ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

By Web Desk  |  First Published Nov 20, 2019, 9:57 AM IST

ಕಾಂಗ್ರೆಸ್‌, ಎನ್‌ಸಿಪಿಯ ತಲಾ ಒಬ್ಬರು ಉಪಮುಖ್ಯಮಂತ್ರಿ | ಪೃಥ್ವೀರಾಜ್‌ ಚವಾಣ್‌ಗೆ ಸ್ಪೀಕರ್‌ ಹುದ್ದೆ | ಶಿವಸೇನೆಗೆ 15, ಎನ್‌ಸಿಪಿಗೆ 14, ಕಾಂಗ್ರೆಸ್‌ಗೆ 13 ಸಚಿವಗಿರಿ |  ಹಿಂಬಾಗಿಲ ಮಾತುಕತೆಯಲ್ಲಿ ಸಂಧಾನ ಸೂತ್ರ


ಮುಂಬೈ (ನ. 20): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ನಡುವೆ ಮೈತ್ರಿಯ ಸ್ಪಷ್ಟಸುಳಿವು ಹೊರನೋಟಕ್ಕೆ ಕಂಡುಬರದೇ ಇದ್ದರೂ, ಒಳಗೊಳಗೇ ಮೂರೂ ಪಕ್ಷಗಳು ಈ ನಿಟ್ಟಿನಲ್ಲಿ ಮಹತ್ವದ ಮುನ್ನಡೆ ಸಾಧಿಸಿವೆ ಎಂದು ಮೂಲಗಳು ತಿಳಿಸಿವೆ.

ಸೋಮವಾರವಷ್ಟೇ ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಭೇಟಿ ಮಾಡಿದ್ದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಸರ್ಕಾರ ರಚನೆ ಬಗ್ಗೆ ಸೋನಿಯಾ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಾತುಕತೆ ಇನ್ನೂ ಮುಂದುವರಿಯಲಿವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರಾದರೂ, ಈ ಭೇಟಿ ವೇಳೆ ಮಹತ್ವದ ರಾಜಕೀಯ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಮಹಾರಾಷ್ಟ್ರ ಮೈತ್ರಿ ಅಯೋಮಯ: NCP, ಕಾಂಗ್ರೆಸ್ ನಿರ್ಧಾರ ಇಲ್ಲ!

ಈಗಾಗಲೇ ಪ್ರಸ್ತಾವಿತ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸುವಲ್ಲಿ ಯಶಸ್ವಿಯಾಗಿರುವ ಮೂರೂ ಪಕ್ಷಗಳು, ಹೊಸ ಸರ್ಕಾರದಲ್ಲಿ 5 ವರ್ಷಗಳ ಅವಧಿಗೂ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡುವ ಒಮ್ಮತಕ್ಕೆ ಬಂದಿವೆ ಎಂದು ಮೂಲಗಳು ಹೇಳಿವೆ.

ಉದ್ಧವ್‌ ಬದಲು ಶಿವಸೇನೆಯ ಬೇರಾರನ್ನೂ (ಏಕನಾಥ್‌ ಶಿಂಧೆ, ಸುಭಾಷ್‌ ದೇಸಾಯಿ ಅಥವಾ ಆದಿತ್ಯ ಠಾಕ್ರೆ) ಮುಖ್ಯಮಂತ್ರಿ ಹುದ್ದೆಗೆ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಶರದ್‌ ಪವಾರ್‌ ಇಲ್ಲ. ಹೀಗಾಗಿ ಉದ್ಧವ್‌ ಪರ ಒಲವನ್ನು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಹೊಂದಿದ್ದು, ಅವರನ್ನೇ ಪೂರ್ಣಾವಧಿಗೆ ಸಿಎಂ ಮಾಡುವ ಒಲವು ವ್ಯಕ್ತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.

2 ಡಿಸಿಎಂ ಹುದ್ದೆ:

ಇನ್ನು 2 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಒಂದು ಹುದ್ದೆಯನ್ನು ಎನ್‌ಸಿಪಿ ಹಾಗೂ ಒಂದು ಹುದ್ದೆಯನ್ನು ಕಾಂಗ್ರೆಸ್‌ ಪಡೆಯಲಿವೆ. ಶಿವಸೇನೆಯ 15, ಎನ್‌ಸಿಪಿಯ 14 ಹಾಗೂ ಕಾಂಗ್ರೆಸ್‌ನ 13 ಮಂದಿಗೆ ಮಂತ್ರಿಗಿರಿ ನೀಡುವ ತೀರ್ಮಾನಕ್ಕೂ ಬರಲಾಗಿದೆ ಎಂದು ಮೂಲಗಳು ಹೇಳಿವೆ. ಅಚ್ಚರಿಯೆಂದರೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಪೃಥ್ವಿರಾಜ್‌ ಚವಾಣ್‌ಗೆ ವಿಧಾನಸಭಾಧ್ಯಕ್ಷ ಹುದ್ದೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಾ ಬಿಕ್ಕಟ್ಟಿನ ನಡುವೆಯೂ ಎನ್ ಸಿಪಿ ಹಾಡಿ ಹೊಗಳಿದ ಮೋದಿ!

ಸಭೆ ಮುಂದಕ್ಕೆ:

ಸರ್ಕಾರ ರಚನೆ ಕುರಿತು ಚರ್ಚಿಸಲು ಮಂಗಳವಾರ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮುಖಂಡರ ಸಭೆ ನಡೆಯಬೇಕಿತ್ತು. ಆದರೆ ಅದು ಬುಧವಾರಕ್ಕೆ ಮುಂದೂಡಿಕೆಯಾಗಿದೆ. ‘ಇಂದಿರಾ ಗಾಂಧಿ ಜನ್ಮದಿನ ಸಮಾರಂಭಗಳಲ್ಲಿ ಕಾಂಗ್ರೆಸ್‌ ಮುಖಂಡರು ಕಾರ್ಯತತ್ಪರರಾಗಿದ್ದರು. ಹೀಗಾಗಿ ಬುಧವಾರ ಸಭೆ ಮಾಡೋಣ ಎಂದು ಅವರೇ ಕೋರಿದರು’ ಎಂದು ಎನ್‌ಸಿಪಿ ಮುಖಂಡ ನವಾಬ್‌ ಮಲಿಕ್‌ ಹೇಳಿದರು.

click me!