ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಒಂದು ಕಡೆ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ, ‘ಶೀಘ್ರವೇ ಸರ್ಕಾರ ರಚನೆ ಆಗುವ ಅಗತ್ಯವಿದೆ. ಸರ್ಕಾರ ರಚನೆ ಆಗುವ ವಿಶ್ವಾಸವಿದೆ’ ಎಂದು ಹೇಳಿದರು. ಸುದ್ದಿವಾಹಿನಿಯೊಂದರ ವರದಿಗಳ ಪ್ರಕಾರ ನ.8ರೊಳಗೆ ಫಡ್ನವೀಸ್ ಪ್ರಮಾಣವಚನ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮುಂಬೈ (ನ. 05): ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆ ಆಗಿ 11 ದಿನಗಳಾದರೂ ಸರ್ಕಾರ ರಚನೆ ಹಗ್ಗಜಗ್ಗಾಟ ನಡೆಯುತ್ತಿರುವ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೂಡಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಸರ್ಕಾರ ರಚಿಸುವ ಸಾಧ್ಯತೆ ಕ್ಷೀಣಿಸಿದೆ. ಈ ಕುರಿತ ಪ್ರಸ್ತಾಪ ಹೊತ್ತು ತಂದಿದ್ದ ಎನ್‌ಸಿಪಿ ಪರಮೋಚ್ಚ ನಾಯಕ ಶರದ್ ಪವಾರ್ ಅವರಿಗೆ ಶಿವಸೇನೆ ಜತೆ ಕೈಜೋಡಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಪವಾರ್, ಜನರ ಭಾವನೆ ಬಿಜೆಪಿ ವಿರುದ್ಧವಾಗಿದೆ. ನಮ್ಮ ಬಳಿ ಸಂಖ್ಯೆ ಇಲ್ಲ. ಬಿಜೆಪಿ ಹಾಗೂ ಅವರ ಬೆಂಬಲಿಗರ ಬಳಿ ನಂಬರ್ ಇದೆ. ಸರ್ಕಾರ ರಚನೆ ಹೊಣೆ ಅವರ ಮೇಲೆಯೇ ಇದೆ. ನಾವು ನೋಡುತ್ತಿದ್ದೇವೆ. ಶಿವಸೇನೆಯು ಈಗ ಸರ್ಕಾರ ರಚನೆಗೆ ನಮ್ಮನ್ನು ಸಂಪರ್ಕಿಸಿಲ್ಲ.
ಯಾರಿಗೂ ಖಾಸಗಿತನ ಉಳಿದಿಲ್ಲ: ಸುಪ್ರೀಂ ಗರಂ
ನಮಗೆ ಜನಾದೇಶ ಇಲ್ಲದ ಕಾರಣ ಪ್ರತಿಪಕ್ಷದಲ್ಲೇ ಕೂಡಲಿದ್ದೇವೆ. ಆದರೆ ಭವಿಷ್ಯದ ಬಗ್ಗೆ ಏನೂ ಹೇಳಲಾಗದು. ಮತ್ತೊಮ್ಮೆ ಸೋನಿಯಾ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ತನ್ಮೂಲಕ ಮತ್ತೊಂದು ಬಾರಿ ಪ್ರಯತ್ನ ನಡೆಸುವ ಸುಳಿವು ನೀಡಿದ್ದಾರೆ. ಮತ್ತೊಂದೆಡೆ, ತಮಗೆ ಮುಖ್ಯಮಂತ್ರಿ ಆಗುವ ಉದ್ದೇಶ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಹುಮತಕ್ಕೆ 145 ಸ್ಥಾನ ಬೇಕು. ಶಿವಸೇನೆ (56), ಎನ್‌ಸಿಪಿ (54) ಹಾಗೂ ಕಾಂಗ್ರೆಸ್ (44) ಒಗ್ಗೂಡಿದರೆ ಬಹುಮತ ಲಭಿಸಲಿದೆ.
ಅಮಿತ್ ಶಾ ಜತೆ ಫಡ್ನವೀಸ್ ಚರ್ಚೆ: ನ.8ರೊಳಗೆ ಶಪಥ?
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಒಂದು ಕಡೆ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ, ‘ಶೀಘ್ರವೇ ಸರ್ಕಾರ ರಚನೆ ಆಗುವ ಅಗತ್ಯವಿದೆ. ಸರ್ಕಾರ ರಚನೆ ಆಗುವ ವಿಶ್ವಾಸವಿದೆ’ ಎಂದು ಹೇಳಿದರು. ಸುದ್ದಿವಾಹಿನಿಯೊಂದರ ವರದಿಗಳ ಪ್ರಕಾರ ನ.8ರೊಳಗೆ ಫಡ್ನವೀಸ್ ಪ್ರಮಾಣವಚನ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಹುಮತ ಹೊಂದಿದವರಿಗೆ ಅವಕಾಶ ಕೊಡಿ: ಶಿವಸೇನೆ
ಇನ್ನೊಂದು ಕಡೆ ಸಂಜಯ ರಾವುತ್ ನೇತೃತ್ವದ ಶಿವಸೇನೆ ನಿಯೋಗವು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿತು. ‘ಯಾರು ಬಹುಮತ ಹೊಂದಿದ್ದಾರೋ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರಿಗೆ ಕೋರಿದ್ದೇವೆ. ಸರ್ಕಾರ ರಚನೆ ವಿಳಂಬಕ್ಕೆ ನಾವು ಕಾರಣರಲ್ಲ. ನಾವು ಯಾವುದೇ ಅಡ್ಡಿ ಮಾಡುತ್ತಿಲ್ಲ ಹಾಗೂ ರಚನೆಗೆ ಹಿಂದೇಟು ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ’ ಎಂದು ಭೇಟಿ ಬಳಿಕ ರಾವುತ್ ಸುದ್ದಿಗಾರರಿಗೆ ತಿಳಿಸಿದರು.
ಶಿವಸೇನೆ ವಿಭಜನೆ- ಶಾಸಕ ಸುಳಿವು:
ಒಂದು ವೇಳೆ ಬಿಜೆಪಿ ಜತೆ ಸರ್ಕಾರ ರಚನೆಗೆ ಶಿವಸೇನೆ ಮುಂದಾಗದೇ ಹೋದಲ್ಲಿ ಪಕ್ಷವು ಇಬ್ಭಾಗವಾಗಲಿದೆ. ಶಿವಸೇನೆಯ 25 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷೇತರ ಶಾಸಕ ರವಿ ರಾಣಾ ಹೇಳಿದ್ದಾರೆ. ರಾಣಾ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ರಾವುತ್ ಬೇತಾಳ- ಮರಾಠಿ ಪತ್ರಿಕೆ:
ಈ ನಡುವೆ, ‘ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆಯು ಬಿಗಿಪಟ್ಟು ಹಿಡಿಯಲು ಅದರ ಮುಖಂಡ ಸಂಜಯ ರಾವುತ್ ಅವರೇ ಕಾರಣ. ಅವರು ಬಿಜೆಪಿ-ಶಿವಸೇನೆ ಸರ್ಕಾರ ರಚನೆಯಾಗಲು ಬಿಡದೇ ಬೇತಾಳನಂತೆ ವರ್ತಿಸುತ್ತಿದ್ದಾರೆ’ ಎಂದು ಮರಾಠಿ ಪತ್ರಿಕೆ ‘ತರುಣ ಭಾರತ’ದಲ್ಲಿ ಟೀಕಿಸಲಾಗಿದೆ.