Jacqueline Fernandez: ಬೆಂಗಳೂರು ವಂಚಕನ ಜತೆ ಜಾಕ್ವೆಲಿನ್‌ ಕಿಸ್ಸಿಂಗ್‌ ಫೋಟೋ!

By Kannadaprabha News  |  First Published Nov 28, 2021, 6:00 AM IST

* ಆತನ ಜತೆ ಯಾವುದೇ ಸಂಬಂಧ ಇಲ್ಲ ಎಂದಿದ್ದ ನಟಿ

* ಬೆಂಗಳೂರು ವಂಚಕನ ಜತೆ ಜಾಕ್ವೆಲಿನ್‌ ಕಿಸ್ಸಿಂಗ್‌ ಫೋಟೋ

* ಇದರ ಬೆನ್ನಲ್ಲೇ ಫೋಟೋ ಪ್ರತ್ಯಕ್ಷ: ಭಾರಿ ವಿವಾದ


ನವದೆಹಲಿ(ನ.28): ರಾಜಕಾರಣಿಯ ಬಂಧು ಎಂದು ಹೇಳಿಕೊಂಡು ನೂರಾರು ಜನರಿಗೆ ಕೋಟ್ಯಂತರ ರು. ವಂಚನೆ ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ Sukesh Chandrashekhar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ (Bollywood Actress Jacqueline Fernandez) ಆತ್ಮೀಯವಾಗಿರುವ ಫೋಟೋ ಬಿಡುಗಡೆಯಾಗಿದೆ. ಇದು ಭಾರಿ ವಿವಾದ ಹಾಗೂ ಸಂಚಲನಕ್ಕೆ ಕಾರಣವಾಗಿದೆ.ಜಾಕ್ವೆಲಿನ್‌ ಕೆನ್ನೆಯ ಮೇಲೆ ಚುಂಬಿಸಿ ಕನ್ನಡಿ ಸಹಾಯದಿಂದ ಸುಕೇಶ್‌ ಸೆಲ್ಫಿ (Selfie) ತೆಗೆದುಕೊಳ್ಳುವ ಫೋಟೋ ಇದಾಗಿದೆ. ಸುಕೇಶ್‌ ಜತೆ ಯಾವುದೇ ಸಂಬಂಧವಿಲ್ಲ ಎಂದು ನಟಿ ಹೇಳಿಕೆ ನೀಡಿದ ತರುವಾಯ ಈ ಫೋಟೋ ಬಿಡುಗಡೆಯಾಗಿದೆ. ಇದೇ ವರ್ಷದ ಏಪ್ರಿಲ್‌- ಜೂನ್‌ ಸಂದರ್ಭದಲ್ಲಿ ಸುಕೇಶ್‌ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಇದ್ದ. ಆ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಫೋಟೋ ಇದಾಗಿದೆ ಎಂದು ಹೇಳಲಾಗಿದೆ.

ಸುಕೇಶ್‌ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಜಾಕ್ವೆಲಿನ್‌ಗೆ ಸಮನ್ಸ್‌ ನೀಡಿತ್ತು. ಆಕೆ ಜತೆ ಡೇಟಿಂಗ್‌ ನಡೆಸುತ್ತಿದ್ದರು ಎಂದು ಆತನ ಪರ ವಕೀಲರು ಹೇಳಿದ್ದರು. ಆದರೆ ಇದನ್ನು ನಟಿಯ ಪರ ವಕೀಲರು ನಿರಾಕರಿಸಿದ್ದರು.

Tap to resize

Latest Videos

undefined

200 ಕೋಟಿ ಅಕ್ರಮ ಹಣ ವರ್ಗಾವಣೆ: ವಿಚಾರಣೆಗೆ ಹಾಜರಾದ ಜಾಕಿ

ಜೈಲಿಂದಲೇ 200 ಕೋಟಿ ಸುಲಿಗೆ ಮಾಡಿದ ಬೆಂಗಳೂರಿನ ಸುಕೇಶ್‌!

 

ಇತ್ತೀಚೆಗೆ ದೆಹಲಿಯ ದೊಡ್ಡ ಉದ್ಯಮ ಸಮೂಹವೊಂದರ ಮಾಲೀಕರನ್ನು ಸಂಪರ್ಕಿಸಿದ್ದ ಇಬ್ಬರು ಸಹಚರರು, ‘ನಿಮ್ಮ ವಿರುದ್ಧ ಪ್ರಕರಣವೊಂದರಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಅದರಿಂದ ಬಚಾವ್‌ ಮಾಡಲು 50 ಕೋಟಿ ರು. ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಉದ್ಯಮಿ 50 ಕೋಟಿ ನೀಡಿದ್ದರು. ಬಳಿಕ ತಾವು ಮೋಸ ಹೋಗಿದ್ದು ಗೊತ್ತಾಗಿ ಉದ್ಯಮಿ ಕುಟುಂಬ ದೂರು ನೀಡಿತ್ತು.

ತನಿಖೆ ವೇಳೆ ಇದರ ಹಿಂದೆ ಸುಕೇಶ್‌ ಮತ್ತು ಜೈಲಿನ ಹೊರಗೆ ಆತನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಹಚರರಾದ ದೀಪಕ್‌ ರಾಮ್‌ದನಿ ಮತ್ತು ಪ್ರದೀಪ್‌ ರಾಮ್‌ದನಿ ಪಾತ್ರ ಕಂಡುಬಂದಿತ್ತು. ಅವರಿಬ್ಬರನ್ನೂ ಬಂಧಿಸಿ, ಪ್ರಕರಣವನ್ನು ಹೆಚ್ಚಿನ ತನಿಖೆಗೆ ಆರ್ಥಿಕ ಅಪರಾಧ ದಳಕ್ಕೆ ವಹಿಸಲಾಗಿತ್ತು. ಈ ವೇಳೆ ಸುಕೇಶ್‌ ಜೈಲಿನೊಳಗೆ ಇದ್ದುಕೊಂಡೇ ಕನಿಷ್ಠ 190-200 ಕೋಟಿ ರು. ಸುಲಿಗೆ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಕೂಡಾ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಂಚನೆ ಹೇಗೆ?:

ಸುಕೇಶ್‌ ಸೂಚನೆ ಅನ್ವಯ ದೀಪಕ್‌ ಮತ್ತು ಪ್ರದೀಪ್‌, ಉದ್ಯಮಿಗಳು ಅಥವಾ ದೊಡ್ಡ ಕುಳಗಳಿಗೆ ಬಲೆ ಬೀಸುತ್ತಿದ್ದರು. ಪ್ರಕರಣವೊಂದರಲ್ಲಿ ಈಗಾಗಲೇ ನಿಮ್ಮ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಥವಾ ಅರಂಭಿಸಲಿದ್ದಾರೆ ಎಂದು ಬೆದರಿಸುತ್ತಿದ್ದರು. ಜೊತೆಗೆ ತಮಗೆ ದೊಡ್ಡ ರಾಜಕಾರಣಿಗಳು, ಸಿಬಿಐ, ನ್ಯಾಯಾಧಿಶರ ಸಂಪರ್ಕ ಇದೆ. ಪ್ರಕರಣದಿಂದ ನಿಮ್ಮನ್ನು ಬಚಾವ್‌ ಮಾಡುವುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಡೀಲ್‌ ಕುದುರಿಸುತ್ತಿದ್ದರು. ಹಣ ಪಡೆದ ಬಳಿಕ ಸ್ವತಃ ತಾವೇ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ ನಿಮ್ಮನ್ನು ಕೇಸಿಂದ ಮುಕ್ತ ಮಾಡಿರುವುದಾಗಿ ಸುಳ್ಳು ಹೇಳಿ ವಂಚಿಸುತ್ತಿದ್ದರು.

ಯಾರು ಈ ಸುಕೇಶ್‌?

ಬೆಂಗಳೂರು ಮೂಲದ ವಿದ್ಯಾವಂತ ಯುವಕ. ಐಷಾರಾಮಿ ಜೀವನದ ಆಸೆಗೆ ಬಿದ್ದು ಹಲವು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನೂರಾರು ಜನರಿಗೆ ನೂರಾರು ಕೋಟಿ ರು. ವಂಚಿಸಿದ ಆರೋಪ ಈತನ ಮೇಲಿದೆ. ಈ ಪೈಕಿ ಎಐಎಡಿಎಂಕೆ ಪಕ್ಷದ ಚಿಹ್ನೆ ವಿವಾದ ಚುನಾವಣಾ ಆಯೋಗದ ಮೆಟ್ಟಿಲು ಏರಿದ ಸಂದರ್ಭದಲ್ಲಿ, ಚಿಹ್ನೆಯನ್ನು ಶಶಿಕಲಾ ಬಣಕ್ಕೆ ಉಳಿಸಿಕೊಡಲು, ಶಶಿಕಲಾ ಆಪ್ತ ದಿನಕರನ್‌ ಜೊತೆ 50 ಕೋಟಿ ರು. ಡೀಲ್‌ ಕುದುರಿಸಿದ್ದ. ಈ ಪ್ರಕರಣ ಬೆಳಕಿಗೆ ಬಂದು ಪೊಲೀಸರು ದೆಹಲಿಯಲ್ಲಿ ಆತ ಉಳಿದುಕೊಂಡಿದ್ದ ಹೋಟೆಲ್‌ ಮೇಲೆ ದಾಳಿ ನಡೆಸಿ ಬಂದಿಸಿದ್ದರು. ಈ ವೇಳೆ 1.3 ಕೋಟಿ ರು. ನಗದು ಪತ್ತೆಯಾಗಿತ್ತು. ಇದಲ್ಲದೆ ಮತ್ತೊಂದು ಪ್ರಕರಣದಲ್ಲಿ ಸಿಬಿಐ ಅಧಿಕಾರಿಯ ಸೋಗಿನಲ್ಲಿ ಟಿಡಿಪಿ ಸಂಸದ ಸಾಂಬಶಿವ ರಾವ್‌ ಅವರಿಂದ 100 ಕೋಟಿ ರು. ಸುಲಿಗೆಗೆ ವಂಚಿಸಲು ಯತ್ನಿಸಿದ್ದ.

click me!