
ಬೆಂಗಳೂರು (ಡಿ.16): ಕಳೆದ ನವೆಂಬರ್ 6 ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್) ರೈಲ್ವೇ ನಿಲ್ದಾಣದ ಫ್ಲಾಟ್‌ಫಾರಂ ಒಂದು ಭೀಕರ ಕಥೆಯ ಸಾಕ್ಷಿಯಾಯಿತು. ವಿಶೇಷ ರೈಡ್ ಕಾರ್ಯಾಚರಣೆಯಲ್ಲಿದ್ದ ರೈಲ್ವೇ ಭದ್ರತಾ ಪಡೆಯ (RPF) ಪೊಲೀಸರ ಕಣ್ಣಿಗೆ ಅನಾಥಳಂತೆ ಕಂಡ ಅಪ್ರಾಪ್ತ ಬಾಲಕಿಯೊಬ್ಬಳ ರಕ್ಷಣೆಯ ಮೂಲಕ, ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆ ಜಾಲವೊಂದು ಬೆಳಕಿಗೆ ಬಂದಿದೆ.
ಪೊಲೀಸರೊಂದಿಗೆ ಮಾತನಾಡಿದ ಬಾಲಕಿಯ ಪ್ರತಿಯೊಂದು ಮಾತು ಕರುಳು ಹಿಂಡುವಂತಿತ್ತು. ದೆಹಲಿಯ ಚಿಕ್ಕ ಪ್ರದೇಶವೊಂದರಲ್ಲಿ ತನ್ನನ್ನು ಒಂದು ವರ್ಷ ಕಾಲ ಕೂಡಿಹಾಕಿ, ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು ಎಂದು ಆಕೆ ಹೇಳಿದ್ದಾಳೆ. ಅಲ್ಲಿನ ಬ್ರೋಕರ್ ಮುಸ್ಕಾನ್ ಎಂಬಾಕೆ ಬಿಸಿ ನೀರು ಎರಚಿ ಕ್ರೂರವಾಗಿ ಹಿಂಸೆ ನೀಡುತ್ತಿದ್ದ ವಿಷಯವನ್ನು ಹೇಳುವಾಗ ಆಕೆಯ ಕಣ್ಣಾಲಿಗಳು ತುಂಬಿ ಬಂದಿದ್ದವು.
ದೆಹಲಿಯ ನರಕದ ನಂತರ, ಬಾಲಕಿಯನ್ನು ಬೆಂಗಳೂರಿನ ಪ್ರಮುಖ ಸ್ಫಾ (Spa) ಕೇಂದ್ರವೊಂದಕ್ಕೆ ಕರೆತರಲಾಗಿತ್ತು. ಇಲ್ಲೂ ಕೂಡ ಒಂದು ವರ್ಷಗಳ ಕಾಲ ಒಂದು ಚಿಕ್ಕ ರೂಮಿನಲ್ಲಿ ಕೂಡಿಹಾಕಿ, ವೇಶ್ಯಾವಾಟಿಕೆ ದಂಧೆ ಮುಂದುವರೆಸಿದ್ದರು. ಕಳೆದೊಂದು ವರ್ಷದಿಂದ ದೇಶ ವಿದೇಶದ ಹಲವರು ತನ್ನನ್ನು ಹುರಿದು ಮುಕ್ಕಿದ್ದಾಗಿ ಬಾಲಕಿ ಹೇಳುತ್ತಾ ಕಣ್ಣೀರಿಟ್ಟಿದ್ದಾಳೆ. ಇನ್ನು ಬೆಂಗಳೂರಿನ ಸ್ಪಾದಲ್ಲಿರುವಾಗ ಇತ್ತೀಚೆಗೆ ಪೊಲೀಸರು ಆ ಸ್ಫಾ ಮೇಲೆ ದಾಳಿ ನಡೆಸುವ ಸುಳಿವು ಬ್ರೋಕರ್‌ಗಳಿಗೆ ದೊರೆತಿದೆ.
ಈ ವೇಳೆ ಬ್ರೋಕರ್‌ಗಳಾದ ಅಯಾನ್ ಮತ್ತು ನೇಹಾ ಬಾಲಕಿಯನ್ನು ಬೇರೆಡೆ ಸಾಗಿಸುವುದಕ್ಕಾಗಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಕರೆತಂದು, ಪೊಲೀಸರನ್ನು ಕಂಡೊಡನೆ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ರೈಲಿನಲ್ಲಿ ಕರೆದುಕೊಂಡು ಹೋಗಿ ಆಕೆಯನ್ನು ಬೇರೆಡೆಗೆ ಮಾರಾಟ ಮಾಡಲು ಹುನ್ನಾರ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಾಲಕಿಯ ಹೇಳಿಕೆ ಆಧಾರದ ಮೇಲೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ರಾಹಿಂ ಮತ್ತು ಸ್ನೇಹಾ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಈ ಜಾಲದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಬಲೆಯರ ಕಷ್ಟವನ್ನು ಬಂಡವಾಳ ಮಾಡಿಕೊಂಡ ಈ ಕೃತ್ಯವನ್ನು ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ