ ನೀಡುವ ಅನುದಾನವನ್ನು ಶೇಕಡಾ 60ರಷ್ಟು ಕಡಿತ ಮಾಡಿದೆ. ಈಗಾಗಲೇ ರಾಜ್ಯಗಳು ಜಿಎಸ್‌ಟಿ ಹಂಚಿಕೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಇದರ ಮೇಲೆ ಕೇಂದ್ರ ಸರ್ಕಾರ ಮನರೆಗಾ ಯೋಜನೆಗೆ ತಿದ್ದುಪಡಿ ತಂದು ಕೆಲಸಕ್ಕೂ, ಆದಾಯಕ್ಕೂ ಕತ್ತರಿ ಹಾಕುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಜಾರಿಗೊಳಿಸಿದ ಹಲವು ಯೋಜನೆಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಇದೇ ರೀತಿ ಮಾಡಿದೆ. ಹೆಸರು ಬದಲಾವಣೆ, ಕೆಲ ತಿದ್ದುಪಡಿ ಮಾಡಿ ಮತ್ತೆ ಮಂಡಿಸುತ್ತಿದೆ. ಇದರಿಂದ ಯೋಜನೆಯ ಮೂಲ ಆಶೋತ್ತರಗಳಿಗೆ ಧಕ್ಕೆಯಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್‌ಗೆ ಈ ಮಸೂದೆ, ತಿದ್ದುಪಡಿಯಲ್ಲಿ ಸಮಸ್ಯೆ ಇಲ್ಲ. ಅಸಲಿ ಸಮಸ್ಯೆ ಇರುವುದು ಈ ಬಿಲ್ ಹೆಸರಿನ ಶಾರ್ಟ್ ಫಾರ್ಮ್‌ನಲ್ಲಿ. ಈ ಬಿಲ್ ಹೆಸರಿನಲ್ಲಿ ರಾಮ್ ಎಂದಿದೆ. ಇದೇ ಅವರಿಗೆ ಸಮಸ್ಯೆಯಾಗಿದೆ. ಕಾಂಗ್ರೆಸ್‌ಗೆ ಯಾವತ್ತೂ ಭಗವಾನ್ ರಾಮ ಹಾಗೂ ರಾಮನ ಹೆಸರು ಸಹಿಸಲು ಸಾಧ್ಯವಿಲ್ಲ ಎಂದು ನಖ್ವಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ