Omicron Variant: ಕೋವಿಡ್‌ ನಿಯಮ ಮೀರಿದರೆ ದಂಡ ಗ್ಯಾರಂಟಿ!

By Kannadaprabha NewsFirst Published Nov 28, 2021, 8:46 AM IST
Highlights

*ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘನೆಗೆ 500 ದಂಡ!
*ಯಾವುದೇ ಸೇವೆಗೆ 2 ಡೋಸ್‌ ಲಸಿಕೆ ಪ್ರಮಾಣಪತ್ರ ಕಡ್ಡಾಯ
*ಮಾರ್ಗಸೂಚಿ ಪಾಲನೆಯಲ್ಲಿ ವಿಫಲವಾದ ಕಂಪನಿಗೆ 50 ಸಾವಿರ ರು.

ಮುಂಬೈ(ನ.28): ಲಸಿಕೆಗೂ ಬಗ್ಗದ ಮತ್ತು ತೀವ್ರವಾಗಿ ಹಬ್ಬುವ ಸಾಮರ್ಥ್ಯದ ‘ಒಮಿಕ್ರೋನ್‌’ (Omicron) ರೂಪಾಂತರಿ ತಳಿಯ ಆತಂಕಗಳ ಬೆನ್ನಲ್ಲೇ, ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುವುದಾಗಿ ಮಹಾರಾಷ್ಟ್ರ ಸರ್ಕಾರ (Maharashtra Governemet) ಘೋಷಿಸಿದೆ. ಈ ಕುರಿತಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray) ನೇತೃತ್ವದ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವ ವ್ಯಕ್ತಿಗೆ 500 ರು. ದಂಡ ವಿಧಿಸಲಾಗುತ್ತದೆ ಎಂದು ಘೋಷಿಸಿದೆ. 

ಅಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಸೇವೆ (Public Transport) ಬಳಸಲು ಎರಡೂ ಡೋಸ್‌ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯ. ಮಾಲ್‌ಗಳ ಸಿಬ್ಬಂದಿ, ಖರೀದಿಗೆ ಬರುವ ಗ್ರಾಹಕರು ಸೇರಿದಂತೆ ಇನ್ನಿತರರು ಲಸಿಕೆ ಪ್ರಮಾಣಪತ್ರ ಪಡೆದಿರಲೇಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಯಾರಿಗೆ, ಎಷ್ಟುರು. ದಂಡ?

*ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ನಿಯಮ ಉಲ್ಲಂಘಿಸಿದರೆ 500 ರು. ದಂಡ

*ಸಂಸ್ಥೆಯ ಆವರಣದಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸುವ ವ್ಯಕ್ತಿಗೆ 10000 ರು.

*ಮಾರ್ಗಸೂಚಿ ಪಾಲನೆಯಲ್ಲಿ ವಿಫಲವಾದ ಕಂಪನಿಗೆ 50 ಸಾವಿರ ರು.

*ಖಾಸಗಿ ಟ್ಯಾಕ್ಸಿಗಳು, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಉಲ್ಲಂಘಿಸಿದರೆ 500 ರು.

*ವಾಹನ ಮಾಲೀಕರಿಂದಲೇ ನಿಯಮ ಉಲ್ಲಂಘನೆಯಾದರೆ 10,000 ರು.

ದ. ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಬಂದರೆ ಕಡ್ಡಾಯ ಕ್ವಾರಂಟೈನ್‌!

ಕೋವಿಡ್‌ ಹೊಸ ರೂಪಾಂತರಿ (Covid-19 New Variant) ಕಾಣಿಸಿಕೊಂಡಿರುವ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದಿಂದ (South Africa) ಮುಂಬೈಗೆ ಆಗಮಿಸುವ ಪ್ರಯಾಣಿಕರು ಕ್ವಾರಂಟೈನ್‌ (Quarantine) ಇರುವುದು ಕಡ್ಡಾಯ ಎಂದು ಮುಂಬೈ ಮೇಯರ್‌ ಕಿಶೋರಿ ಪೆಡ್ನೇಕರ್‌ ಶನಿವಾರ ಹೇಳಿದ್ದಾರೆ. ಜೊತೆಗೆ ಲಸಿಕೆ (Vaccine) ಪಡೆಯದ ದೇಶೀ ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಬರುವಾಗ ‘ಆರ್‌ಟಿಪಿಸಿಆರ್‌ ನೆಗೆಟಿವ್‌’ ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.

Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್‌ ಲ್ಯಾಬ್‌ ಇನ್ನೂ ಆರಂಭವೇ ಆಗಿಲ್ಲ

‘ವಿಶ್ವದ ಕೆಲವು ದೇಶಗಳಲ್ಲಿ ಕೋವಿಡ್‌ ಸೋಂಕು ಉಲ್ಬಣವಾಗುತ್ತಿರುವ ಹಾಗೂ ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರು ಕೋವಿಡ್‌ ಪರೀಕ್ಷೆಗೆ ಒಳಗಾಗುವುದು ಮತ್ತು ಕ್ವಾರಂಟೈನ್‌ ಇರುವುದು ಕಡ್ಡಾಯ’ ಎಂದು ಅವರು ಹೇಳಿದ್ದಾರೆ. ಲಸಿಕೆ ಪಡೆಯದೇ ಮಹಾರಾಷ್ಟ್ರಕ್ಕೆ ಆಗಮಿಸುವವವರು 72 ಗಂಟೆಗಳ ಮೊದಲು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವುದನ್ನು ಸಹ ಕಡ್ಡಾಯ ಮಾಡಲಾಗಿದೆ.

ಅತ್ಯಂತ ಎಚ್ಚರಿಕೆ ವಹಿಸಿ: ಪ್ರಧಾನಿ ಮೋದಿ ಸೂಚನೆ

 ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡಲು ಕಾರಣವಾಯಿತೆನ್ನಲಾಗಿರುವ ಡೆಲ್ಟಾವೈರಸ್‌ಗಿಂತಲೂ ಅತ್ಯಂತ ಅಪಾಯಕಾರಿಯಾದ, ವೇಗವಾಗಿ ಹಬ್ಬುವ ಹಾಗೂ ಯಾವುದೇ ಲಸಿಕೆಗೂ ಬಗ್ಗದ ‘ಬೋಟ್ಸ್‌ವಾನಾ’ (ಒಮಿಕ್ರೋನ್‌) ಕೋವಿಡ್‌ ರೂಪಾಂತರಿ ಬಗ್ಗೆ ಭಾರತದಲ್ಲೂ ತಲ್ಲಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಂಜಾಗ್ರತಾ ಕ್ರಮ ಜರುಗಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು. ವಿದೇಶದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಪುನಾರಂಭ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಮಹತ್ವದ ಸೂಚನೆ ನೀಡಿದ್ದಾರೆ.

Covid-19 Variant: ಜಾಗತಿಕ ತಲ್ಲಣ ಸೃಷ್ಟಿಸಿದ ಒಮಿಕ್ರೋನ್‌ : 9 ದೇಶಗಳಿಗೆ ಹಬ್ಬಿದ ಹೊಸ ತಳಿ!

ಇದರ ಬೆನ್ನಲ್ಲೇ, ‘ಒಮಿಕ್ರೋನ್‌’ ಸೇರಿ ವಿವಿಧ ಕೋವಿಡ್‌ ತಳಿಗಳು ತಾಂಡವವಾಡುತ್ತಿರುವ 12 ‘ಹೈರಿಸ್ಕ್‌’ ದೇಶಗಳಿಂದ ಬಂದವರ ಮೇಲೆ ನಿಗಾಗೆ ಕೇಂದ್ರ ನಿರ್ಧರಿಸಿದೆ. ಕಳೆದ 2 ವಾರಗಳ ಅವಧಿಯಲ್ಲಿ ಈ ದೇಶಗಳಿಂದ ಭಾರತಕ್ಕೆ ಆಗಮಿಸಿ ಕೊರೋನಾ ದೃಢಪಟ್ಟವರ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ತೀರ್ಮಾನಿಸಲಾಗಿದೆ. ಈ ಮೂಲಕ ಇವರಲ್ಲಿ ‘ಒಮಿಕ್ರೋನ್‌’ ತಳಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

click me!